Site icon Vistara News

Actor Darshan: ನನ್ನ ಗುರು ದರ್ಶನ್ ಈ ಕೃತ್ಯ ಎಸಗಿದ್ದಾರೆಂದರೆ ನಂಬಲಾಗುತ್ತಿಲ್ಲ ಎಂದ ರಚಿತಾ ರಾಮ್!

Actor Darshan

Actor Darshan

ಬೆಂಗಳೂರು:  ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka Swamy Murder) ನಟ ದರ್ಶನ್‌ (Actor Darshan) ಪೊಲೀಸ್‌ ವಿಚಾರಣೆ ಎದುರಿಸುತ್ತಿದ್ದು, ಸೆಲೆಬ್ರಿಟಿಗಳೂ ಸೇರಿದಂತೆ ಹಲವರು ಅವರ ಪರ-ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ ನಟಿ, ದರ್ಶನ್‌ ಅವರ ʼಬುಲ್‌ಬುಲ್‌ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಚಿತಾ ರಾಮ್‌ (Rachita Ram) ಸೋಷಿಯಲ್‌ ಮೀಡಿಯಾದಲ್ಲಿ ಘಟನೆ ಬಗ್ಗೆ ತಮ್ಮ ಆಘಾತ ವ್ಯಕ್ತಪಡಿಸಿದ್ದಾರೆ.

ʼʼನಮಸ್ಕಾರʼʼ ಎಂದು ತಮ್ಮ ನೋಟ್‌ ಅನ್ನು ಆರಂಭಿಸಿರುವ ಅವರು ʼʼಇದನ್ನು ನಾನು ನಟಿಯಾಗಿ ಅಲ್ಲ, ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆʼʼ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ʼʼಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು. ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭವಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆʼʼ ಎಂದು ಹೇಳಿದ್ದಾರೆ.

ಮುಂದುವರಿದು, ʼʼನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್‌ ಸರ್‌ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್‌ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆʼʼ ಎಂದು ರಚಿತಾ ರಾಮ್‌ ಬರೆದುಕೊಂಡಿದ್ದಾರೆ.

ರಚಿತಾ ರಾಮ್‌ ಮತ್ತು ದರ್ಶನ್‌ ʼಬುಲ್‌ಬುಲ್‌ʼ, ʼಅಂಬರೀಷʼ, ʼಕ್ರಾಂತಿʼ ಮುಂತಾದ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. 2013ರಲ್ಲಿ ತೆರೆಕಂಡ ʼಬುಲ್‌ಬುಲ್‌ʼ ಚಿತ್ರದ ಮೂಲಕ ರಚಿತಾ ರಾಮ್‌ ಸಿನಿರಂಗಕ್ಕೆ ಪರಿಚಿತರಾಗಿದ್ದರು.

ರಮ್ಯಾ ಹೇಳಿದ್ದೇನು?

ಈ ಹಿಂದೆ ಪ್ರಕರಣದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದ ನಟಿ ರಮ್ಯಾ,  “ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಎಂದು ಹೇಳಿದ್ದರು. “ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಉದ್ದೇಶದಿಂದಾಗಿಯೇ ಬ್ಲಾಕ್‌ ಎಂಬ ಆಯ್ಕೆಯನ್ನು ನೀಡಲಾಗಿದೆ. ಅತಿರೇಕದ ಟ್ರೋಲ್‌ ಮಾಡಿದಾಗ ನೀವು ದೂರು ನೀಡಬಹುದು. ಅತಿ ಕೆಟ್ಟ ಭಾಷೆಯನ್ನು ಬಳಸಿ ನನ್ನ ಬಗ್ಗೆಯೂ ಟ್ರೋಲ್‌ ಮಾಡಿದ್ದಾರೆ. ಬೇರೆ ನಟರ ಬಗ್ಗೆಯೂ ಟ್ರೋಲ್‌ ಮಾಡಿದ್ದಾರೆ. ಟ್ರೋಲ್‌ ಮಾಡುವವರು ಬೇರೆಯವರ ಹೆಂಡತಿಯರು ಹಾಗೂ ಮಕ್ಕಳನ್ನೂ ಬಿಟ್ಟಿಲ್ಲ. ಇಂತಹ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ನಾನೇ ಒಂದಷ್ಟು ಟ್ರೋಲಿಗರ ವಿರುದ್ಧ ಕೇಸ್‌ ದಾಖಲಿಸಿದ್ದೇನೆ. ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಇವರು ಸಾಮಾಜಿಕ ಜಾಲತಾಣದಲ್ಲಿ ಹೀಗೇಕೆ ಸಮಯ ಹಾಳು ಮಾಡುತ್ತಿದ್ದಾರೆ? ಅವರ ಭವಿಷ್ಯದ ಮೇಲೆಯೇ ಏಕೆ ಕಲ್ಲು ಹಾಕೊಳ್ಳುತ್ತಿದ್ದಾರೆ ಎಂಬುದಾಗಿ ಅನಿಸಿದ್ದಿದೆ” ಎಂದು ರಮ್ಯಾ ಇನ್‌ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದರು.

“ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿಗಿಂತ ಯಾರು ದೊಡ್ಡವರಲ್ಲ. ಹಾಗಾಗಿ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ನೀವು ಯಾರನ್ನೋ ಕೊಲ್ಲಬಾರದು. ನೀವು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದೇ ಆದರೆ, ಒಂದು ದೂರು ದಾಖಲಿಸಿ ಅಷ್ಟೆ. ಹಾಗೆಯೇ, ಥ್ಯಾಂಕ್‌ಲೆಸ್‌ ಜಾಬ್‌ ಮಾಡುತ್ತಿರುವ ಪೊಲೀಸರ ಅವಿರತ ಶ್ರಮವನ್ನೂ ನಾವು ಸ್ಮರಿಸಬೇಕಿದೆ ಹಾಗೆಯೇ, ಯಾವುದೇ ರಾಜಕೀಯ ಒತ್ತಡಕ್ಕೆ ಸಿಲುಕದೆ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ರಮ್ಯಾ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಜಸ್ಟಿಸ್‌ ಫಾರ್‌ ರೇಣುಕಾಸ್ವಾಮಿ, ದರ್ಶನ್‌, ಯಡಿಯೂರಪ್ಪ ಹಾಗೂ ಪ್ರಜ್ವಲ್‌ ರೇವಣ್ಣ ಎಂಬ ಹ್ಯಾಶ್‌ಟ್ಯಾಗ್‌ ಅನ್ನೂ ಬಳಸಿದ್ದರು.

ಇದನ್ನೂ ಓದಿ: Actor Darshan: ದಾನ ಧರ್ಮಗಳೇ ದರ್ಶನ್‌ರನ್ನ ಕಾಪಾಡುತ್ತೆ ಎಂದ ʻನಾಗಕನ್ನಿಕೆʼ ಸೀರಿಯಲ್‌ ನಟಿ!

Exit mobile version