ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ವಿಜಯಲಕ್ಷ್ಮಿ ಆಪ್ತೆ ಹಾಗೂ ನಿರ್ಮಾಪಕಿ ಲತಾ ಜೈಪ್ರಕಾಶ್ ಕೂಡ ದರ್ಶನ್ ಅವರ ಬಗ್ಗೆ ಮಾತನಾಡಿದ್ದು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ʻʻನನಗೆ ದರ್ಶನ್ ಅಣ್ಣ ಅಷ್ಟು ಆತ್ಮೀಯರು ಅಲ್ಲ. ಆದರೆ ನನ್ನ ತಮ್ಮನಿಗೆ ಕ್ಲೋಸ್. ಮತ್ತೆ ಮನೆ ಮಂದಿ ತರವೇ ಇದ್ದಾರೆ. ನಮ್ಮ ಮನೆಯಲ್ಲಿ ಕಲಾವಿದರಿಗೆ ಪ್ರೋತಾಹ ಕೂಡ ಕೊಡುತ್ತೇವೆ. ಅದು ಅಲ್ಲದೇ ಅವರು ದೇವರ ಭಕ್ತರಾಗಿರುವುದರಿಂದ ಈ ರೀತಿ ಘಟನೆ ಎದುರಿಸುತ್ತಿದ್ದಾರೆ ಅಂದ್ರೆ ಆಶ್ಚರ್ಯವಾಗುತ್ತದೆ. ಹೆಣ್ಣು ಮಕ್ಕಳನ್ನು ಗೌರವಿಸುವ ರೀತಿ, ಮಾತನಾಡಿಸುವ ರೀತಿ ದರ್ಶನ್ ಮುಗ್ಧ ಮನಸ್ಸಿಗೆ ಮಾತ್ರ ಇರುವುದು. ಜೈಲಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊರ ಬರುವಾಗ ಉತ್ತಮ ಸ್ಟಾರ್ ಆಗಿ ಹೊರ ಬರಲು ಅವರ ಪತ್ನಿ ವಿಜಯಲಕ್ಷ್ಮಿನೇ ಕಾರಣ. ತಪ್ಪು ಮಾಡುವುದು ಸಹಜ. ಆದರೆ ಜೀವ ಮಾತ್ರ ವಾಪಸ್ಸು ಬರಲ್ಲ. ಆದರೆ ಇದೀಗ ದರ್ಶನ್ ಅವರನ್ನು ಕ್ಷಮಿಸಬೇಕು ಅಂತಲ್ಲ. ಅವರಿಗೆ ಅದು ಪ್ರಾಯಶ್ಚಿತ ಆಗಬೇಕು. ಕೋರ್ಟ್‌ನಿಂದ ಏನು ತೀರ್ಪು ಬರುತ್ತೋ ಆರೋಪ ಮುಕ್ತ ಬರಲಿ ಎಂದು ಪ್ರಾರ್ಥನಿಸುತ್ತೇನೆ. ದರ್ಶನ್ ಬಂಡಿಮಹಾಕಾಳಿ ದರ್ಶನ ಪಡೆದು ತಡೆ ಹೊಡೆಸಿಕೊಂಡು ಹೋಗುತ್ತಿದ್ದರು. ಅಲ್ಲದೆ ದೇವಿ ಮುಂದೆ ನಿಂತು ವಿಜಯಲಕ್ಷ್ಮಿ ಪ್ರಾರ್ಥನೆ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋ ಎರಡು ಮೂರು ತಿಂಗಳ ಹಳೆ ಫೋಟೋʼʼ ಎಂದು ಲತಾ ಜೈಪ್ರಕಾಶ್ ಸ್ಪಷ್ಟನೆ ಕೊಟ್ಟರು.
ಇದನ್ನೂ ಓದಿ: Actor Darshan: ವಿಗ್ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!
ʻʻವಿಜಯಲಕ್ಷ್ಮಿ ಅವರು ತುಂಬ ಓಡಾಡುತ್ತಿದ್ದಾರೆ. ಇಬ್ಬರೂ ದೈವಭಕ್ತರು. ಏನೋ ಒಂದು ಗ್ರಹಚಾರ. ದರ್ಶನ್ ಅಣ್ಣ ದೇವಸ್ಥಾನಕ್ಕೆ ಬರುತ್ತಿದ್ದರು. ಆದರೆ ಅವರು ಜನ ಇದ್ದಾಗ ದೇವಸ್ಥಾನಕ್ಕೆ ಬರುತ್ತಿರಲಿಲ್ಲ. ದೇವಸ್ಥಾನಕ್ಕೆ ಬರಬೇಕು ಅನಿಸಿದಾಗ ಮಿಡ್ ನೈಟ್ ಆದರೂ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದರು. ಈ ಸಮಸ್ಯೆಯಿಂದ ದರ್ಶನ್ ಅಣ್ಣ ಬೇಗ ಹೊರಬರಲಿ. ವಿಜಯಲಕ್ಷ್ಮಿ ಅತ್ತಿಗೆ ಕೂಡ ಮನೆ ದೇವರು ಮುನೇಶ್ವರನಿಗೆ ಹರಕೆ ಕಟ್ಟಿಕೊಂಡಿದ್ದಾರೆʼʼ ಎಂದು ಬಂಡೆ ಮಹಾಕಾಳಮ್ಮ ದೇವಸ್ಥಾನದ ಟ್ರಸ್ಟಿ ಲತಾ ಜೈಪ್ರಕಾಶ್ ಹೇಳಿದರು.
ʻʻದರ್ಶನ್ ಅಣ್ಣ ಜೈಲು ಸೇರಿದಾಗಿನಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಅವರ ಹೋರಾಟ ಹಾಗೂ ಓಡಾಟ ಜಾಸ್ತಿ ಆಗಿದೆ. ಇದರಿಂದಾಗಿ ವಿಜಯಲಕ್ಷ್ಮಿ ಅವರು ಪ್ರತೀ ಬಾರಿ ಆಷಾಢದಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದವರು ಈ ಬಾರಿ ಬಂದಿಲ್ಲ. ದೇವಸ್ಥಾನದಲ್ಲಿ ಪ್ರತೀ ಆಷಾಢದಲ್ಲೂ ಅತ್ತಿಗೆ ನನಗೆ ಸಿಗುತ್ತಿದ್ದರು.ನನಗೆ ಸುಮಾರು ಹತ್ತು ವರ್ಷದಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಪರಿಚಯವಿದೆ. ದರ್ಶನ್ ಅಣ್ಣ ‘ಅಂಬರೀಶ್’ ಸಿನಿಮಾ ಮೂಲಕ ಪರಿಚಯವಾಗಿ ನನ್ನ ತಮ್ಮನಿಗೂ ಕ್ಲೋಸ್ ಆಗಿದ್ದರು. ಅತ್ತಿಗೆನೇ ಅಣ್ಣನಿಗೆ ಬಲ ಆಗಿದ್ದಾರೆʼʼಎಂದರು.