Site icon Vistara News

Aishwaryaa Rajinikanth: ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕದ್ದ ಕಳ್ಳರು ಕೊನೆಗು ಸಿಕ್ಕಿಬಿದ್ದರು; ಯಾರವರು?

Aishwarya Rajinikanth house theft case Thieves caught

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ರಜನಿಕಾಂತ್ (Aishwaryaa Rajinikanth) ಮನೆಯಲ್ಲಿ ಮನೆಯ ಲಾಕರ್‌ನಲ್ಲಿದ್ದ 60 ಪವನ್ ಚಿನ್ನ ಮತ್ತು ವಜ್ರದ ಆಭರಣಗಳು ನಾಪತ್ತೆಯಾಗಿತ್ತು. ಐಶ್ವರ್ಯಾ ರಜನಿಕಾಂತ್ ಈ ಬಗ್ಗೆ ದೂರು ನೀಡಿದ್ದರು. ಇದೀಗ ಪೊಲೀಸರು ತನಿಖೆ ನಡೆಸಿ ಕಳ್ಳರನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಕಾರು ಚಾಲಕ ವೆಂಕಟೇಶಂ ಸಹಕಾರದಿಂದ ಮನೆ ಕೆಲಸದಾಕೆ ಈಶ್ವರಿ 100 ಸವರನ್ ಚಿನ್ನಭರಣ, 30 ಗ್ರಾಂ ವಜ್ರಾಭರಣ, 4 ಕೆಜಿ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಲಾಗಿದೆ.

ಎಫ್‌ಐಆರ್ ಪ್ರಕಾರ, ಐಶ್ವರ್ಯಾ ಅವರು ಆಭರಣವನ್ನು ಲಾಕರ್‌ನಲ್ಲಿ ಇರಿಸಿದ್ದರು ಮತ್ತು ಆ ಬಗ್ಗೆ ಮನೆಯ ಕೆಲವು ಕೆಲಸದವರಿಗೆ ತಿಳಿದಿತ್ತು ಎಂದು ಹೇಳಿದ್ದಾರೆ. ತೇನ್ಯಾಂಪೇಟೆ ಪೊಲೀಸರು ಐಪಿಸಿ ಸೆಕ್ಷನ್ 381 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಐಶ್ವರ್ಯಾ ದೂರು ನೀಡುವುದರ ಜತೆಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಐಶ್ವರ್ಯಾ ಮನೆಯಲ್ಲಿ ಚಿನ್ನ, ವಜ್ರಾಭರಣ ಕಳ್ಳತನ ಮಾಡಿದ್ದಕ್ಕೆ ಮನೆ ಕೆಲಸದಾಕೆ ಹಾಗೂ ಕಾರು ಚಾಲಕನನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

18 ವರ್ಷಗಳಿಂದ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಈಶ್ವರಿ ಕೆಲಸ ಮಾಡುತ್ತಿದ್ದಳು. ಹಾಗಾಗಿ ಮನೆಯ ಬಗ್ಗೆ ಎಲ್ಲಾ ಗೊತ್ತಿದ್ದ ಆಕೆ ಹಲವು ಬಾರಿ ಲಾಕರ್ ತೆಗೆದು ಕಳ್ಳತನ ಮಾಡಿದ್ದಾಳೆ. ಐಶ್ವರ್ಯಾ ರಜನಿಕಾಂತ್ ಲಾಕರ್ ಕೀ ಎಲ್ಲಿ ಇಡುತ್ತಿದ್ದರು ಎನ್ನುವುದು ಆಕೆಗೆ ಚೆನ್ನಾಗಿ ಗೊತ್ತಿತ್ತು. ಲಾಕರ್ ತೆಗೆಯಲು ಅದೇ ಕೀ ಬಳಸಿದ್ದಾಳೆ. ಕೆಲ ದಿನಗಳಿಂದ ಆಕೆ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕದ್ದ ಚಿನ್ನಾಭರಣವನ್ನು ಆಕೆ ಮನೆ ಖರೀದಿಸಲು ಬಳಸಿಕೊಂಡಿರುವುದಾಗಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ಈಶ್ವರಿ ಮನೆ ಖರೀದಿಸಿರುವುದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Aishwaryaa Rajinikanth: ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಐಶ್ವರ್ಯಾ ಮನೆಯಲ್ಲಿ ಕಳ್ಳತನ

ಕಳೆದ ಫೆಬ್ರವರಿಯಲ್ಲಿ ಐಶ್ವರ್ಯಾ ರಜನಿಕಾಂತ್ ಅವರು ಚಿನ್ನಾಭರಣ ಕಳ್ಳತನದ ಬಗ್ಗೆ ತೇನ್ಯಾಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 2019ರಲ್ಲಿ ಸಹೋದರಿ ಸೌಂದರ್ಯ ಅವರ ಮದುವೆಯಲ್ಲಿ ಆಭರಣಗಳನ್ನು ಕೊನೆಯದಾಗಿ ಧರಿಸಿದ್ದರು. ಮದುವೆಯ ನಂತರ ಅವುಗಳನ್ನು ತನ್ನ ಬಳಿಯಿದ್ದ ಲಾಕರ್‌ನಲ್ಲಿ ಇರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 60 ಪವನ್ ಚಿನ್ನ, ವಜ್ರದ ಅಭರಣ ಮತ್ತು 3ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ದೋಚಿಸಿದ್ದಾರೆ ಎಂದು ಕೇಸು ದಾಖಲಿಸಿದ್ದರು.

ಆಘಾತಕ್ಕೊಳಗಾಗಿದ್ದ ರಜನಿಕಾಂತ್‌ ಪುತ್ರಿ

2021ರಲ್ಲಿ ಲಾಕರನ್ನು ಮೂರು ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. 2021ರ ಆಗಸ್ಟ್ 21ರಂದು ಲಾಕರ್ ಅನ್ನು ಸಿಐಟಿ ನಗರದಲ್ಲಿರುವ ಮಾಜಿ ಪತಿ ಧನುಷ್ ಅವರ ಫ್ಲ್ಯಾಟ್‌ನಲ್ಲಿ ಇರಿಸಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ಚೆನ್ನೈನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಿಸಲಾಗಿದೆ. 2022ರಲ್ಲಿ ಲಾಕರ್ ಅನ್ನು ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಲಾಕರ್‌ನ ಕೀಗಳು ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಫ್ಲ್ಯಾಟ್‌ನಲ್ಲಿ ಉಳಿದಿವೆ. 2023 ಫೆಬ್ರವರಿ 10ರಂದು ಐಶ್ವರ್ಯಾ ಲಾಕರ್ ಅನ್ನು ತೆರೆದಾಗ, 18 ವರ್ಷಗಳಲ್ಲಿ ಸಂಗ್ರಹವಾದ ಕೆಲವು ಆಭರಣಗಳು ಕಾಣೆಯಾಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು. ವಜ್ರದ ಸೆಟ್, ಪುರಾತನ ಕಾಲದ ಚಿನ್ನಾಭರಣಗಳು, ನವರತ್ನಂ ಸೆಟ್‌ಗಳು, ಬಳೆಗಳು ಸೇರಿದಂತೆ ಸುಮಾರು 3.60 ಲಕ್ಷ ರೂ. ಮೌಲ್ಯದ ಸುಮಾರು 60 ಪವನ್ ಚಿನ್ನಾಭರಣ ಕಳ್ಳತನವಾಗಿತ್ತು.

ಐಶ್ವರ್ಯಾ ರಜನಿಕಾಂತ್ ಅವರು ಲಾಲ್ ಸಲಾಂ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಮ್‌ಬ್ಯಾಕ್‌ ಆಗುತ್ತಿದ್ದಾರೆ. ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.

Exit mobile version