ಹೈದರಾಬಾದ್: ಖ್ಯಾತ ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರಿಗೆ ಹೈದರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಆ್ಯಂಡ್ ಅಸ್ಸೆಟ್ಸ್ ಮಾನಿಟರಿಂಗ್ ಆ್ಯಂಡ್ ಪ್ರೊಟೆಕ್ಷನ್ (HYDRA)ನ ಅಧಿಕಾರಿಗಳು ಬಹುದೊಡ್ಡ ಶಾಕ್ ಕೊಟ್ಟಿದ್ದಾರೆ. ನಗರದ ಮಾದಾಪುರದ ತಮ್ಮಿಡಿಕುಂಟಾ ಸರೋವರ (Thammidikunta Lake)ದ ಫುಲ್ ಟ್ಯಾಂಕ್ ಲೆವೆಲ್ (FTL) ಪ್ರದೇಶ ಮತ್ತು ಬಫರ್ ವಲಯವನ್ನು ಅತಿಕ್ರಮಿಸಿದ ಆರೋಪದ ಮೇಲೆ ನಾಗಾರ್ಜುನ ಅವರ ಎನ್-ಕನ್ವೆನ್ಷನ್ ಸೆಂಟರ್ ಅನ್ನು ನೆಲಸಮಗೊಳಿಸಿದ್ದಾರೆ.
ಜಲಮೂಲಗಳು ಮತ್ತು ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿರುವ ಅಕ್ರಮ ನಿರ್ಮಾಣಗಳನ್ನು ತೆಗೆದುಹಾಕುವ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎನ್-ಕನ್ವೆನ್ಷನ್ ಸೆಂಟರ್ ಅನ್ನು ಸುಮಾರು 10 ಎಕ್ರೆಯಲ್ಲಿ ನಿರ್ಮಿಸಲಾಗಿದೆ. ಎನ್-ಕನ್ವೆನ್ಷನ್ ಸೆಂಟರ್ ಮದುವೆ, ಕಾರ್ಪೋರೇಟ್ ಕೂಟಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅಯೋಜನೆಗೆ ಜನಪ್ರಿಯ ಸ್ಥಳವಾಗಿ ಗುರುತಿಸಿಕೊಂಡಿದೆ.
ಈ ವರ್ಷದ ಆರಂಭದಲ್ಲಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC)ನ ವಲಯ ಆಯುಕ್ತರಿಗೆ ನಗರ ಮತ್ತು ಸುತ್ತಮುತ್ತಲಿನ ಜಲಮೂಲಗಳ ಅತಿಕ್ರಮಣವನ್ನು ತಡೆಗಟ್ಟಲು ಸರೋವರ ಸಂರಕ್ಷಣಾ ಸಮಿತಿಗಳನ್ನು ರಚಿಸುವಂತೆ ಸೂಚಿಸಲಾಗಿತ್ತು. ಇತ್ತೀಚೆಗೆ ಬಿಡುಗಡೆಗೊಂಡ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC)ನ ವರದಿಯು 1979 ಮತ್ತು 2024ರ ನಡುವೆ ಹೈದರಾಬಾದ್‌ನ ಸರೋವರಗಳ ವಿಸ್ತಾರವು ಶೇ. 61ರಷ್ಟು ಕಡಿಮೆಯಾಗಿದೆ ಎನ್ನುವ ಅಂಶವನ್ನು ಬಹಿರಂಗಪಡಿಸಿತ್ತು.
ನಾಗಾರ್ಜುನ ಅವರ ಕನ್ವೆನ್ಷನ್ ಸೆಂಟರ್ ಎಫ್‌ಟಿಎಲ್ ಪ್ರದೇಶದ 1.12 ಎಕ್ರೆ ಮತ್ತು ಬಫರ್ ವಲಯ ಹೆಚ್ಚುವರಿ 2 ಎಕರೆ ಪ್ರದೇಶದಲ್ಲಿದೆ ವ್ಯಾಪಿಸಿದೆ ಎಂದು ಆರೋಪಿಸಲಾಗಿದೆ. ಅಧಿಕೃತ ಮೂಲಗಳ ಪ್ರಕಾರ, ತಮ್ಮಿಡಿಕುಂಟಾ ಸರೋವರದ ಎಫ್‌ಟಿಎಸ್ ಪ್ರದೇಶದ ವ್ಯಾಪ್ತಿ ಸುಮಾರು 29.24 ಎಕ್ರೆ. ನಾಗಾರ್ಜುನ ಅವರಿಗೆ ಸೇರಿದ ಈ ಆಸ್ತಿಯು ಹಲವು ವರ್ಷಗಳಿಂದ ಪರಿಶೀಲನೆಯಲ್ಲಿತ್ತು. ಆದಾಗ್ಯೂ ಜಿಎಚ್ಎಂಸಿ ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ತೆಲಂಗಾಣದ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರು ಕನ್ವೆನ್ಷನ್ ಸೆಂಟರ್ ವಿರುದ್ಧ ಬುಧವಾರ (ಆಗಸ್ಟ್ 21) ಹೈಡ್ರಾಗೆ ಅಧಿಕೃತ ದೂರು ನೀಡಿದ್ದರು. ಅವರು ತಮ್ಮ ದೂರಿನೊಂದಿಗೆ ಗೂಗಲ್ ಅರ್ಥ್ ಮ್ಯಾಪ್‌ನೊಂದಿಗೆ ಅತಿಕ್ರಮಣವನ್ನು ಸೂಚಿಸುವ ಎಫ್‌ಟಿಎಸ್‌ನ ಮ್ಯಾಪ್ ಅನ್ನೂ ಲಗತ್ತಿಸಿದ್ದರು.
Pained by the unlawful manner of demolition carried out in respect of N Convention, contrary to existing stay orders and Court cases.
— Nagarjuna Akkineni (@iamnagarjuna) August 24, 2024
I thought it fit to issue this statement to place on record certain facts for protecting my reputation and to indicate that we have not done any…
ನಾಗಾರ್ಜುನ ಹೇಳಿದ್ದೇನು?
ಘಟನೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ನಾಗಾರ್ಜುನ ಆಘಾತ ವ್ಯಕ್ತಪಡಿಸಿದ್ದಾರೆ. ತಾವು ಯಾವುದೇ ಜಾಗವನ್ನು ಅತಿಕ್ರಮಿಸಿಲ್ಲ ಎಂದೂ ಹೇಳಿದ್ದಾರೆ. “ಇದು ಪಟ್ಟಾ ಭೂಮಿಯಾಗಿದ್ದು, ಕೆರೆಯ ಒಂದು ಇಂಚು ಸಹ ಅತಿಕ್ರಮಣವಾಗಿಲ್ಲ. ಕಾನೂನನ್ನು ಪಾಲಿಸುವ ನಾಗರಿಕನಾಗಿ, ನ್ಯಾಯಾಲಯವು ನನ್ನ ವಿರುದ್ಧ ತೀರ್ಪು ನೀಡಿದ್ದರೆ ನಾನೇ ನೆಲಸಮವನ್ನು ಮಾಡುತ್ತಿದ್ದೆ” ಎಂದು ಅವರು ಬರೆದುಕೊಂಡಿದ್ದಾರೆ. ಜತೆಗೆ ʼʼಕಟ್ಟಡ ನೆಲಸಮಕ್ಕೆ ಮೊದಲು ತನಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಅಧಿಕಾರಿಗಳು ಕೈಗೊಂಡ ತಪ್ಪು ಕ್ರಮಗಳಿಗೆ ಸಂಬಂಧಿಸಿದಂತೆ ನಾವು ನ್ಯಾಯಾಲಯದಿಂದ ಸೂಕ್ತ ಪರಿಹಾರವನ್ನು ಕೋರುತ್ತೇವೆʼʼ ಎಂದೂ ಅವರು ಹೇಳಿದ್ದಾರೆ.