Site icon Vistara News

Shivaraj Kumar | ಸೆಟ್ಟೇರಲಿವೆ ಬರ್ತ್‌ಡೇ ಬಾಯ್‌ ಸಾಲು ಸಾಲು ಚಿತ್ರಗಳು, ಆ್ಯಕ್ಷನ್ ಕಟ್‌ ಹೇಳಲಿರುವ ಅರ್ಜುನ್‌ ಜನ್ಯ

Shivaraj Kumar

ಬೆಂಗಳೂರು : ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ (Shivaraj Kumar) ಅವರ ಜನುಮದಿನ ಪ್ರಯುಕ್ತ ಸಾಲು ಸಾಲು ಸಿನಿಮಾಗಳ ಪೋಸ್ಟರ್‌ಗಳು ಬಿಡುಗಡೆಗೊಂಡಿವೆ. ಶಿವಣ್ಣ ಹೊಸದಾಗಿ ಒಪ್ಪಿಕೊಂಡಿರುವ ಚಿತ್ರದ ಶೀರ್ಷಿಕೆ ಹಾಗೂ ಶಿವಣ್ಣನ ಲುಕ್‌ ರಿವೀಲ್‌ ಮಾಡುವುದರ ಮೂಲಕ ಶುಭ ಹಾರೈಸುತ್ತಿದ್ದಾರೆ.

ಚಿತ್ರ 45

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಸೆಂಚುರಿ ಸ್ಟಾರ್ ಶಿವರಾಜ್‌ ಕುಮಾರ್ ಅವರ ಕಾಂಬಿನೇಷನ್‌ನಲ್ಲಿ ನೂತನ ಚಿತ್ರಕ್ಕೆ 45 ಎಂದು ಶೀರ್ಷಿಕೆಯನ್ನಿಡಲಾಗಿದೆ. ರಮೇಶ್‌ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಬಿಡುಗಡೆಗೊಳ್ಳವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಮಲಯಾಳಂನಲ್ಲಿ ನಟ ಪೃಥ್ವಿರಾಜ್ ಸುಕುಮಾರನ್, ತೆಲುಗಿನಲ್ಲಿ ನಾಗಾರ್ಜುನ ಅಕ್ಕಿನೇನಿ ಮತ್ತು ತಮಿಳಿನಲ್ಲಿ ಶಿವ ಕಾರ್ತಿಕೇಯನ್ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ. ಚೊಚ್ಚಲ ನಿರ್ದೆಶನದಲ್ಲಿ ಅರ್ಜುನ್‌​ ಜನ್ಯ ಯಾವ ರೀತಿಯ ಕಥೆ ಹೇಳಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ.

ಇದನ್ನೂ ಓದಿ | Shivaraj Kumar Birthday | ಜನುಮದಿನದ ಸಂಭ್ರಮದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌

ʻಘೋಸ್ಟ್‌ʼ ಚಿತ್ರ

ʻಶತ್ರುಗಳು ಬಹುವಚನ, ಆಯುಧ ಏಕವಚನʼ ಎಂದು ಕ್ಯಾಪ್ಷನ್‌ ನೀಡಿ ʻಘೋಸ್ಟ್‌ʼ ಚಿತ್ರತಂಡ ಪೋಸ್ಟರ್‌ ಬಿಡುಗಡೆಗೊಳಿಸಿದೆ. ಇದು ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆಗೊಳ್ಳುತ್ತಿರುವುದು ವಿಶೇಷ. ಈ ಸಿನಿಮಾಗೆ ಶ್ರೀನಿವಾಸ ಕಲ್ಯಾಣ ಫೇಮ್‌ನ ಶ್ರೀನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಚಿತ್ರಗಳ ಪೈಕಿ ಶಿವಣ್ಣ ನಟಿಸಲಿರುವ 127ನೇ ಸಿನಿಮಾಗೆ ʻಅವನೇ ಶ್ರೀಮನ್ನಾರಾಯಣʼ ನಿರ್ದೇಶಕ ಸಚಿನ್ ರವಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮಹಾಭಾರತದ ಅಶ್ವತ್ಥಾಮನ ಸಾಹಸಗಾಥೆಯನ್ನು ಆಧರಿಸಿ ತಯಾರಾಗಲಿರುವ ಈ ಸಿನಿಮಾದ ಶೀರ್ಷಿಕೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ರಿವೀಲ್ ಆಗಲಿದೆ. ಟೈಟಲ್ ಬಳಿಕ ತಾಂತ್ರಿಕ ಬಳಗದ ಬಗ್ಗೆ ಮಾಹಿತಿ ಕೊಡಲು ಚಿತ್ರತಂಡ ‌ಪ್ಲಾನ್ ಹಾಕಿಕೊಂಡಿದೆ.

ಇದನ್ನೂ ಓದಿ | Vedha Movie | ಶಿವರಾಜ್‌ ಕುಮಾರ್‌ 125ನೇ ಚಿತ್ರದ ನಿರ್ಮಾಪಕಿ ಗೀತಾ; ಪೋಸ್ಟರ್‌ ರಿಲೀಸ್‌

ಇದೊಂದು ಆ್ಯಕ್ಷನ್ ಸ್ಪೈ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಅಮರತ್ವ ಪಡೆದಿರುವ ಅಶ್ವತ್ಥಾಮನ ಸುತ್ತ ಸಾಗುವ ಇಡೀ ಕಥೆಯಲ್ಲಿ ಶಿವಣ್ಣ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಚಿನ್ ಈ ಸಿನಿಮಾಗೆ ನಿರ್ದೇಶನದ ಜತೆಗೆ ನಿರ್ಮಾಣ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ತಮ್ಮದೇ ಹೋಮ್ ಬ್ಯಾನರ್ ಜತೆಗೆ ಕಾರ್ಪೊರೇಟ್ ಕಂಪನಿಯೊಂದರ ಜತೆಗೂಡಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.

ʻನೀ ಸಿಗೋವರೆಗೂʼ ಸಿನಿಮಾ ಪೋಸ್ಟರ್‌ ಬಿಡುಗಡೆಗೊಂಡಿದ್ದು, ಶಿವರಾಜ್‌ ಕುಮಾರ್‌ ಹೊಸ ಲುಕ್‌ನೊಂದಿಗೆ ಪರಿಚಯವಾಗಿದ್ದಾರೆ.

ಲೋಹಿತ್‌ ಎಚ್‌ ನಿರ್ದೆಶನದ ಸತ್ಯಮಂಗಳ ಪೋಸ್ಟರ್‌ ಬಿಡುಗಡೆಗೊಂಡಿದ್ದು, ಖಡಕ್‌ ಲುಕ್‌ನಲ್ಲಿ ಶಿವಣ್ಣ ಮಿಂಚುತ್ತಿದ್ದಾರೆ. ʻಸತ್ಯಮಂಗಳ – ರಹಸ್ಯಗಳನ್ನು ಹೊಂದಿರುವ ಅರಣ್ಯʼ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈ ಚಿತ್ರವನ್ನು ಕೃಷ್ಣ ಸಾರ್ಥಕ್‌ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ | ಹ್ಯಾಟ್ರಿಕ್ ಹೀರೋ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕರೇ ಸಾರಥಿ

Exit mobile version