ಮುಂಬೈ: ದೇಶಾದ್ಯಂತ ದಕ್ಷಿಣ ಭಾರತದ ಸಿನಿಮಾಗಳ ಕುರಿತು ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ, ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್, ಅಲ್ಲು ಅರ್ಜುನ್ ನಟನೆಯ ಪುಷ್ಪ: ದಿ ರೈಸ್, ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2, ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾಗಳು ಜನಮೆಚ್ಚುಗೆ ಪಡೆದಿವೆ. ದಕ್ಷಿಣ ಭಾರತದ ನಟರೀಗ ದೇಶಾದ್ಯಂತ ಸ್ಟಾರ್ ವ್ಯಾಲ್ಯೂ ಗಳಿಸಿದ್ದಾರೆ. ಇದರ ಬೆನ್ನಲ್ಲೇ, ದಕ್ಷಿಣ ಭಾರತದ ಸಿನಿಮಾಗಳನ್ನು ಉಲ್ಲೇಖಿಸುವ ಮೂಲಕ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ವಿವಾದ ಸೃಷ್ಟಿಸಿದ್ದಾರೆ.
“ದೇಶದಲ್ಲೀಗ ಪ್ಯಾನ್ ಇಂಡಿಯಾ ಚಿತ್ರಗಳ ಟ್ರೆಂಡ್ ಶುರುವಾಗಿದೆ. ಆದರೆ, ಇಂತಹ ಶೇ.5-10ರಷ್ಟು ಚಿತ್ರಗಳು ಮಾತ್ರ ಯಶಸ್ಸು ಗಳಿಸುತ್ತಿವೆ. ಕಾಂತಾರ, ಪುಷ್ಪದಂತಹ ಸಿನಿಮಾಗಳು ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಿಸಲು ಉತ್ತೇಜನ ನೀಡುತ್ತಿವೆ. ಇವುಗಳಲ್ಲಿ ಕೆಜಿಎಫ್ ಚಾಪ್ಟರ್ 2 ಮಾತ್ರ ದೊಡ್ಡ ಯಶಸ್ಸು ಕಂಡಿತು. ಪ್ಯಾನ್ ಇಂಡಿಯಾ ಚಿತ್ರಗಳು ಗೆದ್ದರೆ ಮಾತ್ರ ಸಂತಸ. ಇಲ್ಲದಿದ್ದರೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಪುಷ್ಪ, ಕಾಂತಾರದಂತಹ ಸಿನಿಮಾಗಳನ್ನು ಮುಂದಿಟ್ಟುಕೊಂಡು ಬಾಲಿವುಡ್ ಸ್ವಯಂ ನಾಶವಾಗುತ್ತಿದೆ” ಎಂದು ಹೇಳಿದ್ದಾರೆ.
ಕಶ್ಯಪ್ ಅಭಿಪ್ರಾಯ ಒಪ್ಪದ ಅಗ್ನಿಹೋತ್ರಿ
ಅನುರಾಗ್ ಕಶ್ಯಪ್ ಹೇಳಿಕೆಗೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರೋಧ ವ್ಯಕ್ತಪಡಿಸಿದ್ದಾರೆ. “ಬಾಲಿವುಡ್‌ನ ಶ್ರೀಯುತರಾದ ಅನುರಾಗ್ ಕಶ್ಯಪ್ ಅವರ ಅಭಿಪ್ರಾಯವನ್ನು ನಾನು ಖಂಡಿತವಾಗಿಯೂ ಒಪ್ಪುವುದಿಲ್ಲ. ನೀವು ಒಪ್ಪುತ್ತೀರಾ” ಎಂದು ಟ್ವಿಟರ್‌ನಲ್ಲಿ ಜನರ ಅಭಿಪ್ರಾಯ ಕೇಳಿದ್ದಾರೆ. ಅನುರಾಗ್ ಕಶ್ಯಪ್ ಹೇಳಿಕೆಗೆ ಜಾಲತಾಣದಲ್ಲಿ ನೂರಾರು ಜನ ಖಂಡನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Kantara Movie | ಕಾಂತಾರವನ್ನು ಕೊಂಡಾಡಿದ ಬಾಲಿವುಡ್ ನಟ ಹೃತಿಕ್ ರೋಷನ್!