Site icon Vistara News

Actress Bhanupriya: ‘ಸಿಂಹಾದ್ರಿಯ ಸಿಂಹ’ ಖ್ಯಾತಿಯ ನಟಿ ಭಾನುಪ್ರಿಯಾಗೆ ಮರೆವಿನ ಕಾಯಿಲೆ, ಪತಿ ಅಗಲಿಕೆ ಬಳಿಕ ಏನಾಯ್ತು?

Actress Bhanupriya

#image_title

ಹೈದರಾಬಾದ್‌: ಬಟ್ಟಲು ಕಂಗಳ ಚೆಲುವೆ, ಮನೋಜ್ಞ ನಟನೆ, ಮನಮೋಹಕ ನೃತ್ಯದ ಮೂಲಕವೇ ಸ್ಯಾಂಡಲ್‌ವುಡ್‌ ಸೇರಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚಿದ ನಟಿ ಭಾನುಪ್ರಿಯಾ (Actress Bhanupriya) ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಬಹುಬೇಡಿಕೆಯ, ಚಿರಂಜೀವಿ, ವಿಷ್ಣುವರ್ಧನ್‌, ರವಿಚಂದ್ರನ್‌ ಸೇರಿ ಪ್ರಮುಖ ಹೀರೊಗಳಿಗೆ ನಾಯಕಿಯಾಗಿ ನಟಿಸಿದ ನಟಿಯು ತೆರೆ ಮೇಲೆ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ, ಇದುವರೆಗೆ ಏಕೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ, ಏಕೆ ಸಾರ್ವಜನಿಕ ಜೀವನದಲ್ಲಿಲ್ಲ, ಯಾವ ಕಾಯಿಲೆ ಇದೆ ಎಂಬುದರ ಕುರಿತು ನಟಿ ಭಾನುಪ್ರಿಯಾ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

“ನಾನು ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿಲ್ಲ. ನನಗೆ ಮಾನಸಿಕ ಖಿನ್ನತೆಯೂ ಇಲ್ಲ. ನನ್ನ ಪತಿ ಆದರ್ಶ್‌ ಕೌಶಲ್‌ ನಿಧನರಾದ ಬಳಿಕ ನನಗೆ ಅನಾರೋಗ್ಯ ಆವರಿಸಿದೆ. ಇದರಿಂದ ನಾನು ತುಂಬ ಮರೆಯುತ್ತಿದ್ದೇನೆ. ಸಿನಿಮಾ ಡೈಲಾಗ್‌ಗಳನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಲು ಆಗುತ್ತಿಲ್ಲ. ಮರೆವಿನಿಂದ ನಾನು ಬಳಲುತ್ತಿದ್ದೇನೆ” ಎಂದು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ, “ನಾನು ಹಾಗೂ ನನ್ನ ಪತಿ ವಿಚ್ಛೇದನ ಪಡೆದಿದ್ದೆವು ಎಂಬುದೆಲ್ಲ ಸುಳ್ಳು. ಇಬ್ಬರ ಬ್ಯುಸಿ ಶೆಡ್ಯೂಲ್‌ ಮಧ್ಯೆಯೂ ಚೆನ್ನಾಗಿಯೇ ಇದ್ದೆವು. ಆದರೆ, ಪ್ರತ್ಯೇಕವಾಗಿ ವಾಸಿಸುತ್ತಿದ್ದೆವು. ಆದರೆ, ಇದನ್ನೇ ವಿಚ್ಛೇದನ ಎಂದು ಹೇಳುವುದು ಸುಳ್ಳು” ಎಂಬುದಾಗಿ ತಿಳಿಸಿದ್ದಾರೆ.

ಮಗಳು ಅಭಿನಯ ಎಲ್ಲಿ?

ಭಾನುಪ್ರಿಯಾ ಅವರ ಏಕೈಕ ಪುತ್ರಿ ಅಭಿನಯ ಅವರ ಬಗ್ಗೆಯೂ ಮಾತನಾಡಿದ್ದಾರೆ. “ನನ್ನ ಮಗಳಾದ ಅಭಿನಯಳಿಗೆ ಈಗ ೨೦ ವರ್ಷ. ಅವಳು ಲಂಡನ್‌ನಲ್ಲಿ ಓದುತ್ತಿದ್ದಾಳೆ. ಅವಳಿಗೆ ಸಿನಿಮಾಗಳಲ್ಲಿ ನಟಿಸುವುದು, ಸಿನಿಮಾ ವೀಕ್ಷಿಸುವ ಅಭ್ಯಾಸವೇ ಇಲ್ಲ. ಅವಳಿಗೆ ಅದು ಇಷ್ಟವೂ ಇಲ್ಲ. ಹಾಗಾಗಿ, ಅವಳು ಸಿನಿಮಾ ರಂಗ ಪ್ರವೇಶಿಸುವುದು ಕಷ್ಟಸಾಧ್ಯ” ಎಂದು ಸ್ಪಷ್ಟಪಡಿಸಿದ್ದಾರೆ. ೧೯೮೦ರ ದಶಕದಲ್ಲಿ ತಮಿಳು, ಕನ್ನಡ, ತೆಲುಗು ಸಿನಿಮಾ ರಂಗದಲ್ಲಿ ಭಾನುಪ್ರಿಯಾ ಬಹುಬೇಡಿಕೆಯ ನಟಿಯಾಗಿದ್ದರು. ಕನ್ನಡದ ರಸಿಕ, ಸಿಂಹಾದ್ರಿಯ ಸಿಂಹ, ಮೇಷ್ಟ್ರು ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Sunny Leone: ನಟಿ ಸನ್ನಿ ಲಿಯೋನ್​ ಭಾಗವಹಿಸಲಿದ್ದ ಫ್ಯಾಶನ್​ ಶೋ ಸ್ಥಳದ ಬಳಿಯೇ ಪ್ರಬಲ ಬಾಂಬ್​ ಸ್ಫೋಟ

Exit mobile version