ಬೆಂಗಳೂರು: ನಟ ರಜನಿಕಾಂತ್ (Actor Rajinikanth) `ಜೈಲರ್’ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಇದೀಗ ವಾರಾಂತ್ಯದಲ್ಲಿ ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರ ನಿರ್ದೇಶನದ ʻಲಾಲ್ ಸಲಾಮ್ʼ (Lal Salaam) ಚಿತ್ರದ ಸೆಟ್‌ಗೆ ಮರಳಿದ್ದಾರೆ. ಮೇ 7ರಂದು ರಜನಿಕಾಂತ್ ಪಾತ್ರದ ʻಮೊಯಿದ್ದೀನ್ ಭಾಯಿʼ ಹೆಸರಿನ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದೆ. ಈ ಪೋಸ್ಟರ್ ರಜನಿಕಾಂತ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಯನ್ನು ಗಳಿಸಿದೆ.
ರಜನಿಕಾಂತ್ ಈ ಸಿನಿಮಾದಲ್ಲಿ ಮುಖ್ಯ ಅತಿಥಿ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ರಜನಿಕಾಂತ್ ಅವರು ‘ಲಾಲ್ ಸಲಾಮ್’ ಸಿನಿಮಾದಲ್ಲಿ ಮೊಯಿದ್ದೀನ್ ಭಾಯಿ ಪಾತ್ರ ಮಾಡುತ್ತಿದ್ದಾರೆ. ರಜನಿಕಾಂತ್ ಅವರು ತಲೆಗೆ ಟೋಪಿ ಧರಿಸಿದ್ದಾರೆ. ಹಿಂಭಾಗದಲ್ಲಿ ತಳ್ಳುವ ಗಾಡಿಗಳಿಗೆ ಬೆಂಕಿ ಇಡಲಾಗಿದೆ. ಅಷ್ಟೇ ಅಲ್ಲ ಪತ್ರಿಕೆ ಒಂದನ್ನು ತೋರಿಸಲಾಗಿದ್ದು, ‘ಮುಂಬೈ ನಿಯಂತ್ರಣದಲ್ಲಿದೆ’ ಎಂದು ಬರೆಯಲಾಗಿದೆ. ಜತೆಗೆ ‘ಮೊಯಿದ್ದೀನ್ ಭಾಯಿ ಬಂದಾಗಿದೆ’ ಎನ್ನುವ ಕ್ಯಾಪ್ಷನ್ ಇದೆ.
ಲಾಲ್ ಸಲಾಮ್ ಸಿನಿಮಾ ಮೂಲಕ ಐಶ್ವರ್ಯಾ ರಜನಿಕಾಂತ್ ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಐಶ್ವರ್ಯಾ ಅವರ ಕೊನೆಯ ನಿರ್ದೇಶನದ ಪ್ರಾಜೆಕ್ಟ್ ತಮಿಳು ಆ್ಯಕ್ಷನ್-ಥ್ರಿಲ್ಲರ್ ʻವೈ ರಾಜಾ ವೈʼ. ಇದರಲ್ಲಿ ಧನುಷ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Jailer Movie: ಶೂಟಿಂಗ್ ಸೆಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಜನಿಕಾಂತ್-ಮೋಹನ್‌ಲಾಲ್
ರಜನಿಕಾಂತ್ ಮಾಸ್ ಲುಕ್
ಲಾಲ್ ಸಲಾಮ್ʼ ಕ್ರಿಕೆಟ್ ಮತ್ತು ಕಮ್ಯುನಿಸಂ ಕಥಾ ಹಿನ್ನೆಲೆಯಲ್ಲಿ ಸೆಟ್ಟೇರಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದರಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಜನಿಕಾಂತ್ ಅವರ ಭಾಗದ ಸಂಪೂರ್ಣ ಚಿತ್ರೀಕರಣ ಮುಂಬೈನಲ್ಲಿ ನಡೆಯಲಿದೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತವಿದೆ. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ವಿಷ್ಣು ರಂಗಸ್ವಾಮಿ ಅವರ ಛಾಯಾಗ್ರಹಣ ಇದೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.