ಬೆಂಗಳೂರು; ಸ್ಯಾಂಡಲ್‌ವುಡ್ ಲೆಜೆಂಡ್ ಎಂದು ಕರೆಸಿಕೊಳ್ಳುವ ಅನಂತ್ ನಾಗ್ (Anant Nag) ಮಾಡದಿರುವ ಪಾತ್ರವಿಲ್ಲ. ಗಂಭೀರ ಪಾತ್ರವೇ ಆಗಲಿ ಅಥವಾ ಕಾಮಿಡಿ ಜಾನರ್ ಆಗಿರಲಿ ಅನಂತ್ ನಾಗ್ ಸಲೀಸಾಗಿ ಮಾಡಿಬಿಡುತ್ತಾರೆ. ಆ್ಯಕ್ಷನ್ ಪ್ರಧಾನ ಸಿನಿಮಾಗಳಲ್ಲೂ ಅನಂತ್ ನಾಗ್ ಮಿಂಚಿದ್ದುಂಟು. ಇದೀಗ ಅನಂತ್ ನಾಗ್ ಚಿತ್ರರಂಗದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಶಿವರಾಜ್‌ಕುಮಾರ್ ಪೋಸ್ಟ್ ಮೂಲಕ ಸ್ಪೆಷಲ್ ವಿಶ್ ಮಾಡಿದ್ದಾರೆ.
ಶಿವಣ್ಣ ಪೋಸ್ಟ್ ಮಾಡಿ ʻʻ‘ಚಿತ್ರರಂಗದಲ್ಲಿ 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಅನಂತ್ ನಾಗ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆ. ನಿಮ್ಮ ಪ್ರತಿಭೆ ವರ್ಚಸ್ಸು ತಲೆಮಾರುಗಳವರೆಗೆ ಪ್ರೇರಣೆ’ ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಪೋಸ್ಟ್ ಮಾಡಿ ʻʻಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕʼʼಎಂದು ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ‘ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರದಲ್ಲಿ ಅನಂತ್ ನಾಗ್ ಅವರು ನಟಿಸಿದ್ದರು. ಅವರು ಮಾಡಿದ ಪಾತ್ರ ಗಮನ ಸೆಳೆದಿತ್ತು. ಹೀಗಾಗಿ ರಿಷಬ್ ಹಾಗೂ ಅನಂತ್ ನಾಗ್ ಮಧ್ಯೆ ಒಳ್ಳೆಯ ಒಡನಾಟ ಇದೆ.
ಇದನ್ನೂ ಓದಿ: Anant Nag: ಬಿಜೆಪಿ ಮೂಲಕ ರಾಜಕೀಯ ರಿ ಎಂಟ್ರಿ ಮುಂದೂಡಿದ ಅನಂತ್ ನಾಗ್: ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು
ಈವರೆಗೂ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅನಂತ್ ನಾಗ್, ಇದೀಗ +300 ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಸುಮಾರು 50 ವರ್ಷಗಳಿಂದ ಕನ್ನಡ ಸಿನಿಮಾ ರಂಗಕ್ಕೆ ಸೇವೆ ಸಲ್ಲಿಸುತ್ತಿರುವ ಅನಂತ್ ನಾಗ್ ಅವರಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಅದರಲ್ಲೂ ಕೆಜಿಎಫ್ ಸಿನಿಮಾದಲ್ಲಿ ಅವರು ಮಾಡಿದ್ದ ನಟನೆಯನ್ನ ಎಂದಿಗೂ ಮರೆಯಲು ಆಗುವುದಿಲ್ಲ.
ಡೈಲಾಗ್ ಕಿಂಗ್..!
ಒಂದೊಂದು ಪೇಜ್ ಡೈಲಾಗ್ ಇದ್ದರೂ ಸರಳವಾಗಿ, ಸಲೀಸಾಗಿ ಹೇಳಿಬಿಡುತ್ತಿದ್ದರು ಅನಂತ್ ನಾಗ್. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ‘ ಇದಕ್ಕೊಂದು ಉದಾಹರಣೆ. ಅದರಲ್ಲೂ 80, 90ರ ದಶಕದಲ್ಲಿ ಅನಂತ್ ನಾಗ್ ಅವರ ಜತೆಗೆ ಸಿನಿಮಾ ಮಾಡಲು ನಿರ್ದೇಶಕರು ಮುಗಿಬೀಳುತ್ತಿದ್ದರು. ಪೋಷಕ ಪಾತ್ರವೇ ಇರಲಿ, ನಾಯಕನ ಪಾತ್ರವೇ ಆಗಿರಲಿ ಅನಂತ್ ನಾಗ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು. ಇನ್ನು ಯಾವುದೇ ಸಿನಿಮಾ ಬಂದರೂ ಕುಟುಂಬ ಸಮೇತ ಕೂತು ನೋಡಲು ಮುಜುಗರ ಇರುತ್ತಿರಲಿಲ್ಲ. ಹೀಗಾಗಿ ಅನಂತ್ ನಾಗ್ ಅವರ ಸಿನಿಮಾಗಳು ಕನ್ನಡ ನಾಡಿನ ಮನೆಮಾತಾಗಿದ್ದವು.
ಸಾಲು ಸಾಲು ಹಿಟ್..!
ನಟ ಅನಂತ್ ನಾಗ್ 5 ದಶಕ ಅಂದರೆ ಬರೊಬ್ಬರಿ ಅರ್ಧ ಶತಮಾನಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯಲ್ಲಿ ಸಾಲುಸಾಲು ಹಿಟ್ ಸಿನಿಮಾ ನೀಡಿದ್ದ ಅನಂತ್ ನಾಗ್ ಯಾವುದೇ ಪಾತ್ರವಾದರೂ ಸೈ ಎನಿಸಿಕೊಳ್ಳುತ್ತಿದ್ದರು. ಗೌರಿ ಗಣೇಶ, ಗಣೇಶನ ಮದುವೆ, ಯಾರಿಗೂ ಹೇಳಬೇಡಿ, ಮನೇಲಿ ಇಲಿ ಬೀದಿಲಿ ಹುಲಿ, ಒಂದು ಸಿನಿಮಾ ಕಥೆ, ಬೆಂಕಿಯ ಬಲೆ, ಅರುಣರಾಗ, ಅನುಪಮಾ, ಮುದುಡಿದ ತಾವರೆ ಅರಳಿತು, ನಾ ನಿನ್ನ ಬಿಡಲಾರೆ ಹೀಗೆ ನಟ ಅನಂತ್ ನಾಗ್ ಅಭಿನಯಿಸಿರುವ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.