ಬೆಂಗಳೂರು: ಸಂಗೀತ ಸಂಯೋಜಕ ಎಆರ್ ರೆಹಮಾನ್ (AR Rahman) ತಮ್ಮ ಪತ್ನಿಗೆ ಪ್ರಶಸ್ತಿ ಸಮಾರಂಭದಲ್ಲಿ ಹಿಂದಿಯಲ್ಲಿ ಮಾತನಾಡದೇ ತಮಿಳಿನಲ್ಲಿ ಮಾತನಾಡುವಂತೆ ಹೇಳುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚೆನ್ನೈನಲ್ಲಿ ನಡೆದ ವಿಕಟನ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ರೆಹಮಾನ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಪತ್ನಿ ಸಾಯಿರಾ ಬಾನು ಅವರನ್ನು ವೇದಿಕೆಗೆ ಆಹ್ವಾನಿಸಿ ಕೆಲವು ಮಾತುಗಳನ್ನು ಹೇಳಲು ಕರೆದರು. ಅಷ್ಟೇ ಅಲ್ಲದೇ ಅವರ ಜತೆಯಲ್ಲಿ ಟ್ರೋಫಿಯನ್ನು ಸ್ವೀಕರಿಸಿದರು.
ರೆಹಮಾನ್ ಅವರು ಪತ್ನಿ ಸಾಯಿರಾ ಬಾನು ಅವರಿಗೆ ಧನ್ಯವಾದ ಹೇಳಿದಾಗ ಸಾಯಿರಾ ಭಾವುಕರಾದರು. ಟ್ರೋಫಿಯನ್ನು ತನಗೆ ನೀಡಿದ ರೆಹಮಾನ್ ಅವರನ್ನು ತಬ್ಬಿಕೊಂಡರು. ಮಾತನಾಡಲು ಮುಂದಾದಾಗ, ರೆಹಮಾನ್ ಅವರು ಪತ್ನಿಗೆ “ದಯವಿಟ್ಟು ತಮಿಳಿನಲ್ಲಿ ಮಾತನಾಡು, ಹಿಂದಿಯಲ್ಲ ಬೇಡ ” ಎಂದಿದ್ದಾರೆ. ಈ ವೇಳೆ ಸಾಯಿರಾ ನಗುತ್ತಲೇ “ಕ್ಷಮಿಸಿ, ನನಗೆ ತಮಿಳಿನಲ್ಲಿ ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ. ಆದ್ದರಿಂದ, ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ತುಂಬಾ ಸಂತೋಷ ಮತ್ತು ಉತ್ಸುಕನಾಗಿದ್ದೇನೆ. ಏಕೆಂದರೆ ಅವರ ಧ್ವನಿ ನನ್ನ ನೆಚ್ಚಿನದು. ನಾನು ಅವರ ಧ್ವನಿಗೆ ಪ್ರೀತಿಯಲ್ಲಿ ಬಿದ್ದೆ. ಇದಿಷ್ಟು ನಾನು ಹೇಳಬಲ್ಲೆ.” ಎಂದಿದ್ದಾರೆ.
ರೆಹಮಾನ್ ಮತ್ತು ಸೈರಾ 1995ರಲ್ಲಿ ವಿವಾಹವಾದರು. ಹಲವಾರು ವರ್ಷಗಳ ಹಿಂದೆ ಚಾಟ್ ಶೋನಲ್ಲಿ ತಮ್ಮ ವಿವಾಹದ ಕುರಿತು ಹೇಳಿಕೊಂಡಿದ್ದರು. ರೆಹಮಾನ್ ಮಾತನಾಡಿ “ನಿಜ ಹೇಳಬೇಕೆಂದರೆ, ವಧುವನ್ನು ಹುಡುಕಲು ನನಗೆ ಸಮಯವಿರಲಿಲ್ಲ. ನಾನು ಎಲ್ಲ ಸಿನಿಮಾಗಳನ್ನು ಬಾಂಬೆಯಲ್ಲಿ ಮಾಡುತ್ತಿದ್ದೆ. ಆದ್ದರಿಂದ ನಾನು ತುಂಬಾ ಬ್ಯುಸಿಯಾಗಿದ್ದೆ. ಒಂದು ದಿನ ಮದುವೆಯಾಗಲು ಇದು ಸರಿಯಾದ ಸಮಯ ಎಂದು ನನಗೆ ತಿಳಿದಿತ್ತು. ನನಗೆ 29 ವರ್ಷ ಆಗ. ಮದುವೆ ಮಾಡು ಎಂದು ತಾಯಿಗೆ ಹೇಳಿದೆ ಎಂದು ಹೇಳಿಕೊಂಡಿದ್ದರು.
ವೈರಲ್ ವಿಡಿಯೊ
ಎಆರ್ ರೆಹಮಾನ್ ಅವರು ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್: ಭಾಗ 2 ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರ ಏಪ್ರಿಲ್ 28ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ವರ್ಷ ಶಿವಕಾರ್ತಿಕೇಯನ್ ಅವರ ʻಅಯಾಲನ್ʼ ಮತ್ತು ಉದಯನಿಧಿ ಸ್ಟಾಲಿನ್ ಅವರ ʻಮಾಮಣ್ಣನ್ ʼ ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ .ಮೈದಾನ್, ಪಿಪ್ಪಾ, ಆಡುಜೀವಿತಂ, ಲಾಲ್ ಸಲಾಮ್ ಮತ್ತು ಗಾಂಧಿ ಟಾಕ್ಸ್ ಅವರ ಮುಂಬರುವ ಕೆಲವು ಚಲನಚಿತ್ರಗಳು.