Site icon Vistara News

ನಟಿ ಸಾಯಿ ಪಲ್ಲವಿ ಕಾಶ್ಮೀರ್‌ ಫೈಲ್ಸ್‌ ಹೇಳಿಕೆ, ರಮ್ಯಾ ಬಳಿಕ ಕಿಶೋರ್‌, ಪ್ರಕಾಶ್‌ರಾಜ್‌ ಬೆಂಬಲ

sai pallavi

ಬೆಂಗಳೂರು: ಬಹುಭಾಷಾ ನಟಿ ಸಾಯಿ ಪಲ್ಲವಿ ಅವರು ಕಾಶ್ಮೀರ್‌ ಫೈಲ್ಸ್‌ ಸಿನಿಮಾವನ್ನು ಉಲ್ಲೇಖಿಸಿ ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆಗಳು ಎದ್ದಿದ್ದವು. ಈ ವಿಚಾರದಲ್ಲಿ ಸ್ಯಾಂಡಲ್​ ವುಡ್​ ಕ್ವೀನ್‌ ರಮ್ಯಾ ಸಾಯಿ ಪಲ್ಲವಿ ಬೆಂಬಲ ನೀಡಿದ್ದರು. ಇದೀಗ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮತ್ತು ಚಂದನವನದ ನಟ ಕಿಶೋರ್‌ ಕೂಡಾ ಸಾಯಿಪಲ್ಲವಿ ಪರ ಧ್ವನಿ ಎತ್ತಿದ್ದಾರೆ.

ನಟ ಕಿಶೋರ್ ಹೇಳಿದ್ದೇನು?

ಕಿಶೋರ್‌ ಅವರು ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಸಾಯಿ ಪಲ್ಲವಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ‘ಬಾಯಿ ಮುಚ್ಚಿಸುವುದು ಸರ್ಕಾರದ ಕೆಲಸವಲ್ಲವೇ? ಮಾಧ್ಯಮಗಳು ಯಾವಾಗಿಂದ ಈ ಕೆಲಸಕ್ಕೆ ಗುತ್ತಿಗೆ ಪಡೆದರು, ಸಿನಿಮಾದವರಿಗೆ ಜನಪರ ಕಾಳಜಿ ಇರೋದು ತಪ್ಪಾ..? ಸಾಮಾಜಿಕ ಬದ್ಧತೆಯನ್ನು ಧರ್ಮಾಂಧತೆಯ ಕನ್ನಡಿಯಲ್ಲಿ ನೋಡುವ ಮಾಧ್ಯಮ, ಗೋಕಾಕ್ ಚಳುವಳಿಯ ಕಾಲದಲ್ಲಿದಿದ್ದರೆ ರಾಜಕುಮಾರ್ ಅವರ ಬಾಯನ್ನು ಮುಚ್ಚಿಸುತ್ತಿತ್ತೇನೋʼʼ ಎಂದು ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.

ನಿಮ್ಮ ಜೊತೆ ನಾನಿದ್ದೇನೆ ಎಂದ ಪ್ರಕಾಶ್ ರಾಜ್

ಬಹುಭಾಷಾ ನಟ ಪ್ರಕಾಶ್ ರಾಜ್​ ನಟಿ ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತಿದ್ದಾರೆ. ಸಾಯಿ ಪಲ್ಲವಿ ಸ್ಪಷ್ಟನೆ ನೀಡಿದ್ದ ಟ್ವೀಟ್​​ನ್ನು ಮರು ಟ್ವೀಟ್​ ಮಾಡಿರುವ ಪ್ರಕಾಶ್​ ರಾಜ್​ ʻʻಮೊದಲು ಮಾನವೀಯತೆ ಮುಖ್ಯ, ಸಾಯಿ ಪಲ್ಲವಿ ನಾವು ನಿಮ್ಮ ಜೊತೆ ಇದ್ದೇವೆʼʼ ಎಂದು ಬರೆದುಕೊಂಡಿದ್ದಾರೆ.

ನಟಿ ಸಾಯಿ ಪಲ್ಲವಿ ಈ ಹಿಂದೆ ಹೇಳಿದ್ದೇನು?

ಸಾಯಿ ಪಲ್ಲವಿ ತಮ್ಮ ವಿರಾಟ ಪರ್ವಂ ಸಿನಿಮಾದ ಪ್ರಚಾರದ ಸಂದರ್ಭದ ಸಂದರ್ಶನವೊಂದರಲ್ಲಿ, ಕಾಶ್ಮೀರಿ ಪಂಡಿತರ ಹತ್ಯೆ, ಗೋವು ಸಾಗಿಸುವ ಮುಸ್ಲಿಮರ ಮೇಲಿನ ಹಲ್ಲೆ ಎರಡು ಒಂದೇ ತೆರನಾದ ಕೌರ್ಯವನ್ನು ಹೊಂದಿವೆ ಎಂದಿದ್ದರು.

ಸ್ಪಷ್ಟನೆ ಕೊಟ್ಟ ನಟಿ ಸಾಯಿ ಪಲ್ಲವಿ

ತಮ್ಮ ಹೇಳಿಕೆ ವಿವಾದಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸಾಯಿ ಪಲ್ಲವಿ ಸ್ಪಷ್ಟನೆ ನೀಡಿದ್ದಾರೆ. ʻʻನನ್ನ ಮನಸ್ಸಿಗೆ ತೋಚಿದ್ದನ್ನು ನೇರವಾಗಿ ಹೇಳುವ ಮೊದಲು, ಇದೇ ಮೊದಲ ಬಾರಿಗೆ ನಾನು ಎರಡು ಬಾರಿ ಯೋಚಿಸುತ್ತಿದ್ದೇನೆ. ಏಕೆಂದರೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನೀವು ಬಲಪಂಥಕ್ಕೆ ಬೆಂಬಲ ನೀಡುತ್ತೀರೋ ಎಡಪಂಥಕ್ಕೆ ಬೆಂಬಲ ನೀಡುತ್ತೀರೋ ಎಂದು ಕೇಳಿದ್ದರು. ನಾನು ಅದಕ್ಕೆ ತಟಸ್ಥಳಾಗಿದ್ದೇನೆ ಎಂದು ಹೇಳಿದ್ದೇನೆ. ನಾವು ಮೊದಲು ಮಾನವೀಯ ಮೌಲ್ಯಗಳುಳ್ಳ ಉತ್ತಮ ಮನುಷ್ಯರಾಗಿರಬೇಕು. ತುಳಿತಕ್ಕೆ ಒಳಗಾದವರನ್ನು ರಕ್ಷಿಸಬೇಕು ಎಂದು ಹೇಳಿದ್ದೆ. ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವುದು ದೊಡ್ಡ ಪಾಪ ಎಂದು ನಾನು ನಂಬುತ್ತೇನೆ. ನಾನು ಹೇಳಲು ಉದ್ದೇಶಿಸಿದ್ದು ಇಷ್ಟು ಮಾತ್ರʼʼ ಎಂದು ತಮ್ಮ ಹೇಳಿಕೆಗೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Exit mobile version