ಮುಂಬೈ: ಇತ್ತೀಚೆಗೆ ಪ್ರಧಾನಿ ಮೋದಿ ಅವರು ಬಿಜೆಪಿಯ ನಾಯಕರಿಗೆ ಭಾರತೀಯ ಸಿನಿಮಾಗಳ ಬಗ್ಗೆ ಅನವಶ್ಯಕ ಹೇಳಿಕೆಗಳನ್ನು ಕೊಡದಂತೆ ತಡೆಯುವಂತೆ ಸೂಚಿಸಿದ್ದರ ಬಗ್ಗೆ ಸುದ್ದಿಯಾಗಿತ್ತು. ಈ ವಿಚಾರವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಮೋದಿ ಅವರನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Akshay Kumar | ಅಕ್ಷಯ್ ಕುಮಾರ್-ಇಮ್ರಾನ್ ಹಾಶ್ಮಿ ಕಾಂಬಿನೇಶನ್ ಸೆಲ್ಫಿ ಸಿನಿಮಾ ಮೋಷನ್ ಪೋಸ್ಟರ್ ಔಟ್
ತಮ್ಮ ಮುಂಬರುವ ಸಿನಿಮಾವಾದ ʼಸೆಲ್ಫೀʼ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಕ್ಷಯ್, “ಒಳ್ಳೆಯದನ್ನು ನಾವು ಯಾವಾಗಲೂ ಸ್ವಾಗತಿಸುತ್ತೇವೆ. ಈಗ ನಮ್ಮ ಪ್ರಧಾನ ಮಂತ್ರಿಗಳು ಅಂಥದ್ದೊಂದು ಒಳ್ಳೆಯ ಹೇಳಿಕೆ ಕೊಟ್ಟಿದ್ದಾರೆ. ಅವರು ಇಡೀ ದೇಶದ ಅತ್ಯಂತ ದೊಡ್ಡ ಇನ್‌ಫ್ಲೂಯೆನ್ಸರ್. ಅವರು ಹೇಳಿರುವ ಹೇಳಿಕೆ ಕೆಲಸ ಮಾಡಿದರೆ ನಮ್ಮ ಸಿನಿಮಾ ಕ್ಷೇತ್ರಕ್ಕೆ ಒಳ್ಳೆಯದಾಗಲಿದೆ. ನಾವು ಕಷ್ಟ ಪಟ್ಟು ಸಿನಿಮಾ ಮಾಡುವಾಗ ಈ ಬದಲಾವಣೆ ಆಗಲೇಬೇಕಿದೆ” ಎಂದು ಹೇಳಿದ್ದಾರೆ.
“ನಾವು ಕಷ್ಟ ಪಟ್ಟು ಸಿನಿಮಾ ಮಾಡುತ್ತೇವೆ. ನಂತರ ಅದನ್ನು ಸೆನ್ಸಾರ್ ಮಂಡಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪಾಸ್ ಆಗುತ್ತೇವೆ. ಆದರೆ ಇವೆಲ್ಲ ಆದ ಮೇಲೆ ಯಾರೋ ಏನೋ ಹೇಳುತ್ತಾರೆ. ಅದರಿಂದ ನಮ್ಮ ಸಿನಿಮಾಗಳಿಗೆ ಸಮಸ್ಯೆ ಉಂಟಾಗುತ್ತದೆ. ಈಗ ಮೋದಿ ಜೀ ಅವರು ಇದೇ ಸಮಸ್ಯೆ ಆಗದಿರುವಂತೆ ನೋಡಿಕೊಳ್ಳುವುದಕ್ಕೆ ಸೂಚಿಸಿದ್ದಾರೆ” ಎಂದು ಅಕ್ಷಯ್ ಹೇಳಿದ್ದಾರೆ.
ಇದನ್ನೂ ಓದಿ: Rishi Sunak | ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ವಿಷಯದಲ್ಲಿ ಭಾರತ ಪ್ರಧಾನಿ ಪರ ನಿಂತ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಅದರಲ್ಲಿ ಪ್ರಧಾನಿ ಮೋದಿ ಅವರು, “ಕೇವಲ ಸುದ್ದಿಯಾಗಬೇಕು ಎನ್ನುವ ಕಾರಣಕ್ಕೆ ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆಗಳನ್ನು ಕೊಡುವುದನ್ನು ತಡೆಯಬೇಕು” ಎಂದು ಪಕ್ಷದವರಿಗೆ ಹೇಳಿದ್ದಾಗಿ ಸಭೆಯಲ್ಲಿ ಭಾಗವಹಿಸಿದ್ದ ಪದಾಧಿಕಾರಿಯೊಬ್ಬರು ತಿಳಿಸಿದ್ದರು.