ಬೆಂಗಳೂರು : ಬಹುಭಾಷಾ ನಟಿ ಮೀನಾ (Actor Meena) ಅವರ ಪತಿ ವಿದ್ಯಾಸಾಗರ್ ಶ್ವಾಸಕೋಶದ ಸೋಂಕಿನಿಂದ ಬುಧವಾರ (ಜೂನ್ 29) ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಚೆನ್ನೈನ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆ ಮೂಲಗಳ ಪ್ರಕಾರ ಅವರು ಕೆಲವು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಅದರಲ್ಲೂ ೨ ವರ್ಷದ ಹಿಂದೆ ಕೊರೊನಾ ತಗಲಿದ ಬಳಿಕ ವಿದ್ಯಾಸಾಗರ್ ಆರೋಗ್ಯ ಸುಧಾರಿಸಲೇ ಇಲ್ಲ ಎಂದು ತಿಳಿದುಬಂದಿದೆ.
ಕೆಲ ವಾರಗಳ ಹಿಂದೆ ವಿದ್ಯಾಸಾಗರ್ ಅವರಿಗೆ ಶ್ವಾಸಕೋಶದ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ಕಸಿ ಮಾಡಿಸಿಕೊಳ್ಳಲು ದಾನಿಗಳು ಸರಿಯಾಗಿ ಸಿಗದ ಕಾರಣ ಅವರು ನಿಧನರಾದರು ಎಂದು ಮೂಲಗಳು ತಿಳಿಸಿವೆ.
ಚಿತ್ರರಂಗದ ಹಲವಾರು ಕಲಾವಿದರು ವಿದ್ಯಾಸಾಗರ್ ನಿಧನಕ್ಕೆ ಸಂತಾಪ ಸೂಚಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಮೀನಾ ಮತ್ತು ಅವರ ಮಗಳಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಸಿಗಲೆಂದು ಕೋರಿದ್ದಾರೆ.
ಇದನ್ನೂ ಓದಿ | Hockey India ದಿಗ್ಗಜ ವರಿಂದರ್ ಸಿಂಗ್ ನಿಧನ
ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಬೆಂಗಳೂರು ಮೂಲದ ವಿದ್ಯಾಸಾಗರ್‌ರನ್ನು 2009ರಲ್ಲಿ ಮೀನಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ತಾಯಿಯಂತೆ ನೈನಿಕಾ ಕೂಡ ಬಾಲನಟಿಯಾಗಿದ್ದು, ತೇರಿ ಚಿತ್ರದಲ್ಲಿ ದಳಪತಿ ವಿಜಯ್ ಮಗಳಾಗಿ ನಟಿಸಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ವಾಸ್ತವ್ಯ ಹೂಡಿದ್ದ ಮೀನಾ ಮದುವೆಯ ನಂತರ ನಟನೆಯಲ್ಲಿ ಅಷ್ಟಾಗಿ ತೊಡಗಿಸಿಕೊಂಡಿರಲಿಲ್ಲ.
ಮೀನಾ ಅವರು ರಜನಿಕಾಂತ್, ಮಮ್ಮುಟ್ಟಿ, ಸುದೀಪ್, ವಿಷ್ಣುವರ್ಧನ್, ರವಿಚಂದ್ರನ್ ಅಂತಹ ಸ್ಟಾರ್ ನಟರೊಂದಿಗೆ ನಟಿಸಿದ್ದರು. ಸ್ವಾತಿಮುತ್ತು, ಮೈ ಆಟೋಗ್ರಾಫ್, ಪುಟ್ನಂಜ, ಗ್ರಾಮ ದೇವತೆ, ಸಿಂಹಾದ್ರಿಯ ಸಿಂಹ, ಹೆಂಡ್ತೀರ್ ದರ್ಬಾರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಮಲಯಾಳಂ, ತೆಲುಗು, ತಮಿಳಿನಲ್ಲಿಯೇ ಮೀನಾ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕೊರೊನಾ ತೀವ್ರತೆಯಿದ್ದ ಸಮಯದಲ್ಲಿ ಮೀನಾ ದಂಪತಿಗೆ ಸೋಂಕು ಕಾಣಿಸಿಕೊಂಡಿತ್ತು. ಮೀನಾ ಗುಣಮುಖರಾದರೆ ವಿದ್ಯಾಸಾಗರ್ ಆರೋಗ್ಯ ಹದಗೆಡುತ್ತ ಹೋಗಿತ್ತು. ಇದೀಗ ಶ್ವಾಸಕೋಶದ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ | ಹಿರಿಯ ಕೈಗಾರಿಕೋದ್ಯಮಿ, ಶಾಪೋರ್ಜಿ ಪಲ್ಲೋನ್‌ಜಿ ಗ್ರೂಪ್ ಮುಖ್ಯಸ್ಥ ಪಲ್ಲೋನ್‌ಜಿ ಮಿಸ್ತ್ರಿ ನಿಧನ