ಹೈದರಾಬಾದ್: ನಟಿ ದೀಪಿಕಾ ಪಡುಕೋಣೆ ಅವರ ಹೃದಯದ ಆರೋಗ್ಯ ಏರುಪೇರಾಗಿಲ್ಲ. ಅವರು ರೆಗ್ಯುಲರ್ ಚೆಕಪ್ ಮಾಡಿಸಿಕೊಂಡಿದ್ದಾರೆ ಅಷ್ಟೇ ಎಂದು ಅವರ ನೂತನ ಚಿತ್ರದ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.
ದೀಪಿಕಾ ಅವರ ಮುಂಬರುವ ಸಿನಿಮಾ ಪ್ರಾಜೆಕ್ಟ್ ಕೆ ಚಿತ್ರದ ಶೂಟಿಂಗ್ಗಾಗಿ ಹೈದರಬಾದ್ನಲ್ಲಿ ಬೀಡು ಬಿಟ್ಟಿದ್ದರು. ಕಳೆದ ಒಂದು ವಾರದಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ಹೃದಯ ಬಡಿತದಲ್ಲಿ ಏರಿಳಿತ ಕಂಡು ಬಂದ ಹಿನ್ನಲೆಯಲ್ಲಿ ಕೂಡಲೇ ಕಾಮಿನೇನಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಅಂದೇ ವಾಪಾಸ್ ಆಗಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ದೀಪಿಕಾ ಅಭಿಮಾನಿಗಳು ಡಿಪ್ಪಿಯ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದರು.
ಸದ್ಯ ಈ ವಿಚಾರವಾಗಿ ಪ್ರಾಜೆಕ್ಟ್ ಕೆ ಚಿತ್ರದ ನಿರ್ಮಾಪಕ ಅಶ್ವಿನ್ ದತ್ ಸಂದರ್ಶವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ದೀಪಿಕಾ ಪಡುಕೋಣೆ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದೌಡಾಯಿಸಿಲ್ಲ. ಬದಲಾಗಿ ಪ್ರತಿನಿತ್ಯದಂತೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಸಲುವಾಗಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು ಅಷ್ಟೇ. ಅದು ಹೊರತಾಗಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯಿಂದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಹೃದಯ ಬಡಿತ ಏರುಪೇರು, ಅಭಿಮಾನಿಗಳ ಎದೆಯಲ್ಲಿ ಡವಡವ!
ದೀಪಿಕಾ ಈ ಮೊದಲು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಬಳಿಕ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾಗಿದ್ದರು. ಅದಾದ ನಂತರ ಯೂರೋಪ್ಗೆ ತೆರಳಿದ್ದ ನಟಿ ದೀಪಿಕಾ ಅಲ್ಲಿ ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದರು. ಅಲ್ಲಿಂದ ನೇರವಾಗಿ ನಮ್ಮ ಸೆಟ್ಗೆ ಆಗಮಿಸಿದ್ದರು. ಹೀಗಾಗಿ ಅವರ ಬಿ.ಪಿಯಲ್ಲಿ ಕೊಂಚ ಏರುಪೇರಾದ ಕಾರಣ ತಪಾಸಣೆ ಮಾಡಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ, ಆರಾಮಗಿದ್ದಾರೆ ಎಂದು ತಿಳಿಸಿದ್ದಾರೆ.
ದೀಪಿಕಾ ಶಿಸ್ತಿನ ನಟಿಯಾಗಿದ್ದಾರೆ. ನಿರ್ದೇಶಕರು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಕೇಳಿದರೂ ಸಹ ಶೂಟಿಂಗ್ನಲ್ಲಿ ಮತ್ತೆ ಭಾಗಿಯಾದರು. ಅವರು ಕೆಲಸದ ಮೇಲೆ ಇಟ್ಟಿರುವ ಶ್ರದ್ಧೆ ಅದ್ಬುತವಾಗಿದೆ ಎಂದಿದ್ದಾರೆ ನಿರ್ಮಾಪಕರು.
ದೀಪಿಕಾ ಆಸ್ಪತ್ರೆಗೆ ದಾಖಲಾದ ವಿಚಾರ ಎಲ್ಲೆಡೆ ಕಾಡ್ಗಿಚ್ಚಿನಂತೆ ಹರಡಿತ್ತು. ದೀಪಿಕಾ ಅಭಿಮಾನಿಗಳು ಕಂಗೆಟ್ಟಿದ್ದರು. ಆದರೆ, ದೀಪಿಕಾ ರೆಗ್ಯುಲರ್ ಚೆಕಪ್ ಮಾಡಿಸಿಕೊಂಡದ್ದು ಮಾತ್ರವಲ್ಲದೆ, ಅಂದೇ ಚಿಕಿತ್ಸೆ ಪಡೆದು ಮತ್ತೆ ಶೂಟಿಂಗ್ನಲ್ಲೂ ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ: ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಕುಟುಂಬ