ಬೆಂಗಳೂರು: ಟ್ವಿಟರ್ ಬ್ಲೂ ಟಿಕ್ ಪಡೆಯಬೇಕು ಎಂತಾದರೆ ತಿಂಗಳು ಅಥವಾ ಒಂದು ವರ್ಷದ ಚಂದಾದಾರತ್ವ ಪಡೆಯಬೇಕು. ಈ ಕ್ರಮದಿಂದ ಹಲವಾರು ಸೆಲೆಬ್ರಿಟಿಗಳು ತಮ್ಮ ನೀಲಿ ಟಿಕ್ ಮಾರ್ಕ್ ಕಳೆದುಕೊಂಡಿದ್ದಾರೆ. ನಟ ಅಮಿತಾಭ್ ಬಚ್ಚನ್ (Amitabh Bachchan) ಈ ಬಗ್ಗೆ ತಮಾಷೆಯ ಟ್ವೀಟ್ ಪೋಸ್ಟ್ ಮಾಡಿದ್ದಾರೆ. ಟ್ವಿಟರ್ ಬ್ಲೂ ಚಂದಾದಾರಿಕೆ ಶುಲ್ಕವನ್ನು ಪಾವತಿಸಿಲಾಗಿದೆ, ರಿಸ್ಟೋರ್ ಮಾಡಬೇಕು ಎಂದು ವಿನಂತಿಸಿದ್ದಾರೆ.
ವಿರಾಟ್ ಕೊಹ್ಲಿ, ಸಿನಿಮಾ ನಟರಾದ ಅಮಿತಾಭ್ ಬಚ್ಚನ್, ಶಾರುಕ್ ಖಾನ್, ಯಶ್, ಅಲ್ಲು ಅರ್ಜುನ್ ಸೇರಿದಂತೆ ಹಲವರ ಟ್ವಿಟರ್ ಬ್ಲೂ ಟಿಕ್ ಮಾಯವಾಗಿದೆ. ಮರಳಿ ಬ್ಲೂಟಿಕ್ ಪಡೆಯಬೇಕು ಎಂದರೆ ಹಣ ಪಾವತಿಸಬೇಕು. ಏಪ್ರಿಲ್ 20ರಿಂದ ಈ ನಿಯಮ ಜಾರಿಗೆ ಬಂದಿದೆ. ಈ ಬಗ್ಗೆ ಅಮಿತಾಭ್ ಟ್ವೀಟ್ ಮಾಡಿ ʻʻಬ್ಲೂ ಟಿಕ್ ಚಂದಾದಾರಿಕೆ ಶುಲ್ಕವನ್ನು , ಪಾವತಿಸಿದ್ದೇನೆ. ಆದ್ದರಿಂದ ದಯವಿಟ್ಟು ನನ್ನ ಹೆಸರಿನ ಮುಂದೆ ನೀಲಿ ಕಮಲವನ್ನು ಹಿಂತಿರುಗಿಸಿ. ಇದರಿಂದ ಜನರಿಗೆ ನಾನು ಅಮಿತಾಭ್ ಬಚ್ಚನ್ ಎಂದು ತಿಳಿಯುತ್ತದೆ. ನಾನು ವಿನಂತಿಸುತ್ತಿದ್ದೇನೆ. ಕೈಗಳನ್ನು ಮುಗಿದು ಕೇಳುತ್ತೇನೆ. ನಿಮ್ಮ ಕಾಲಿಗೆ ಬೀಳಬೇಕೇ?” ಎಂದು ಬಚ್ಚನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ನೆಟ್ಟಿಗರು ಕಾಮೆಂಟ್ ಮೂಲಕ ʻʻತಾಳ್ಮೆಯಿಂದರಿ. 3, 4 ದಿನ ಕಾಯಿರಿ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಮಿಸ್ಟರ್ ಬಚ್ಚನ್, ಎಲೋನ್ ಮಸ್ಕ್ ಒಬ್ಬ ವಿದೇಶಿ, ಯಾರ ಮಾತನ್ನೂ ಕೇಳುವುದಿಲ್ಲ. ನೀವು ಕೆಲವು ದಿನ ಕಾಯಬೇಕಾಗುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮತ್ತು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ರಾಜಕಾರಣಿಗಳು ತಮ್ಮ ಟ್ವಿಟರ್ ಖಾತೆಗಳಿಂದ ಬ್ಲೂ ಟಿಕ್‌ಗಳನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: Amithabh Bachachan | ಮೆಸ್ಸಿ ಮತ್ತು ರೊನಾಲ್ಡೊ ಕೈ ಕುಲುಕಿದ ಅಮಿತಾಭ್ ಬಚ್ಚನ್, ವಿಡಿಯೊ ವೈರಲ್
ಅಮಿತಾಭ್ ಬಚ್ಚನ್ ಟ್ವೀಟ್
ಬ್ಲೂಟಿಕ್ ಬೇಕೆಂದರೆ ಹಣ ಕಟ್ಟಲೇಬೇಕು
ಏಪ್ರಿಲ್ 1ರಿಂದ ಟ್ವಿಟ್ಟರ್ ನಿಯಮಗಳನ್ನು ಬದಲಿಸಿ ಬೇಗ ಸಬ್‌ಸ್ಕ್ರೈಬ್ ಮಾಡಿಕೊಳ್ಳುವಂತೆ ಟ್ವಿಟ್ಟರ್ ಹೇಳಿತ್ತು. ಕೆಲವರು ಮುನ್ನೆಚ್ಚರಿಕೆ ವಹಿಸಿದ ಕಾರಣ ಅವರ ಖಾತೆಗಳ ಬ್ಲೂಟಿಕ್ ಉಳಿದುಕೊಂಡಿದೆ. ಇನ್ನು ಈ ಟ್ವಿಟರ್ ಬ್ಲೂಟಿಕ್‌ಗಾಗಿ ಒಂದು ತಿಂಗಳಿಗೆ 900 ಅಥವಾ ವರ್ಷಕ್ಕೆ 9400 ರೂ. ಹಣ ಪಾವತಿಸಬೇಕು. ಬ್ಲೂಟಿಕ್ ಚಂದಾದಾರರಿಗೆ ಅಕ್ಷರಮಿತಿ ಹೆಚ್ಚಿಸುವುದಾಗಿ ಹೇಳಿದ್ದರು. ವಿದೇಶಿ ಸೆಲೆಬ್ರಿಟಿಗಳಿಗೂ ಇದೇ ರೀತಿ ಆಗಿದೆ. ಟ್ವೀಟ್ನ ಅಕ್ಷರ ಮಿತಿಯನ್ನು ಶೀಘ್ರದಲ್ಲೇ 10,000ಕ್ಕೆ ಹೆಚ್ಚಿಸಲಾಗುವುದು ಎಂದು ಎಲಾನ್ ಮಸ್ಕ್ ಹೇಳಿದ್ದರು.