ಮುಂಬೈ: ಎಷ್ಟೇ ವಿವಾದಗಳು ಇರಲಿ, ಎಷ್ಟೇ ವದಂತಿಗಳು ಹರಡಲಿ, ಸಿನಿಮಾ ಹಿಟ್ ಆಗಲಿ, ಆಗದಿರಲಿ, ಭಾರತದಲ್ಲಿ ಸಲ್ಮಾನ್ ಖಾನ್ (Salman Khan) ಅವರನ್ನು ನೆಚ್ಚಿಕೊಳ್ಳುವ, ಅವರನ್ನು ಅನುಕರಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆದರೂ, ಕೆಲವೊಂದು ಸಲ ಸಲ್ಮಾನ್ ಖಾನ್ ಅವರು ತಮ್ಮ ವರ್ತನೆಯಿಂದ ಟೀಕೆಗೆ ಗುರಿಯಾಗುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಸಲ್ಮಾನ್ ಖಾನ್ ಅವರು ಸಿಗರೇಟ್ ಸೇದುತ್ತಲೇ ಬಿಗ್ ಬಾಸ್ ಒಟಿಟಿ ಸೀಸನ್ 2 ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಫೋಟೊ ವೈರಲ್ ಆಗುತ್ತಲೇ ಜನ ನಟನ ಮೇಲೆ ಮುಗಿಬಿದ್ದಿದ್ದಾರೆ.
ಬಿಗ್ ಬಾಸ್ ಒಟಿಟಿ 2 ಶೋನ ಶನಿವಾರದ ‘ವೀಕೆಂಡ್ ಕಾ ವಾರ್’ ಕಾರ್ಯಕ್ರಮ ನಡೆಸಿಕೊಟ್ಟ ಸಲ್ಮಾನ್ ಖಾನ್ ಅವರು ವೇದಿಕೆ ಮೇಲೆ ಕೈಯಲ್ಲಿ ಸಿಗರೇಟ್ ಹಿಡಿದು ಮಾತನಾಡುತ್ತಿರುವ ಫೋಟೊ ಲಭ್ಯವಾಗಿದೆ. Redditಗೆ ಮೊದಲು ಫೋಟೊ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ದೇಶಾದ್ಯಂತ ಲಕ್ಷಾಂತರ ಜನರು ವೀಕ್ಷಿಸುವ ಶೋನಲ್ಲಿ ಸಲ್ಮಾನ್ ಖಾನ್ ಅವರು ಸಿಗರೇಟ್ ಹಿಡಿದು ಕಾಣಿಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
“ಕಳೆದ ವಾರವಷ್ಟೇ, ಟಿವಿ ಕಾರ್ಯಕ್ರಮದಲ್ಲಿ ಕಿಸ್ ಮಾಡುವುದು ನಮ್ಮ ಸಂಸ್ಕೃತಿಯ ವಿರುದ್ಧವಾಗಿದೆ ಎಂಬುದಾಗಿ ಸ್ಪರ್ಧಾಳುಗಳಿಗೆ ಸಲ್ಮಾನ್ ಖಾನ್ ಪಾಠ ಮಾಡಿದ್ದರು. ಈಗ ನೋಡಿದರೆ ಅವರೇ ಇಂತಹ ವರ್ತನೆ ತೋರಿದ್ದಾರೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಸಲ್ಮಾನ್ ಖಾನ್ ಅವರದ್ದು ಹಿಪೋಕ್ರಸಿಯ ವರ್ತನೆ. ಅವರು ಯಾರಿಗೆ ಬೋಧನೆ ಮಾಡಿದ್ದಾರೋ, ಅವರ ಎದುರಾದರೂ ಸಭ್ಯವಾಗಿ ವರ್ತಿಸಬೇಕಿತ್ತು” ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಲ್ಮಾನ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Salman Khan : ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸೋತ ಬೆನ್ನಲ್ಲೇ ಮಹತ್ವದ ನಿರ್ಧಾರ ಮಾಡಿರುವ ಸಲ್ಮಾನ್!
ಕೆಲ ದಿನಗಳ ಹಿಂದಷ್ಟೇ ಬಿಗ್ಬಾಸ್ ಒಟಿಟಿ 2 ಶೋ ವೇಳೆ ಸ್ಪರ್ಧಿಗಳಾದ ಅಕಾಂಕ್ಷಾ ಪುರಿ ಹಾಗೂ ಜಡ್ ಹದಿದ್ ಅವರು ಲಿಪ್ ಲಾಕ್ ಮಾಡಿದ್ದರು. ಇದಕ್ಕಾಗಿ ಸಲ್ಮಾನ್ ಖಾನ್ ಅವರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು. “ಸಾರ್ವಜನಿಕವಾಗಿ ನಾವು ಹೇಗೆ ವರ್ತಿಸಬೇಕು ಎಂಬುದು ಗೊತ್ತಿರಬೇಕು. ಅದರಲ್ಲೂ, ಇಂತಹ ಶೋಗಳಲ್ಲಿ ಕಿಸ್ ಮಾಡುವುದು, ಅಸಭ್ಯವಾಗಿ ವರ್ತನೆ ಮಾಡುವುದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ. ಸಂಸ್ಕೃತಿ ಹಾಗೂ ಕೌಟುಂಬಿಕ ಮೌಲ್ಯಗಳ ಬಗ್ಗೆ ನಮಗೆ ಅರಿವಿರಬೇಕು” ಎಂದು ಸಲ್ಮಾನ್ ಖಾನ್ ಕ್ಲಾಸ್ ತೆಗೆದುಕೊಂಡಿದ್ದರು. ಈಗ ಅವರೇ ಕಾರ್ಯಕ್ರಮವನ್ನು ಹೋಸ್ಟ್ ಮಾಡುವಾಗ ಸಿಗರೇಟ್ ಸೇದಿದ ಕಾರಣ ಜನ ತರಾಟೆಗೆ ತೆಗೆದುಕೊಂಡಿದ್ದಾರೆ.