Site icon Vistara News

Actor Darshan: ಘಟಾನುಘಟಿಗಳ ಕಲಾವಿದರ ಜತೆ ʻದರ್ಶನ್‌ʼ ಕಿರಿಕ್‌ ಒಂದೆರಡಲ್ಲ; ದೂರಾದವರೆಷ್ಟು ಮಂದಿ?

Actor Darshan ended their friendship sandalwood actors

ಬೆಂಗಳೂರು: ದರ್ಶನ್‌ (Actor Darshan) ಅಭಿನಯದ ಕಾಟೇರ ಸಿನಿಮಾ ರಿಲೀಸ್‌ ವೇಳೆ ಅನೇಕ ಹಿರಿಯ ಕಲಾವಿದರು ದರ್ಶನ್‌ ಅವರ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದ್ದರು. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ದರ್ಶನ್ ಪರ ದೊಡ್ಡ ಸ್ನೇಹ ವರ್ಗವೇ ಇತ್ತು. ಸ್ಯಾಂಡಲ್‌ವುಡ್‌ನ ನಟರೊಂದಿಗೆ, ನಿರ್ದೇಶಕರೊಂದಿಗೆ ದರ್ಶನ್ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಆದರೆ ಈಗ ಅನೇಕ ಕಲಾವಿದರು ದರ್ಶನ್‌ ಜತೆ ಸ್ನೇಹಿತರಾಗಿಲ್ಲ. ದೂರವಾಗಿ ಉಳಿದ್ದಿದ್ದಾರೆ. ಕಾರಣ ಏನು? ಆ ಕಲಾವಿದರು ಯಾರು?

ಅರ್ಜುನ್ ಸರ್ಜಾ- ಧ್ರುವ ಸರ್ಜಾ

‘ಪ್ರೇಮಬರಹ’ ಸಿನಿಮಾ ರಿಲೀಸ್‌ಗೂ ಮೊದಲು ದರ್ಶನ್ ಹಾಗೂ ಸರ್ಜಾ ಕುಟುಂಬದ ನಡುವೆ ಆತ್ಮೀಯತೆ ಇತ್ತು. ಆದರೆ, ರಿಲೀಸ್ ಬಳಿಕ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ವ್ಯವಹಾರದಲ್ಲಿ ಮೋಸ ಮಾಡಿದ್ದರು. ಇದನ್ನು ಕೇಳುವುದಕ್ಕೆ ದರ್ಶನ್ ಬಳಿ ಅರ್ಜುನ್ ಸರ್ಜಾ ಹೋಗಿದ್ದರು. ಆ ವೇಳೆ ದರ್ಶನ್ ಅವಮಾನ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಧ್ರುವ ಅವರು ದರ್ಶನ್‌ ಅವರನ್ನು ದೂರ ಇಟ್ಟಿದ್ದರು ಎನ್ನಲಾಗಿತ್ತು.

ಕಾವೇರಿ ಹೋರಾಟದ ಸಂದರ್ಭದಲ್ಲಿ ನಟ ದರ್ಶನ್‌ (Actor Darshan) ಹಾಗೂ ತಮ್ಮ ನಡುವೆ ಎದ್ದು ತೋರಿದ ಮನಸ್ತಾಪದ ವಿಚಾರದಲ್ಲಿ ಧ್ರುವ ಸರ್ಜಾ (Dhruva Sarja) ತಮ್ಮ ಬರ್ತ್‌ಡೇ ಸಂಭ್ರಮದ ಸಂದರ್ಭದಲ್ಲಿ ಮಾತನಾಡಿದ್ದರು. ದರ್ಶನ್ ಅವರು ಹಿರಿಯ ನಟ, ಸೀನಿಯರ್ ಕೂಡ. ದರ್ಶನ್ ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಗೆ ಅದೇ ಮರ್ಯಾದೆ ಇರುತ್ತೆ. ಅದರೆ ಅವರ ಬಗ್ಗೆ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕುʼ ಎಂದಿದ್ದರು. ʼನನಗೂ ಸ್ವಾಭಿಮಾನ ಇದೆ, ನಾನು ಅವರೊಟ್ಟಿಗೆ ಈ ವಿಚಾರವಾಗಿ ಮಾತನಾಡುತ್ತೇನೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ಹೇಳುವುದು ಇಷ್ಟೇ, ನನ್ನಲ್ಲಿರುವ ಕೆಲವು ಗೊಂದಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ನಾಟಕೀಯವಾಗಿ ಮನಸಲ್ಲೊಂದು ಹೊರಗೊಂದು ಥರ ಇರುವುದು ನನಗೆ ಬರುವುದಿಲ್ಲʼ ಎಂದಿದ್ದರು.

ಇದನ್ನೂ ಓದಿ: Actor Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಪವಿತ್ರಾ ಗೌಡ ಮಾಜಿ ಪತಿಯಿಂದ ಕೇಸ್!

ಸೃಜನ್ ಲೋಕೇಶ್-ರವಿಚೇತನ್

ಕೋವಿಡ್ ಬಳಿಕ ದರ್ಶನ್ ಜೊತೆಗಿದ್ದ ಸಂಗಡಿಗರು ಬದಲಾಗಿದ್ದರು. ಅವರೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತಿದ್ದವರನ್ನೇ ದೂರ ಇಡುವುದಕ್ಕೆ ಶುರು ಮಾಡಿದ್ದರು. ಹೀಗಾಗಿ ರವಿ ಚೇತನ್ ಬೇಸರ ಆಗಿತ್ತು. ಸೃಜನ್‌ ಲೋಕೇಶ್‌ ಕೂಡ ಇದೇ ಕಾರಣಕ್ಕೆ ದರ್ಶನ್‌ರಿಂದ ದೂರ ಆಗಿದ್ದರು ಎನ್ನಲಾಗಿದೆ.

ಸುದೀಪ್‌-ದರ್ಶನ್‌

ಒಂದು ಕಾಲದಲ್ಲಿ ದರ್ಶನ್‌ ಹಾಗೂ ಸುದೀಪ್‌ ಒಳ್ಳೆಯ ಸ್ನೇಹಿತರಾಗಿದ್ದರು ಒಂದು ದಿನ ಇದ್ದಕ್ಕಿದಂತೆ ದರ್ಶನ್ ಟ್ವೀಟ್ ಮಾಡಿ ಇನ್ನು ಮುಂದೆ ನಾನು ಸುದೀಪ್ ಸ್ನೇಹಿತರಲ್ಲ ಎಂದು ಘೋಷಿಸಿಬಿಟ್ಟರು. ಬಳಿಕ ಇಬ್ಬರೂ ಎಂದೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಪರಸ್ಪರ ಅಂತರ ಕಾಯ್ದುಕೊಂಡೇ ಬಂದಿದ್ದರು.ಸುದೀಪ್ ಸಾಕಷ್ಟು ಬಾರಿ ದರ್ಶನ್ ಕುರಿತು ಮಾತನಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ದರ್ಶನ್ ಕುರಿತಾದ ವಿಚಾರಗಳಿಗೆ ಪ್ರತಿಕ್ರಿಯಿಸಿದ್ದರು.

ಇತ್ತೀಚೆಗೆ ಸುದೀಪ್ ಮತ್ತು ದರ್ಶನ್ ಒಂದೇ ವೇದಿಕೆ ಮೇಲೆ 6 ವರ್ಷದ ನಂತರ ಕಾಣಿಸಿಕೊಂಡಿದ್ದರು. ಈ ಕುರಿತು ತಮ್ಮ ಹುಟ್ಟುಹಬ್ಬದಂದು ಸುದೀಪ್‌ ರಿಯಾಕ್ಟ್ ಮಾಡಿದ್ದರು. ದರ್ಶನ್ ಕುರಿತು ಖುಷಿಯಿಂದಲೇ ಮಾತನಾಡಿದ್ದರು. ಮಾಧ್ಯಮಗಳಲ್ಲಿ ಈ ವಿಷಯ ಸುದ್ದಿ ಆದಾಗ ಖುಷಿ ತಂದಿತ್ತು. ದರ್ಶನ್ ದೊಡ್ಡ ನಟ. ನಾವು ಕಿತ್ತಾಡಿಕೊಂಡಿಲ್ಲ. ನನಗೆ ದರ್ಶನ್ ಮೇಲೆ ಕೋಪವಿಲ್ಲ. ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನುವುದು ಕಲ್ಪನೆ ಅಷ್ಟೇ. ಗೋಡೆ ಮುರಿಬೇಕು, ಆದರೆ ಕಲ್ಪನೆ ಇರಬಾರದು. ಇಬ್ಬರೂ ಒಂದೇ ಪಾರ್ಟಿಯಲ್ಲಿ ಭೇಟಿ ಆಗಿದ್ದು ಖುಷಿ ತಂದಿದೆ. ನಂಗೂ ಕೆಲವು ಪ್ರಶ್ನೆಗಳು ಇವೆ. ದರ್ಶನ್‌ಗೂ ಇವೆ. ಇಬ್ಬರೂ ಮುಖಾಮುಖಿ ಆದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗೋದು. ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ ಎಂದು ಸುದೀಪ್‌ ಹೇಳಿದ್ದರು. ಇದೀಗ ಮತ್ತೆ ದರ್ಶನ್‌ ಬಗ್ಗೆ ಸುದೀಪ್‌ ಮಾತನಾಡಿದ್ದರು.

ಜಗ್ಗೇಶ್- ದರ್ಶನ್

ತೋತಾಪುರಿ’ ಸಿನಿಮಾ ಚಿತ್ರೀಕರಣ ಸೆಟ್‌ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಜಗ್ಗೇಶ್ ವಿರುದ್ಧ ಧಿಕ್ಕಾರ ಕೂಗಿದ್ದು ವಿವಾದ ಸೃಷ್ಟಿಸಿತ್ತು. ದರ್ಶನ್ ಹುಡುಗರ ಬಗ್ಗೆ ನಟ ಜಗ್ಗೇಶ್ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೊ ಕ್ಲಿಪ್ ವೈರಲ್ ಆಗಿ ಭಾರೀ ಸುದ್ದಿ ಆಗಿತ್ತು. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಜಗ್ಗೇಶ್ ಅವರಲ್ಲಿ ಪಟ್ಟು ಹಿಡಿದಿದ್ದರು. ಸಂದರ್ಶನವೊಂದರಲ್ಲಿ ಈ ಘಟನೆ ಬಗ್ಗೆ ಜಗ್ಗೇಶ್‌ಗೆ ಸ್ವತಃ ದರ್ಶನ್ ಕ್ಷಮೆ ಕೇಳಿದ್ದರು.

ಇನ್​ಸ್ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್​ರವರೊಂದಿಗೆ ನಟ ಜಗ್ಗೇಶ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಅಭಿಮಾನಿಗಳ ಬಗ್ಗೆ ಮಾತನಾಡುವ ವೇಳೆ ನನ್ನ ಬಳಿ ಇರುವವರೆಲ್ಲರೂ ತುಂಬಾ ಒಳ್ಳೆಯವರು. ಆದರೆ ದರ್ಶನ್ ಥರ, ಅವರ ಥರ ತಲೆ ಮಾಂಸ ಕಳಿಸಿ ಅಣ್ಣಾ, ನೂರು ಕುರಿ ಕಳಿಸಿ ಅಣ್ಣಾ ಎನ್ನುವವರು ಯಾರೂ ನಮ್ಮ ಬಳಿ ಇಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಿಟ್ಟಿಗೆದ್ದ ದರ್ಶನ್ ಅಭಿಮಾನಿಗಳು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ದರು.

ಉಮಾಪತಿ-ಸಂದೇಶ್ ನಾಗರಾಜ್

ಇನ್ನು ದರ್ಶನ್ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದ ನಿರ್ಮಾಪಕರಲ್ಲಿ ಉಮಾಪತಿ ಹಾಗೂ ಸಂದೇಶ್ ನಾಗರಾಜ್ ಪ್ರಮುಖರು. ಆದರೆ, ಸಂದೇಶ್ ನಾಗರಾಜ್ ಹೋಟೆಲ್‌ನ ಸಿಬ್ಬಂದಿ ಜೊತೆ ಗಲಾಟೆ ಮಾಡಿಕೊಂಡಿದ್ದರು. ಹೀಗಾಗಿ ದರ್ಶನ್ ಹಾಗೂ ಸಂದೇಶ್ ನಾಗರಾಜ್ ದೂರ ಆಗಿದ್ದರು.

ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್‌ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ?ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್‌ ಖಡಕ್ ವಾರ್ನಿಂಗ್ ಕೊಟ್ಟಿದ್ದರು.ದರ್ಶನ್‌ ಅರೆಸ್ಟ್‌ (Actor Darshan) ಆದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಅವರು ದರ್ಶನ್‌ ಕುರಿತಾಗಿ ಸಾಕಷ್ಟು ಹೇಳಿಕೆ ಜತೆಗೆ ಪೋಸ್ಟ್‌ ಕೂಡ ಮಾಡಿದ್ದರು. ʻನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆʼಎಂದು ದರ್ಶನ್‌ ಕುರಿತಾಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.

Exit mobile version