ಬೆಂಗಳೂರು: ನಟ ಸಿದ್ಧಾರ್ಥ್ (Actor Siddharth) ನಟನೆಯ ಚಿತ್ತ ಸಿನಿಮಾ ಸೆ. 28ರಂದು ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಮಲ್ಲೇಶ್ವರದ ಎಸ್ಆರ್ವಿಯಲ್ಲಿ ನಟ ಸಿದ್ಧಾರ್ಥ್ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಕರವೇ ಕಾರ್ಯಕರ್ತರು ತಡೆದಿದ್ದಾರೆ. ಕಾವೇರಿ ಕಿಚ್ಚು ಹತ್ತಿರುವ ಈ ಸಮಯದಲ್ಲಿ ತಮಿಳು ಚಿತ್ರದ ಪ್ರಚಾರದ ಅವಶ್ಯಕತೆ ಏನಿದೆ? ಎಂದು ಸುದ್ದಿಗೋಷ್ಠಿಗೆ ನುಗ್ಗಿ ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಸದಸ್ಯರು ಸುದ್ದಿಗೋಷ್ಠಿಯನ್ನು ತಡೆದಿದ್ದಾರೆ.
ಕಾವೇರಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ತಮಿಳು ಸಿನಿಮಾದ ಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ಧಾರ್ಥ್ ಬಳಿಯೂ ಕರವೇ ಕಾರ್ಯಕರ್ತರು ಮನವಿ ಮಾಡಿ, ʻʻದಯವಿಟ್ಟು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಮತ್ತೆ ಎಂದಾದರೂ ಕಾರ್ಯಕ್ರಮ ಮಾಡಿಕೊಳ್ಳಿ ಆದರೆ ಈಗ ಬೇಡ. ಇದು ಸೂಕ್ಷ್ಮ ಸಮಯʼʼ ಎಂದು ಹೇಳಿದರು.
ನಟ ಸಿದ್ಧಾರ್ಥ್, ಕನ್ನಡದಲ್ಲಿಯೇ ಸಿನಿಮಾದ ಕುರಿತು ಮಾತನಾಡಲು ಪ್ರಯತ್ನಿಸಿದರು. ಆದರೆ ಕರವೇ ಕಾರ್ಯಕರ್ತರು ಸಿದ್ಧಾರ್ಥ್ ಮಾತನ್ನು ತಡೆದು, ಯಾರೂ ಸಹ ತಮಿಳು ಸಿನಿಮಾಕ್ಕೆ ಪ್ರಚಾರ ನೀಡಬಾರದೆಂದು ಆಗ್ರಹಿಸಿದರು. ಸಿದ್ಧಾರ್ಥ್ ಸಹ ಕೂಡಲೇ ಎದ್ದು ದಯವಿಟ್ಟು ಎಲ್ಲರೂ ನನ್ನ ಸಿನಿಮಾ ನೋಡಿ ಎಂದು ಹೇಳಿ ಕೈಮುಗಿದು ಹೊರಟರು.
ಸಿದ್ಧಾರ್ಥ್ ನಟನೆಯ ‘ಚಿತ್ತ’ ಸಿನಿಮಾ ಸೆಪ್ಟೆಂಬರ್ 28ರಂದು ಬಿಡುಗಡೆ ಆಗಿದೆ. ಸಿನಿಮಾವು ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಗೆ ಬಂದಿದೆ. ‘ಚಿತ್ತ’ ಸಿನಿಮಾದ ಕನ್ನಡ ಆವೃತ್ತಿ ‘ಚಿಕ್ಕು’ಗೆ ಸ್ವತಃ ನಟ ಸಿದ್ಧಾರ್ಥ್ ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ.
ಇದನ್ನೂ ಓದಿ: Actor Siddharth: ಕನ್ನಡದಲ್ಲೂ ಬಿಡುಗಡೆಯಾಗಲಿದೆ ಸಿದ್ಧಾರ್ಥ್ ಅಭಿನಯದ ‘ಚಿಕ್ಕುʼ!
ಕನ್ನಡದಲ್ಲಿ ಚಿಕ್ಕು
ಏತಕಿ ಎಂಟರ್ಟೈನ್ಮೆಂಟ್‌ನಡಿ ನಿರ್ಮಾಣಗೊಂಡಿರುವ ‘ಚಿಕ್ಕು’ ಚಿತ್ರದ ವಿತರಣಾ ಹಕ್ಕುಗಳನ್ನು ಕರ್ನಾಟಕದ ಜನಪ್ರಿಯ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ.ಆರ್.ಜಿ. ಸ್ಟುಡಿಯೋಸ್ ಪಡೆದುಕೊಂಡಿದೆ. ಚಿತ್ರವನ್ನು ಸೆ. 28ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ‘ಚಿಕ್ಕು’ ಚಿತ್ರದಲ್ಲಿ ಸಿದ್ಧಾರ್ಥ್ (Actor Siddharth) ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವೃತ್ತಿಜೀವನದಲ್ಲೇ ಇದೊಂದು ವಿಭಿನ್ನ ಚಿತ್ರವಷ್ಟೇ ಅಲ್ಲ, ಇದೊಂದು ಹೊಸ ಮೈಲಿಗಲ್ಲು ಎಂದು ಹೇಳಲಾಗುತ್ತಿದೆ.
ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ‘ಅಭಿನಯ ಚಕ್ರವರ್ತಿ’ ಸುದೀಪ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ‘ಚಿಕ್ಕು’ ಚಿತ್ರವು ಕನ್ನಡದ ಮಟ್ಟಿಗೆ ವಿನೂತನವಾಗಿದ್ದು, ಒಂದು ವಿಭಿನ್ನ ಕಥೆಯನ್ನು ಹೇಳುತ್ತದೆ. ಚಿತ್ರದಲ್ಲೊಂದು ಅದ್ಭುತವಾದ ಸಂದೇಶವಿದ್ದು, ಚರ್ಚೆಗೆ ಗ್ರಾಸವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಹಿಂದೆ ತಮಿಳಿನಲ್ಲಿ ‘ಪನ್ನೈಯಾರುಂ ಪದ್ಮಿನಿಯುಂ’ ನಂತಹ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ಎಸ್.ಯು. ಅರುಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಿಕ್ಕು’ ಚಿತ್ರವು ಒಬ್ಬ ಚಿಕ್ಕಪ್ಪ ಮತ್ತು ಅವನ ಸೋದರ ಸೊಸೆಯ ಕುರಿತಾದ ಚಿತ್ರವಾಗಿದ್ದು, ಇಂಥದ್ದೊಂದು ಅಪರೂಪದ ಸಂಬಂಧದ ಕುರಿತಾಗಿ ಇದೇ ಮೊದಲ ಬಾರಿಗೆ ಚಿತ್ರವೊಂದು ನಿರ್ಮಾಣವಾಗಿದೆ.
ಸೆಪ್ಟೆಂಬರ್ 29ಕ್ಕೆ ಚಿತ್ರಮಂದಿರಗಳು ಬಂದ್
ಸೆ.29ರಂದು ಕರ್ನಾಟಕ ಬಂದ್ (Karnataka Band) ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಿದೆ. ಬೆಳಗ್ಗೆಯಿಂದ ಚಿತ್ರಮಂದಿರಗಳು ಮುಚ್ಚಲಿದ್ದು, ಸಂಜೆ ಹೋರಾಟ ಮುಗಿದ ಬಳಿಕ ಮತ್ತೆ ಚಿತ್ರ ಪ್ರದರ್ಶನಗಳನ್ನು ಆರಂಭಿಸಲಿವೆ ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ (KV Chandrasekhar) ತಿಳಿಸಿದ್ದಾರೆ. ಸೆ.29ರಂದು 10 ಗಂಟೆಗೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಪ್ರತ್ಯೇಕ ಹೋರಾಟವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಹೇಳಿದ್ದಾರೆ.