ಮುಂಬಯಿ: ಎರಡೂವರೆ ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ಸ್ಟಾರ್ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈಗ ಒಂದು ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಆಲಿಯಾ ಭಟ್ ಗರ್ಭಿಣಿಯಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಲ್ಟ್ರಾಸೌಂಡ್ ತಪಾಸಣೆಯ ಫೋಟೋವನ್ನೂ ಹಂಚಿಕೊಂಡು, “ನಮ್ಮ ಮಗು ಶೀಘ್ರದಲ್ಲೇ ಬರಲಿದೆ” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ನವೆಂಬರ್‌ನಲ್ಲಿ ನಟಿಗೆ ಹೆರಿಗೆ ಆಗಲಿದೆ ಎಂದು ವರದಿಗಳು ಹೇಳಿವೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇದೇ ವರ್ಷ ಏಪ್ರಿಲ್ 14ರಂದು ಮುಂಬೈನ ಬಾಂದ್ರಾದಲ್ಲಿ ವಿವಾಹವಾಗಿದ್ದರು. ಇದೀಗ ಮನೆಗೆ ಹೊಸ ಪುಟ್ಟ ಅತಿಥಿಯನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಜೀವನದಲ್ಲಿ ಪಾಲಕರಾಗಿ ಹೊಸ ಅಧ್ಯಾಯ ಶುರು ಮಾಡಲು ಸಿದ್ಧರಾಗಿರುವ ಸ್ಟಾರ್ ದಂಪತಿಗೆ ಅವರ ಆಪ್ತರು, ಬಂಧು-ಬಳಗ, ಬಾಲಿವುಡ್‌ನ ಇತರ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ.
ರಣಬೀರ್ ಕಪೂರ್ ಸದ್ಯ ತಮ್ಮ ಶಂಶೇರಾ ಸಿನಿಮಾದ ಪ್ರಮೋಶನ್‌ನಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ಅವರಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಮದುವೆಯಾದ ಮೇಲೆ ನಿಮ್ಮ ಲೈಫ್‌ಸ್ಟೈಲ್ ಹೇಗಿದೆ. ಕೆಲಸಗಳು ಎಷ್ಟು ಹೆಚ್ಚಾಗಿದೆ ಎಂದು ಮಾಧ್ಯಮದವರು ಕಾಲೆಳೆದಿದ್ದರು. ಆಗ ಉತ್ತರಿಸಿದ್ದ ರಣಬೀರ್ ಕಪೂರ್, “ನಾನು ಮೊದಲು ನನಗಾಗಿ ಮಾತ್ರ ಕೆಲಸ ಮಾಡುತ್ತಿದ್ದೆ. ಈಗ ನನ್ನದೇ ಕುಟುಂಬ ಇದೆ. ಅದರ ಸಂಪೂರ್ಣ ಜವಾಬ್ದಾರಿ ನನ್ನದೇ ಇದೆ. ಜವಾಬ್ದಾರಿ ಹೆಚ್ಚುತ್ತಿದೆ” ಎಂದು ಹೇಳಿದ್ದರು. ತಮ್ಮ ಮನೆಗೆ ಮಗು ಬರುತ್ತಿರುವ ಸೂಚನೆಯನ್ನು ಅಲ್ಲೇ ಕೊಟ್ಟಿದ್ದರಾ ಎಂಬ ಚರ್ಚೆ ಈಗ ಶುರುವಾಗಿದೆ.
ಇದನ್ನೂ ಓದಿ: ದೇಶ ಎತ್ತ ಸಾಗುತ್ತಿದೆ?: ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ ಹಿಜಾಬ್ ಯುವತಿ ಆಲಿಯಾ