ಅಯೋಧ್ಯೆ ರಾಮ ಮಂದಿರದಲ್ಲಿ (Ram Mandir) ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಾಣ ಪ್ರತಿಷ್ಠೆ ಮಾಡಲಿದ್ದಾರೆ. ಪ್ರತಿಷ್ಠಾಪನೆಯು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ಈಗಾಗಲೇ ಅಯೋಧ್ಯೆಗೆ ನಟ ಅನುಪಮ್ ಖೇರ್ ತಲುಪಿದ್ದಾರೆ. ಸೋಮವಾರ ಬೆಳಗ್ಗೆ (ಜ.22) ʻಹನುಮಾನ್ ಗಢಿʼ ದೇವಸ್ಥಾನದಲ್ಲಿ ಅನುಪಮ್ ಖೇರ್ ಪ್ರಾರ್ಥನೆ ಸಲ್ಲಿಸಿದರು.
ವಿಡಿಯೋವೊಂದರಲ್ಲಿ ಅನುಪಮ್ ಖೇರ್ ಕೈ ಜೋಡಿಸಿ ಪ್ರಾರ್ಥಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅನುಪಮ್ ಖೇರ್, ʻʻಶ್ರೀರಾಮನ ಬಳಿಗೆ ಹೋಗುವ ಮುನ್ನ ಹನುಮಂತನ ದರ್ಶನ ಪಡೆಯುವುದು ಬಹಳ ಮುಖ್ಯ. ಅಯೋಧ್ಯೆಯ ವಾತಾವರಣ ತುಂಬಾ ಸೊಗಸಾಗಿದೆ. ಎಲ್ಲೆಡೆ ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿದೆ. ಎಲ್ಲೆಲ್ಲೂ ರಾಮನ ಸಾನ್ನಿಧ್ಯವಿದೆ. ಮತ್ತೆ ದೀಪಾವಳಿ ಬಂದಿದೆ ಇದೇ ನಿಜವಾದ ದೀಪಾವಳಿʼʼ ಎಂದರು.
ರಜನಿಕಾಂತ್ ಭೇಟಿ ಮಾಡಿದ ಅನುಪಮ್
ಅನುಪಮ್ ಅವರು ಹಿರಿಯ ನಟ ರಜನಿಕಾಂತ್ ಅವರೊಂದಿಗೆ ಪೋಸ್ ಕೊಟ್ಟಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಫೋಟೊದಲ್ಲಿ ಇಬ್ಬರೂ ನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅನುಪಮ್ ಅವರನ್ನು ರಜನಿಕಾಂತ್ ಬಿಗಿದಪ್ಪಿದ್ದರು. ರಜನಿಕಾಂತ್ ಹಸಿರು ಶರ್ಟ್ ಧರಿಸಿದ್ದರು. ಅನುಪಮ್ ಬ್ಲೇಜರ್, ಶಾಲು ಮತ್ತು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು. ಫೋಟೊವನ್ನು ಹಂಚಿಕೊಂಡ ಅವರು, “ನನ್ನ ಸ್ನೇಹಿತ ಮತ್ತು ಏಕೈಕ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಶ್ರೀ ರಾಮ ಜನ್ಮ ಭೂಮಿ, ಅಯೋಧ್ಯೆಯಲ್ಲಿ ಭೇಟಿಯಾದೆ. ಜೈ ಶ್ರೀ ರಾಮ್! ತಲೈವಾ” ಎಂದು ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ: Ram Mandir : ಮುಂಬೈ ಬಳಿ ಎರಡು ಸಮುದಾಯಗಳ ನಡುವೆ ಮಾರಾಮಾರಿ; ಐದು ಮಂದಿಯ ಸೆರೆ
ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ರಣಬೀರ್ ಕಪೂರ್, ಆಲಿಯಾ ಭಟ್, ಆಯುಷ್ಮಾನ್ ಖುರಾನಾ, ಕಂಗನಾ ರಣಾವತ್, ಟೈಗರ್ ಶ್ರಾಫ್ ಮತ್ತು ಆಶಾ ಭೋಸ್ಲೆ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆಯಲ್ಲಿ ಬಿಗಿ ಭದ್ರತೆಯ ನಡುವೆ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ.
ಪ್ರತಿಷ್ಠಾಪನಾ ಸಮಾರಂಭದ ನಂತರ ದೇವಾಲಯವು ಸಾರ್ವಜನಿಕರಿಗೆ ತೆರೆದಿರುತ್ತದೆ. ಅಧಿಕಾರಿಗಳು ಹೆಚ್ಚಿನ ಸಂಖ್ಯೆಯ ಭಕ್ತರನ್ನು ನಿರೀಕ್ಷಿಸುತ್ತಾರೆ, ಪ್ರತಿದಿನ ಅಂದಾಜು 100,000 ಸಂದರ್ಶಕರನ್ನು ನಿರೀಕ್ಷಿಸಲಾಗಿದೆ.