ಬೆಂಗಳೂರು: ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ `ಜೈಲರ್’ ಸಿನಿಮಾದಲ್ಲಿ ನಟ ರಜನಿಕಾಂತ್ (Actor Rajanikanth) ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಕೊನೆಯ ಹಂತದ ಶೂಟಿಂಗ್ ಮಾತ್ರ ಬಾಕಿ ಇದೆ ಎಂದು ವರದಿಯಾಗಿದೆ. ಜೈಲರ್ ಪೋಸ್ಟರ್‌ಗಳು, ಲೊಕೇಶನ್ ಸ್ಟಿಲ್‌ಗಳು ಪ್ರೇಕ್ಷಕರ ಗಮನ ಸೆಳೆದಿದೆ. ಮಗಳು ಐಶ್ವರ್ಯಾ ರಜನಿಕಾಂತ್ ಅವರ ʻಲಾಲ್ ಸಲಾಮ್ʼ ಚಿತ್ರದಲ್ಲಿಯೂ ರಜನಿಕಾಂತ್ ಕಾಣಿಸಿಕೊಳ್ಳುತ್ತಿದ್ದಾರೆ. `ಲಾಲ್ ಸಲಾಮ್ʼ ಕ್ರಿಕೆಟ್ ಮತ್ತು ಕಮ್ಯುನಿಸಂ ಕಥಾ ಹಿನ್ನೆಲೆಯಲ್ಲಿ ಸೆಟ್ಟೇರಲಿದೆ ಎಂಬ ಗಾಸಿಪ್‌ಗಳು ಹರಿದಾಡಿತ್ತು. ಇದೀಗ ರಜನಿಕಾಂತ್ ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರೊಂದಿಗೆ ಇರುವ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಪಿಲ್ ದೇವ್ ಈ ಸಿನಿಮಾದ ಭಾಗವಾಗಿದ್ದಾರೆ ಎನ್ನಲಾಗಿದೆ
1983ರ ವಿಶ್ವಕಪ್‌ನಲ್ಲಿ ದೇಶವನ್ನು ಗೆಲುವಿನತ್ತ ಮುನ್ನಡೆಸಿದ್ದ ಮಾಜಿ ನಾಯಕ ಕಪಿಲ್ ದೇವ್ ಅವರೊಂದಿಗೆ ರಜನಿಕಾಂತ್ ಫೋಟೊ ಹಂಚಿಕೊಂಡರು. ರಜನಿಕಾಂತ್ ಮತ್ತು ಕಪಿಲ್ ದೇವ್ ಸೆಟ್‌ಗಳಲ್ಲಿ ಪರಸ್ಪರ ಮಾತುಕತೆ ನಡೆಸುವುದನ್ನು ಕಾಣಬಹುದು. ರಜನಿಕಾಂತ್ ಟ್ವೀಟ್‌ನಲ್ಲಿ ʻʻಭಾರತವನ್ನು ಮೊದಲ ಬಾರಿಗೆ ಕ್ರಿಕೆಟ್ ವಿಶ್ವಕಪ್ ಗೆಲ್ಲುವ ಮೂಲಕ ಹೆಮ್ಮೆಪಡುವಂತೆ ಮಾಡಿದ ಲೆಜೆಂಡರಿ, ಅತ್ಯಂತ ಗೌರವಾನ್ವಿತ ಕಪಿಲ್‌ದೇವ್‌ಜಿ ಅವರೊಂದಿಗೆ ಕೆಲಸ ಮಾಡುವುದು ನನಗೆ ಹೆಮ್ಮೆ #ಲಾಲಸಲಾಮ್ʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Actor Rajinikanth: ʻಲಾಲ್ ಸಲಾಮ್ʼ ಚಿತ್ರದ ಮೂಲಕ ಹೊಸ ಲುಕ್‌ನಲ್ಲಿ ಬಂದ ರಜನಿಕಾಂತ್; ಪುತ್ರಿ ಆ್ಯಕ್ಷನ್ ಕಟ್!
ರಜನಿಕಾಂತ್ ಟ್ವೀಟ್
ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ `ಲಾಲ್ ಸಲಾಮ್ʼ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಅಲ್ಲದೆ, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಲು ಚಿತ್ರತಂಡ ರಜನಿಕಾಂತ್ ಅವರ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದೆ.
ʻಮೊಯಿದ್ದೀನ್ ಭಾಯಿʼ ಹೆಸರಿನ ʻಲಾಲ್ ಸಲಾಮ್ʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣ
ಮೇ 7ರಂದು ರಜನಿಕಾಂತ್ ಪಾತ್ರದ ʻಮೊಯಿದ್ದೀನ್ ಭಾಯಿʼ ಹೆಸರಿನ ʻಲಾಲ್ ಸಲಾಮ್ʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿತ್ತು. ರಜನಿಕಾಂತ್ ಅವರು ‘ಲಾಲ್ ಸಲಾಮ್’ ಸಿನಿಮಾದಲ್ಲಿ ಮೊಯಿದ್ದೀನ್ ಭಾಯಿ ಪಾತ್ರ ಮಾಡುತ್ತಿದ್ದಾರೆ. ರಜನಿಕಾಂತ್ ಅವರು ತಲೆಗೆ ಟೋಪಿ ಧರಿಸಿದ್ದಾರೆ. ಹಿಂಭಾಗದಲ್ಲಿ ತಳ್ಳುವ ಗಾಡಿಗಳಿಗೆ ಬೆಂಕಿ ಇಡಲಾಗಿದೆ. ಅಷ್ಟೇ ಅಲ್ಲ ಪತ್ರಿಕೆ ಒಂದನ್ನು ತೋರಿಸಲಾಗಿದ್ದು, ‘ಮುಂಬೈ ನಿಯಂತ್ರಣದಲ್ಲಿದೆ’ ಎಂದು ಬರೆಯಲಾಗಿತ್ತು. ಜತೆಗೆ ‘ಮೊಯಿದ್ದೀನ್ ಭಾಯಿ ಬಂದಾಗಿದೆ’ ಎನ್ನುವ ಕ್ಯಾಪ್ಷನ್ ಇದೆ. ಲಾಲ್ ಸಲಾಮ್ʼ ಕ್ರಿಕೆಟ್ ಮತ್ತು ಕಮ್ಯುನಿಸಂ ಕಥಾ ಹಿನ್ನೆಲೆಯಲ್ಲಿ ಸೆಟ್ಟೇರಲಿದೆ ಎಂಬ ಮಾತು ಕೇಳಿಬರುತ್ತಿದೆ.
ಇದನ್ನೂ ಓದಿ: Hombale Films: ಲೋಕೇಶ್ ಕನಕರಾಜ್-ರಜನಿಕಾಂತ್ ಜತೆ ಸಿನಿಮಾ ಮಾಡಲು ಸಜ್ಜಾಗಿದ್ಯಾ ಹೊಂಬಾಳೆ?
ಇದರಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಜನಿಕಾಂತ್ ಅವರ ಭಾಗದ ಸಂಪೂರ್ಣ ಚಿತ್ರೀಕರಣ ಮುಂಬೈನಲ್ಲಿ ನಡೆಯಲಿದೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತವಿದೆ. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ವಿಷ್ಣು ರಂಗಸ್ವಾಮಿ ಅವರ ಛಾಯಾಗ್ರಹಣ ಇದೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.