ಮುಂಬೈ: ನಟರು, ಕ್ರಿಕೆಟಿಗರು ಸೇರಿ ಯಾವುದೇ ಸೆಲೆಬ್ರಿಟಿಗಳು ಸಾಮಾನ್ಯವಾಗಿ ಅಭಿಮಾನಿಗಳ ಕೈಗೆ ಸಿಗುವುದಿಲ್ಲ. ಅವರ ಜತೆ ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ ಸೆಲ್ಫಿ ತೆಗೆಸಿಕೊಳ್ಳುವ ಅವಕಾಶ ಸಿಗುತ್ತದೆ. ಅದರಲ್ಲೂ, ಬಾಲಿವುಡ್ ನಟರಂತೂ ಸಾಮಾನ್ಯರಿಗೆ ಗಗನ ಕುಸುಮವೇ ಸರಿ. ಆದರೆ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಅಭಿಮಾನಿಗಳ ಜತೆ ಸೆಲ್ಫಿ ತೆಗೆಸಿಕೊಂಡೇ ಗಿನ್ನಿಸ್ (Akshay Kumar Record) ದಾಖಲೆ ಬರೆದಿದ್ದಾರೆ.
ಮಲಯಾಳಂನ ಡ್ರೈವಿಂಗ್ ಲೈಸೆನ್ಸ್ ಸಿನಿಮಾದ ಹಿಂದಿ ರಿಮೇಕ್ ಆದ ‘ಸೆಲ್ಫಿ’ ಪ್ರಮೋಷನ್ ವೇಳೆ ಅಕ್ಷಯ್ ಕುಮಾರ್ ಅವರು ಕೇವಲ ಮೂರು ನಿಮಿಷದಲ್ಲಿ ೧೮೪ ಅಭಿಮಾನಿಗಳ ಜತೆ ಸೆಲ್ಫಿ ತೆಗೆಸಿಕೊಳ್ಳುವ ಮೂಲಕ ಅವರು ಇದುವರೆಗಿನ ಗಿನ್ನಿಸ್ ವಿಶ್ವದಾಖಲೆ ಮುರಿದು, ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದಕ್ಕೆ ಅವರಿಗೆ ಪ್ರಮಾಣಪತ್ರವೂ ಸಿಕ್ಕಿದೆ. ಅಲ್ಲದೆ, ಸಾಲು ಸಾಲು ಸೆಲ್ಫಿ ತೆಗೆಸಿಕೊಳ್ಳುವ ವಿಡಿಯೊ ಈಗ ವೈರಲ್ ಆಗಿದೆ.
ಇದನ್ನೂ ಓದಿ: Akshay Kumar: ಬೈಕಾಟ್ ಗ್ಯಾಂಗ್ನ ಟ್ರೋಲ್ ಮಾಡಿದ ಅಕ್ಷಯ್ ಕುಮಾರ್: ಸೆಲ್ಫಿ ಸಿನಿಮಾ ಫೆ.24ಕ್ಕೆ ತೆರೆಗೆ
ಅಮೆರಿಕದ ಜೇಮ್ಸ್ ಸ್ಮಿತ್ ಅವರು ೩ ನಿಮಿಷದಲ್ಲಿ ೧೬೮ ಸೆಲ್ಫಿಗಳನ್ನು ತೆಗೆದುಕೊಂಡಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ, ಇದನ್ನು ಅಕ್ಷಯ್ ಕುಮಾರ್ ಮುರಿದಿದ್ದಾರೆ. ಗಿನ್ನಿಸ್ ದಾಖಲೆ ಬರೆದಿದ್ದಕ್ಕೆ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಅಕ್ಷಯ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಸೆಲ್ಫಿ ಸಿನಿಮಾವು ಫೆಬ್ರವರಿ ೨೪ರಂದು ಬಿಡುಗಡೆಯಾಗಲಿದೆ.