ಬೆಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ 80ನೇ ಗೋಲ್ಡನ್ ಗ್ಲೋಬ್ಸ್‌ನಲ್ಲಿ ರಾಜಮೌಳಿ ನಿರ್ದೇಶನದ RRR ಸಿನಿಮಾದ (RRR Movie) ನಾಟು… ನಾಟು… “ಅತ್ಯುತ್ತಮ ಒರಿಜಿನಲ್ ಹಾಡು” ವಿಭಾಗದಲ್ಲಿ ಪುರಸ್ಕಾರ ಪಡೆದಿದೆ. ಸಿನಿಮಾ ತಂಡಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಸಂಗೀತ ನಿರ್ದೇಶಕ, ಗಾಯಕ ಅದ್ನಾನ್ ಸಾಮಿ ಮಾಡಿದ ಟ್ವೀಟ್‌ಗೆ ಆಕ್ಷೇಪ ವ್ಯಕ್ತವಾಗಿದೆ. ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರಂತೂ ಅದ್ನಾನ್ ಸಾಮಿ ಅವರಿಗೆ ‘ವಿವಿಧತೆಯಲ್ಲಿ ಏಕತೆ’ಯ ಪಾಠ ಮಾಡಿದ್ದಾರೆ.
ಆರ್‌ಆರ್‌ಆರ್ ಚಿತ್ರವು ಜಾಗತಿಕ ಪ್ರಶಸ್ತಿಗೆ ಪುರಸ್ಕೃತವಾದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. “ತೆಲುಗು ಧ್ವಜ ಅತಿ ಎತ್ತರದಲ್ಲಿ ಹಾರಾಡುತ್ತಿದೆ. ಆಂಧ್ರಪ್ರದೇಶದ ಪರವಾಗಿ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದರು. ಆದರೆ, ಇದಕ್ಕೆ ಅದ್ನಾನ್ ಸಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.
“ತೆಲುಗು ಧ್ವಜವೇ? ನಾವು ಮೊದಲು ಭಾರತೀಯರು. ದೇಶದಿಂದ ಪ್ರತ್ಯೇಕವಾಗಿ ಇರುವ ನಿಮ್ಮ ಮನಸ್ಥಿತಿಯನ್ನು ದಯಮಾಡಿ ಬದಲಾಯಿಸಿಕೊಳ್ಳಿ. ಅದರಲ್ಲೂ, ಜಾಗತಿಕ ಮಟ್ಟದಲ್ಲಾದರೂ ನಾವು ಭಾರತೀಯರು ಎಂಬ ಭಾವನೆ ಇರಲಿ” ಎಂದು ಅದ್ನಾನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ತಿರುಗೇಟು ನೀಡಿದ ರಮ್ಯಾ
ಅದ್ನಾನ್ ಸಾಮಿ ಟ್ವೀಟ್‌ಗೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ. “ಹೌದು, ನಾವು ಭಾರತೀಯರು. ಆದರೆ, ನಾವು ಕನ್ನಡಿಗರು, ತಮಿಳಿಗರು, ತೆಲುಗು, ಬೆಂಗಾಲಿಗಳು. ನಮಗೆ ನಮ್ಮ ಧ್ವಜ ಇದೆ. ನಾವು ಭಾರತೀಯರು ಎಂಬುದಕ್ಕೆ ಹೆಮ್ಮೆ ಇದೆ ಹಾಗೂ ನಮ್ಮ ಮೂಲ ಸಂಸ್ಕೃತಿ, ಭಾಷೆ, ಧ್ವಜಗಳನ್ನು ಹೊಂದಿದ್ದೇವೆ. ವಿವಿಧತೆಯಲ್ಲಿ ಏಕತೆ ಎಂಬುದು ಸರಿಯಲ್ಲವೇ?” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | RRR Movie | ನಾಟು ನಾಟು ಹಾಡು ಚಿತ್ರೀಕರಣ ಆಗಿದ್ದ ಆ ಜಾಗ ಈಗ ಯುದ್ಧದ ಸ್ಥಳ! ಯಾವುದು ಆ ಜಾಗ?