Site icon Vistara News

Actor Darshan: ಇಂದು ನ್ಯಾಯಾಲಯಕ್ಕೆ ಹಾಜರಾಗ್ತಿಲ್ಲ ದರ್ಶನ್ &ಟೀಂ; ಕಾರಣವೇನು?

Actor Darshan Will Attend The Court Hearing From Online

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್‌ (Actor Darshan) ಅವರು ನ್ಯಾಯಾಂಗ ಬಂಧನಲ್ಲಿದ್ದಾರೆ. ಕೊಲೆ ಮಾಡಿದ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಸದ್ಯ ಈ ಪ್ರಕರಣದಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿದೆ.ಇಂದು (ಜುಲೈ 4) ಎಲ್ಲರ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ, ದರ್ಶನ್ ಹಾಗೂ ಅವರ ಟೀಂ ಕೋರ್ಟ್​ಗೆ ಹಾಜರಾಗಬೇಕಿತ್ತು. ಆದರೆ, ಇಂದು ದರ್ಶನ್ ಅವರು ನೇರವಾಗಿ ಕೋರ್ಟ್​ಗೆ ಬರುತ್ತಿಲ್ಲ, ಬದಲಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಲಿದ್ದಾರೆ. ಪೊಲೀಸ್ ಕಸ್ಟಡಿ ಅಗತ್ಯವಿರದ ಹಿನ್ನಲೆಯಲ್ಲಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪೊಲೀಸರು ಚಾರ್ಚ್ ಶೀಟ್‌ ಸಲ್ಲಿಸಿದ ಬಳಿಕ ಜಾಮೀನು ಅರ್ಜಿಗೆ ಮನವಿ ಮಾಡುತ್ತಾರೆ. ಪೊಲೀಸರು ಚಾರ್ಚ್ ಶೀಟ್ ನಲ್ಲಿ ಯಾವೆಲ್ಲಾ ಅಂಶಗಳನ್ನ ಉಲ್ಲೇಖ ಮಾಡುತ್ತಾರೋ ಆ ಅಂಶಗಳ ಮೇಲೆ ದರ್ಶನ್ ಅರ್ಜಿ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಆಗುವವರೆಗೂ ಕಾಯುವ ತಂತ್ರಕ್ಕೆ ವಕೀಲರು ಮೊರೆ ಹೋಗಿದ್ದಾರೆ. 90 ದಿನಗಳಲ್ಲಿ ಚಾರ್ಚ್ ಶೀಟ್ ಸಲ್ಲಿಸಲು ಪೊಲೀಸರಿಗೆ ಅವಕಾಶವಿದೆ. ಇನ್ನು ಹೆಚ್ಚು ಕಮ್ಮಿ ಎರಡು ತಿಂಗಳು ಸಮಯ ಇರುವ ಕಾರಣ. ಅಷ್ಟರ ಒಳಗೆ ಚಾರ್ಚ್ ಶೀಟ್ ಸಲ್ಲಿಸಲಿದ್ದಾರೆ ಕಾಮಾಕ್ಷಿಪಾಳ್ಯ ಪೊಲೀಸರು. ಅಲ್ಲಿಯವರೆಗೂ ನಟ ಹಾಗು ಆತನ ಗ್ಯಾಂಗ್‌ಗೆ ನ್ಯಾಯಾಂಗ ಬಂಧನವೇ ಗಟ್ಟಿ. ಸದ್ಯ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಜೈಲು ಸಿಬ್ಬಂಧಿಗಳು ಹಾಜರು ಪಡಿಸಲಿದ್ದಾರೆ.

ಪವಿತ್ರಾ ಗೌಡ ಪರ ವಕೀಲರು ಮಾಹಿತಿ ನೀಡಿದ್ದಾರೆ. ‘ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಆರೋಪಿಗಳು ಹಾಜರಾಗುವುದಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ’ ಎಂದಿದ್ದಾರೆ. ಈ ಪ್ರಕರಣದಲ್ಲಿ ಸದ್ಯ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

ಜೈಲು ಸಹವಾಸಿಗಳನ್ನು ಮಾತನಾಡಿಸದ ದರ್ಶನ್‌

ಜೈಲುಪಾಲಾಗಿರುವ ನಟ ದರ್ಶನ್‌ (Actor Darshan), ಒಂದೇ ಸೆಲ್‌ನಲ್ಲಿರುವ ತನ್ನ ಶಿಷ್ಯ ವಿನಯ್‌ ಅನ್ನು ಕೂಡ ಹೆಚ್ಚು ಮಾತನಾಡಿಸುತ್ತಿಲ್ಲ, ಮೌನವಾಗಿದ್ದಾನೆ ಎಂದು ತಿಳಿದುಬಂದಿದೆ. ಪ್ರಚೋದಿಸಿ ತನ್ನಿಂದ ಕೊಲೆ (Murder Case) ಮಾಡಿಸಿದರು ಎಂಬ ಸಿಟ್ಟೇ ಇದಕ್ಕೆ ಕಾರಣ ಎನ್ನಲಾಗಿದೆ.

ಸಹವಾಸ ಮಾಡಿ ಕೆಟ್ಟ ಮೇಲೆ ದರ್ಶನ್‌ಗೆ ಬುದ್ಧಿ ಬಂದಂತಿದೆ. ರೇಣುಕಾ ಸ್ವಾಮಿ ಮೆಸೇಜ್‌ಗಳಿಂದ ಆಕ್ರೋಶಗೊಂಡಿದ್ದ ದರ್ಶನ್‌ಗೆ ಇನ್ನಷ್ಟು ಪ್ರಚೋದನೆ ನೀಡಿದವರು ಜೊತೆಯಲ್ಲಿದ್ದ ವಿನಯ್ ಮತ್ತು ಟೀಂ. ಶೆಡ್‌ನಲ್ಲಿ ಹಲ್ಲೆ ನಡೆಸುತ್ತಿದ್ದಾಗ ʼಬಾಸ್, ಬಿಡ್ಬೇಡಿ ಬಿಡ್ಬೇಡಿʼ ಎಂದು ಗ್ಯಾಂಗ್‌ ಪ್ರಚೋದನೆ ಕೊಟ್ಟಿತ್ತು. ಇದರಿಂದಾಗಿಯೇ ಕೈಮೀರಿ ಕೊಲೆ ನಡೆಯಿತು ಎಂದು ದರ್ಶನ್‌ ಭಾವಿಸಿದಂತಿದೆ.

ತಾನು ಮಾಡಿದ್ದು ತಪ್ಪೋ, ಇವರ ಮಾತು ಕೇಳಿ ಕೆಟ್ಟೆನೋ ಎಂಬ ಚಿಂತೆಯಲ್ಲೇ ಇರುವ ದರ್ಶನ್, ಇದೇ ಕಾರಣಕ್ಕೆ ಜೊತೆಯಲ್ಲೇ ಒಂದೇ ಬ್ಯಾರಕ್‌ನಲ್ಲಿದ್ದರೂ ವಿನಯ್‌ ಅನ್ನು ಹೆಚ್ಚು ಮಾತನಾಡಿಸುತ್ತಿಲ್ಲ. ಜೊತೆಗಿರುವವರ ಸಹವಾಸ ಬಿಟ್ಟು ಹೆಚ್ಚು ಒಂಟಿಯಾಗಿದ್ದಾನೆ. ನಾನು ತಪ್ಪು ಮಾಡಿಬಿಟ್ನೋ ಅಥವಾ ಜೊತೆಯಲ್ಲಿದ್ದವರ ಮಾತು ಕೇಳಿ ಕೆಟ್ನೋ ಗೊತ್ತಿಲ್ಲ ಎಂದು ಸಿಬ್ಬಂದಿಗಳ ಬಳಿ ಆತ ಮಾತಾಡಿದ್ದು ವರದಿಯಾಗಿದೆ. ತಾಯಿ ಬಂದಾಗಲೂ, ಪತ್ನಿ ಬಂದಾಗಲೂ, ರಕ್ಷಿತಾ ಪ್ರೇಮ್ ಬಂದಾಗಲೂ ದರ್ಶನ್ ಇದೇ ಮಾತು ಹೇಳಿದ್ದಾರೆ ಎನ್ನಲಾಗಿದೆ.

Exit mobile version