ಮುಂಬೈ: ಬಾಲಿವುಡ್ ನಟಿ ಕಾಜೋಲ್ 90ರ ದಶಕದಲ್ಲಿ ಮಿಂಚಿದ ನಟಿ. ಇಂದಿಗೂ ಕಾಜೋಲ್ (Actress Kajol) ಅಭಿಮಾನಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಆದರೆ ಇದೇ ಕಾಜೋಲ್ ಅವರಿಗೆ ಹಲವು ವಿಚಾರದಲ್ಲಿ ಜನರು ಆಡಿಕೊಳ್ಳುತ್ತಿದ್ದರಂತೆ. ಕಪ್ಪಗೆ, ದಪ್ಪಗಿದ್ದಾರೆ ಎನ್ನುವ ಕಾರಣಕ್ಕೆ ಹಲವರು ಹೀಯಾಳಿಸುತ್ತಿದ್ದರಂತೆ. ಬಾಡಿ ಸೇಮಿಂಗ್(Body Shaming) ವಿಚಾರ ಸಂಬಂಧ ನಟಿ ಇತ್ತೀಚೆಗೆ ಮಾತನಾಡಿದ್ದಾರೆ.
ಕಾಜೋಲ್ ಅವರು ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿ ಮನ ಬಿಚ್ಚಿ ಮಾತನಾಡಿದ ನಟಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. “ನನಗೆ ಅನೇಕ ರೀತಿಯಲ್ಲಿ ಹೀಯಾಳಿಕೆಗಳು ಬಂದವು. ಅದನ್ಯಾವುದನ್ನೂ ನಾನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಅದನ್ನೆಲ್ಲ ದೂರ ಇಟ್ಟು ಮುಂದೆ ನಡೆದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Kajal Aggarwal: ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲ ಎಂದು ಕಾಜಲ್ ಅಗರ್ವಾಲ್ ಹೇಳಿದ್ದೇಕೆ?
“ಇವಳು ಕಪ್ಪಾಗಿದ್ದಾಳೆ, ದಪ್ಪವಾಗಿದ್ದೇಳೆ ಎಂದ ಅನೇಕರು ಹೇಳುತ್ತಿದ್ದರು. ಅಷ್ಟೇ ಅಲ್ಲದೆ ಯಾವಾಗಲೂ ಕನ್ನಡಕ ಹಾಕಿಕೊಂಡೇ ಇರುತ್ತಾಳೆ ಎಂದೂ ಆಡಿಕೊಳ್ಳುತ್ತಿದ್ದರು. ನಾನು ಕನ್ನಡಕ ಹಾಕುತ್ತಿದ್ದೆ. ಏಕೆಂದರೆ ನನಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆದರೆ ನನಗೆ ಒಂದು ವಿಚಾರ ಸ್ಪಷ್ಟವಾಗಿ ಗೊತ್ತಿತ್ತು. ನನ್ನ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವ ಎಲ್ಲರಿಗಿಂತ ನಾನು ಹೆಚ್ಚು ಸ್ಮಾರ್ಟ್, ಕೂಲ್ ಮತ್ತು ಉತ್ತಮಳಾಗಿದ್ದೇನೆ ಎಂದು ತಿಳಿದಿತ್ತು. ಹಾಗಾಗಿ ನಾನು ನಾನಾಗಿಯೇ ಮುಂದುವರಿದೆ. ನನ್ನನ್ನು ಸಮಾಜ ಇನ್ನೂ ಕಾಲೆಳೆಯಲು ಆಗದೇ ಹೋದಾಗ ನನ್ನನ್ನು ನನ್ನಂತೆಯೇ ಒಪ್ಪಿಕೊಂಡು, ಅಪ್ಪಿಕೊಂಡಿತು” ಎಂದು ನಟಿ ತಿಳಿಸಿದ್ದಾರೆ.
ಕಾಜೋಲ್ ಅವರು ಕೊನೆಯದಾಗಿ ಸಲಾಮ್ ವೆಂಕಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಅವರು ವಿಶಾಲ್ ಜೇತ್ವಾ ಹಾಗೂ ಆಮಿರ್ ಖಾನ್ ಅವರೊಂದಿಗೆ ನಟಿಸಿದ್ದರು. ರೇವತಿ ಅವರ ನಿರ್ದೇಶನವಿರುವ ಈ ಚಿತ್ರ ಕಳೆದ ವರ್ಷ ತೆರೆ ಕಂಡಿತ್ತು. ಕಾಜೋಲ್ ಅವರು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಕಭಿ ಖುಷಿ ಕಭಿ ಗಮ್, ಬಾಜಿಗರ್, ಗುಪ್ತ್, ದುಷ್ಮನ್, ಕುಚ್ ಕುಚ್ ಹೋತಾ ಹೈ, ಮೈ ನೇಮ್ ಈಸ್ ಖಾನ್ ಸೇರಿ ಹಲವಾರು ಹಿಟ್ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದರು.