ಬೆಂಗಳೂರು: ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆಯಲ್ಲಿರುವ ನಟ ಮಹೇಶ್ ಬಾಬು(Mahesh Babu). ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿಲ್ಲವಾದರೂ ಅವರಿಗೆ ಅತಿ ದೊಡ್ಡ ಅಭಿಮಾನಿಗಳ ಬಳಗವಿದೆ. ಮಹೇಶ್ ಬಾಬು ಸಿನಿಮಾವೆಲ್ಲವೂ ಹಿಟ್ ಲಿಸ್ಟ್‌ಗೆ ಸೇರಿಕೊಳ್ಳುತ್ತಿವೆ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಒಟ್ಟಿಗೆ ಕೆಲಸ ಮಾಡುತ್ತಿರುವ ಗುಂಟೂರು ಖಾರಂ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆಯಾದರೂ ಒಬ್ಬರ ಹಿಂದೆ ಒಬ್ಬರು ಈ ಸಿನಿಮಾದಿಂದ ಹೊರಕ್ಕೆ ಬರುತ್ತಿದ್ದಾರೆ. ಆದರೆ ಈಗ ಗುಂಟೂರು ಖಾರಂ ಸಿನಿಮಾದ ಸಿನಿಮಾಟೋಗ್ರಾಫರ್ ಪಿಎಸ್ ವಿನೋದ್ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಸ್ಕ್ರಿಪ್ಟ್ನಲ್ಲಿ ಆದ ಬದಲಾವಣೆ, ಸೆಟ್ ಬದಲಾವಣೆ, ಡೇಟ್ಸ್ ಬದಲಾವಣೆ, ರೀ ಶೂಟ್ಗಳು ಇದೆಲ್ಲದರಿಂದ ಬೇಸರಗೊಂಡು ಪಿಎಸ್ ವಿನೋದ್ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದು, ನಟಿ ಶ್ರೀಲೀಲಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಕೆಲವು ದಿನಗಳ ಹಿಂದೆ ಪೂಜಾ ಹೆಗ್ಡೆ ಕೂಡ ಸಿನಿಮಾದಿಂದ ಔಟ್ ಆಗಿದ್ದಾರೆ. ಇತ್ತೀಚೆಗೆ ತ್ರಿವಿಕ್ರಮ್ ಶ್ರೀನಿವಾಸ್ ಜತೆಗಿನ ಭಿನ್ನಾಭಿಪ್ರಾಯಗಳಿಂದ ಸಂಗೀತ ನಿರ್ದೇಶಕ ಎಸ್. ತಮನ್ ಹೊರ ಬಂದಿದ್ದಾರೆ ಎನ್ನಲಾಗಿತ್ತು. ಇದೀಗ ಸಿನಿಮಾದ ಸಿನಿಮಾಟೊಗ್ರಾಫರ್ ಪಿಎಸ್ ವಿನೋದ್ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.
ಸಂಗೀತ ನಿರ್ದೇಶಕ ಯಾರು?
ತಮನ್ ಬದಲು ತಮಿಳಿನ ಅನಿರುದ್ಧ್ ರವಿಚಂದರ್ ‘ಗುಂಟೂರು ಖಾರಂ’ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Mahesh Babu: ʼಗುಂಟೂರು ಖಾರಂʼಗಾಗಿ 78 ಕೋಟಿ ರೂ. ಸಂಭಾವನೆ ಪಡೆದರಾ ಮಹೇಶ್ ಬಾಬು?
ಸಿನಿಮಾಟೊಗ್ರಾಫರ್ ಪಿಎಸ್ ವಿನೋದ್ ಔಟ್!
ತ್ರಿವಿಕ್ರಮ್ರ ಈ ಹಿಂದಿನ ಎರಡು ಸಿನಿಮಾಗಳಿಗೆ ಪಿಎಸ್ ವಿನೋದ್ ಅವರೇ ಕ್ಯಾಮೆರಾ ಹಿಡಿದಿದ್ದರು. ಕಳೆದ ಐದು ವರ್ಷಗಳಿಂದಲೂ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆದರೆ ‘ಗುಂಟೂರು ಖಾರಂ’ ಸಿನಿಮಾದ ಮರು ಚಿತ್ರೀಕರಣ, ಸ್ಕ್ರಿಪ್ಟ್ ಬದಲಾವಣೆಗಳಿಂದ ಬೇಸತ್ತು ವಿನೋದ್ ಈಗ ಸಿನಿಮಾದಿಂದ ಹೊರ ನಡೆದಿದ್ದಾರೆ.
‘‘ಹಾರಿಕಾ ಆ್ಯಂಡ್ ಹಾಸಿನಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಎಸ್ರಾಧಾಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ʻಅತಡುʼ ಮತ್ತು ʻಖಲೇಜಾʼದಂತಹ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾದ ಬಳಿಕ ಮಹೇಶ್ ಬಾಬು, ರಾಜಮೌಳಿ ಸಿನಿಮಾದಲ್ಲಿ ನಟಿಸಲಿದ್ದಾರೆ, ತ್ರಿವಿಕ್ರಮ್, ಅಲ್ಲು ಅರ್ಜುನ್ ಜತೆ ಕೆಲಸ ಮಾಡಲಿದ್ದಾರೆ.