ತಿರುಪತಿ: ನಿರ್ಮಾಪಕ ಓಂ ರೌತ್ ಅವರ ಸಿನಿಮಾ ಆದಿಪುರುಷ್ ಜೂನ್ 16ರಂದು 3ಡಿ ಮಾದರಿಯಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೆ ಮುಂಚಿತವಾಗಿ ಮಂಗಳವಾರ ತಿರುಪತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತಿಮ ಟ್ರೈಲರ್ ಬಿಡುಗಡೆಗೊಂಡಿತು. ಕಳಪೆ ವಿಎಫ್ಎಕ್ಸ್ ಮತ್ತು ಅನಿಮೇಷನ್ ಕಾರಣಕ್ಕೆ ಈ ಹಿಂದೆ ವೀಕ್ಷಕರಿಂದ ತಿರಸ್ಕರಿಸಲ್ಪಟ್ಟಿದ್ದ ಟೀಸರ್ ವೀಡಿಯೊಗೆ ಹೋಲಿಸಿದರೆ ಹೊಸ ಟ್ರೈಲರ್ ಪ್ರಭಾವಶಾಲಿಯಾಗಿದೆ. ಈ ಚಿತ್ರದಲ್ಲಿ ರಾಘವನಾಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ಲಂಕೇಶ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.
#Adipurush Action Trailer in Hindi. pic.twitter.com/JgtYa086yf
— Nishit Shaw (@NishitShawHere) June 6, 2023
2 ನಿಮಿಷಕ್ಕೂ ಹೆಚ್ಚು ಅವಧಿಯ ಟ್ರೈಲರ್ ರಾಮಾಯಣದ ಕಥಾಹಂದರವನ್ನು ಹೊಂದಿದೆ. ಇದರಲ್ಲಿ ಕೃತಿ ಜಾನಕಿಯಾಗಿ ಮತ್ತು ಸೈಫ್ ಲಂಕೇಶ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುದ್ಧಭೂಮಿಯಲ್ಲಿ ರಾಘವನಾಗಿ ಪ್ರಭಾಸ್ ಮಿಂಚುತ್ತಾರೆ. ಹಿಂದಿನ ಟ್ರೈಲರ್ಗಳು ಮತ್ತು ಟೀಸರ್ಗಳಿಗೆ ಹೋಲಿಸಿದರೆ ಅಂತಿಮ ವೀಡಿಯೊದ ಮೊದಲಾರ್ಧವು ಉತ್ತಮ ದೃಶ್ಯಗಳನ್ನು ಹೊಂದಿದೆ. ಆದರೆ, ಕೊನೆಯಲ್ಲಿ ಸ್ವಲ್ಪ ಕಳೆಗುಂದುತ್ತದೆ.
ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಭಾರತದ 5 ವಿವಿಧ ಭಾಷೆಗಳಲ್ಲಿ ಆದಿಪುರುಷ್ ಬಿಡುಗಡೆಯಾಗಲಿದೆ. ಇದು ಜೂನ್ 16 ರಂದು ಚಿತ್ರಮಂದಿರದಲ್ಲಿ ತೆರೆಗೆ ಬರಲಿದೆ. ಈ ಚಿತ್ರವು ಜೂನ್ 13 ರಂದು ನ್ಯೂಯಾರ್ಕ್ನಲ್ಲಿ ನಡೆಯುವ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್ನ 2023 ಆವೃತ್ತಿಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.
ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಭಾಸ್
ಟ್ರೈಲರ್ ಬಿಡುಗಡೆಗೂ ಮುನ್ನ ನಟ ಪ್ರಭಾಸ್ ತಿರುಪತಿಯ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಭಾಸ್ ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಆದಿಪುರುಷ್ ನಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯ ಎಂದು ಹೇಳಿದ್ದರು.
ಪಿಟಿಐ ಜೊತೆ ಮಾತನಾಡಿದ ಪ್ರಭಾಸ್, “ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಓಂ ಅವರಿಗೆ ಧನ್ಯವಾದ ಹೇಳಬೇಕು. ನಾವು ಈ ಚಿತ್ರವನ್ನು ಸಾಕಷ್ಟು ಪ್ರೀತಿ ಮತ್ತು ಗೌರವದಿಂದ ಮಾಡಿದ್ದೇವೆ. ನೀವೆಲ್ಲರೂ ಇದನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಆದಿಪುರುಷ್ ಬಗ್ಗೆ ಓಂ ರೌತ್
ತನ್ಹಾಜಿ: ದಿ ಅನ್ಸಂಗ್ ವಾರಿಯರ್ ಚಿತ್ರದ ನಿರ್ದೇಶಕ ಓಂ ರೌತ್, ಚಿತ್ರವನ್ನು ರಾಮ್ ಲೀಲಾ ಕಲಾವಿದರಿಗೆ ಅರ್ಪಿಸಿದ್ದಾರೆ. “ರಾಮ್ ಲೀಲಾದ ಭಾಗವಾಗಿರುವ ಪ್ರತಿಯೊಬ್ಬ ಕಲಾವಿದರಿಗೂ ಈ ಚಿತ್ರವನ್ನು ಅರ್ಪಿಸಲು ನಾನು ಬಯಸುತ್ತೇನೆ. ‘ರಾಮಾಯಣ’ದ ಕಥೆ ಹಲವು ವರ್ಷಗಳಿಂದ ಇದೆ. ಅದು ಒಂದು ಬಸ್ಸು ಇದ್ದಂತೆ. ನಾವು ಈ ಬಸ್ಸನ್ನು ಹತ್ತಿದ್ದೇವೆ ಮತ್ತು ನಾವು ಕೆಲವು ವರ್ಷಗಳವರೆಗೆ ಮುಂದುವರಿಯುತ್ತೇವೆ. ನಾವು ಇಳಿದ ಬಳಿಕ ಯಾರಾದರೂ ಬಸ್ ಹತ್ತುತ್ತಾರೆ. ಆದರೆ ರಾಮಲೀಲಾದ ಪ್ರಯಾಣ ಮುಂದುವರಿಯುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.