Site icon Vistara News

Kantara Cinema : ಕಾಂತಾರದ ಮುಡಿಗೆ ಮತ್ತೊಂದು ಗರಿ; ಸಿಕ್ಕಿತು ಅಂತಾರಾಷ್ಟ್ರೀಯ ಪ್ರಶಸ್ತಿ

Silver peacock

ಗೋವಾ: ಕನ್ನಡದ ಸೂಪರ್ ಹಿಟ್​ ಸಿನಿಮಾ ಕಾಂತಾರದ (Kantara Cinema) ಯಶಸ್ಸಿನ ಹಾದಿಯಲ್ಲಿ ಮತ್ತೊಂದು ವಿಶೇಷ ಮನ್ನಣೆ ದೊರಕಿದೆ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಿಕ ಕತೆಯನ್ನು ಹೊಂದಿರುವ ಕಾಂತಾರ ಸಿನಿಮಾ ಚೊಚ್ಚಲ ಆವೃತ್ತಿಯ “ಸಿಲ್ವರ್ ಪಿಕಾಕ್​ ಅವಾರ್ಡ್’​​ ತನ್ನದಾಗಿಸಿಕೊಂಡಿದೆ. ಇದು ಉದ್ಘಾಟನಾ ಆವೃತ್ತಿಯ ಪ್ರಶಸ್ತಿಯಾಗಿದ್ದು ಕಾಂತಾರ ಸಿನಿಮಾ ತಂಡದ ಹಾಗೂ ಕನ್ನಡಿಗರ ಪಾಲಿಗೆ ವಿಶೇಷವಾಗಿದೆ. ಇದು ಕನ್ನಡ ಸಿನಿಮಾ ಒಂದಕ್ಕೆ ದೊರೆತ ಮೊಟ್ಟ ಮೊದಲ ಪ್ರಶಸ್ತಿಯೂ ಹೌದು.

ಹೊಂಬಾಳೆ ಫಿಲ್ಮ್ಸ್​​ ಈ ಮಾಹಿತಿಯನ್ನು ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಅಭಿಮಾನಿಗಳ ಶಹಬ್ಬಾಸ್​ಗಿರಿ ಲಭಿಸುತ್ತಿದೆ. ಗೋವಾದಲ್ಲಿ ನಡೆಯುತ್ತಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಕಾಂತಾರ ತಂಡಕ್ಕೆ ಈ ಪ್ರಶಸ್ತಿಯನ್ನು ವಿತರಣೆ ಮಾಡಲಾಗಿದೆ.

ಕಾಂತಾರ ಚಾಪ್ಟರ್​ 1 ಟೀಸರ್​ಗೆ ವಾಹ್​ ಎಂದ ಗೂಗಲ್

ಬೆಂಗಳೂರು: ರಿಷಭ್​ ಶೆಟ್ಟಿ ನಿರ್ದೇಶನದ ಮತ್ತು ಹೊಂಬಾಳೆ ಫೀಲ್ಮ್ಸ್​ ನಿರ್ಮಾಣದ ಕಾಂತಾರ ಚಾಪ್ಟರ್ 1 ಸಿನಿಮಾದ ಟೀಸರ್​ ಸೋಮವಾರ (ನವೆಂಬರ್​ 27) ಅನಾವರಣಗೊಂಡಿತ್ತು. ಮೊದಲ ಕಾಂತಾರ ಸಿನಿಮಾದ ಸೂಪರ್​ ಹಿಟ್​ ಇತಿಹಾಸದ ಹಿನ್ನೆಲೆಯಲ್ಲಿ ಈ ವಿಡಿಯೊ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಗಳು ಇದ್ದವು. ಇದೀಗ ಎಲ್ಲರ ನಿರೀಕ್ಷೆಗಳನ್ನು ಮೀರಿ ಸಿನಿಮಾದ ಫಸ್ಟ್​ ಲುಕ್​ ಜನಮೆಚ್ಚುಗೆ ಗಳಿಸಿದೆ. ರಿಷಭ್​ ಅವರ ಲುಕ್​ ಹಾಗೂ ವಿಡಿಯೊ ನಿರ್ಮಾಣದ ಹಿಂದಿರುವ ಅದ್ಧೂರಿತನದ ಬಗ್ಗೆ ಶಹಬ್ಬಾಸ್​ಗಿರಿಗಳು ಬರುತ್ತಿವೆ. ಇದೀಗ ಅದೆಲ್ಲದಕ್ಕಿಂತ ಹೆಚ್ಚಾಗಿ ವಿಶ್ವದ ಅತಿ ದೊಡ್ಡ ಸರ್ಚ್ ಎಂಜಿನ್​ ಗೂಗಲ್​ ಕೂಡ ಕಾಂತಾರದ ಫಸ್ಟ್​ ಲುಕ್ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದು, ವಾಹ್​ ಎಂದು ಉದ್ಗಾರ ತೆಗೆದಿದೆ.

2024 ಹೆಚ್ಚು ರೋಮಾಂಚನಕಾರಿಯಾಗಿರಲಿದೆ. ಕಾಂತಾರ ಟೀಸರ್​ ಅನ್ನು ನೋಡಿದೆ. ವಾಹ್​ ಎಂದು ಹೇಳದಿರಲು ಸಾಧ್ಯವೇ ಇಲ್ಲ ಎಂದು ಗೂಗಲ್​ ಇಂಡಿಯಾ ತನ್ನ ಹುಡುಕಾಟದ (ಸರ್ಚ್​) ಪೇಜ್​ನಲ್ಲಿ ಬರೆದುಕೊಂಡಿದೆ. ಗೂಗಲ್ ಈ ರೀತಿ ಹೇಳುವುದಕ್ಕೊಂದು ಕಾರಣವಿದೆ. ಈ ಟೀಸರ್ ಬಿಡುಗಡೆಗೊಂಡ ಒಂದೇ ದಿನಲ್ಲಿ 77 ಲಕ್ಷಕ್ಕೂ ಅಧಿಕ ಮಂದಿ ಅದಕ್ಕಾಗಿ ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದಾರೆ. ಸರ್ಚ್​ ಎಂಜಿನ್ ಒಂದಕ್ಕೆ ಇಂಥ ಹುಡುಕಾಟಗಳು ದೊಡ್ಡ ಬೋನಸ್. ಹೀಗಾಗಿ ಗೂಗಲ್​ ಕಾಂತಾರದ ಜನಪ್ರಿಯತೆಯನ್ನು ಮೆಚ್ಚಿದೆ.

ಕಾಂತಾರ; ಚಾಪ್ಟರ್‌ 1 ಫಸ್ಟ್ ಲುಕ್‌ನಲ್ಲಿ ರಿಷಬ್ ಶೆಟ್ಟಿ ರೌದ್ರಾವತಾರ

ಕಾಂತಾರʼ ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ ಹಾಗೂ ನಟಿಸಿದ್ದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಸಿನಿಮಾದ ಫಸ್ಟ್‌ ಲುಕ್‌ ರಿವೀಲ್‌ ಯಾವಾಗ ಎಂಬುದು ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಇದೀಗ ಡಿವೈನ್ಸ್‌ ಸ್ಟಾರ್‌ ತಮ್ಮ ರೌದ್ರಾವತಾರವನ್ನು ತೋರಿಸಿದ್ದಾರೆ. ಇಂಗ್ಲಿಷ್‌ನಲ್ಲಿಯೇ ಕಾಂತಾರ ಚಾಪ್ಟರ್‌ -1 ಲುಕ್ ಬಿಡುಗಡೆಯಾಗಿದೆ. ಪ್ರತಿಕ್ಷಣವು ದೈವಿಕ ಸ್ಪರ್ಶ ನೀಡುವಂತಹ ಹಿನ್ನೆಲೆ ಧ್ವನಿಯಲ್ಲಿ ತಮ್ಮ ಅವತಾರವನ್ನು ಬಹಿರಂಗೊಳಿಸಿದ್ದಾರೆ.

ಕೆಜಿಎಫ್ ಚಾಪ್ಟರ್ 2 (KGF Chapter 2) ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೇಗೆ ಖ್ಯಾತಿ ಗಳಿಸಿತೋ ಅದೇ ರೀತಿ ಕಾಂತಾರ 2 ಕೂಡ ಅಷ್ಟೇ ಎತ್ತರದ ನಿರೀಕ್ಷೆಯನ್ನು ಹೊತ್ತುಕೊಂಡಿದೆ. ಕಾಂತಾರ-2 ಸಿನಿಮಾ ಅಪ್‌ಡೇಟ್‌ಗಾಗಿ ಸಿನಿರಸಿಕರು ಹಲವು ದಿನಗಳಿಂದ ಕಾದು ಕುಳಿತ್ತಿದ್ದರು. ಇದೀಗ ಸಿನಿಮಾದ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ.

ಇತಿಹಾಸದ ನಿಗೂಢ ಸತ್ಯ ಹೇಳುವುದಕ್ಕೆ ರಿಷಬ್ ಶೆಟ್ಟಿ ತಯಾರಿ ಮಾಡಿಕೊಂಡಿದ್ದಾರೆ. ವಿಶ್ವಾದ್ಯಂತ ಸಿನಿಮಾ ಏಳು ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಕಾಡುಬೆಟ್ಟು ಶಿವನ ತಂದೆಯ ರಹಸ್ಯ ರಿವೀಲ್ ಮಾಡಲು ಹೊರಟ್ಟಿದ್ದಾರೆ ರಿಷಬ್‌. 2024ಕ್ಕೆ ‘ಕಾಂತಾರ-1’ ಚಿತ್ರಮಂದಿರಗಳಿಗೆ ಬರಲಿದೆ.

ಇದನ್ನೂ ಓದಿ : ಕನ್ನಡ ಚಿತ್ರಗಳನ್ನು ನಿರಾಕರಿಸುತ್ತಿರುವ ಒಟಿಟಿ ವೇದಿಕೆಗಳು: ರಿಷಬ್ ಶೆಟ್ಟಿ ಆರೋಪ

ಕಾಂತಾರʼವನ್ನು ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಈಗಾಗಲೇ ಕಾಂತಾರ 2 ಸಿನಿಮಾ ಕೆಲಸಗಳು ಭರದಿಂದ ಸಾಗಿದೆ. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ (budget of 125 crores) ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Exit mobile version