ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಬೈರಾಗಿ ಚಿತ್ರದ ಪ್ರಮೋಷನ್ ಅದ್ಧೂರಿಯಗಿ ನಡೆಯುತ್ತಿದೆ. ಜುಲೈ 1ಕ್ಕೆ ತೆರೆಯ ಮೇಲೆ ರಾರಾಜಿಸಲಿರುವ ಈ ಸಿನಿಮಾ ಈಗಿನಿಂದಲೇ ಅಬ್ಬರಿಸುತ್ತಿದೆ.
ಶುಕ್ರವಾರ ಬೆಳಗ್ಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಬೆಂಗಳೂರಿನ ಗವಿಪುರಂನಿಂದ ಬೈರಾಗಿ ಯಾತ್ರೆ ಆರಂಭವಾಗಿದೆ. ಬೈರಾಗಿ ಚಿತ್ರತಂಡದ ಯಾತ್ರೆ ಬಿಡದಿ, ರಾಮನಗರ,ಮಂಡ್ಯ ಹಾಗೂ ಮೈಸೂರು ಮಾರ್ಗವಾಗಿ ಚಾಮರಾಜನಗರ ತಲುಪಲಿದೆ. ಶನಿವಾರ ಸಂಜೆ ಚಾಮರಾಜ ನಗರದ ಅಂಬೇಡ್ಕರ್ ಕ್ರೀಡಾಂಗಣ ಪ್ರೀ-ರಿಲೀಸ್ ಈವೆಂಟ್‌ಗೆ ಸಜ್ಜಾಗಿದೆ.
ಶಿವಣ್ಣ, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬಾರ್ ಜತೆ ಬೈರಾಗಿ ಚಿತ್ರತಂಡವನ್ನು ತಮ್ಮೂರಿನಲ್ಲಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿದೆ. ನೆಚ್ಚಿನ ನಟರಿಗೆ ಹಾರ ಹಾಕಿ ಸ್ವಾಗತ ಕೋರಿದ ರಾಮನಗರ ಜನತೆ, ಶಿವಣ್ಣನ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುತ್ತಿಗೆ ಇಟ್ಟಿದ್ದಾರೆ. ಶಿವಣ್ಣನನ್ನು ಕಂಡು ಪುನೀತ್ ರಾಜ್‌ಕುಮಾರ್ ನೆನಪಿಸಿಕೊಂಡು ʼಅಪ್ಪುʼ ಎಂದು ಕೂಗಿದ ಅಭಿಮಾನಿಗಳಿಗೆ ಶಿವಣ್ಣ ಸಮಾಧಾನದ ಮಾತುಗಳನ್ನಾಡಿದ್ದಾರೆ. ಪ್ರೀತಿ ಎನ್ನುವುದು ಮನಸ್ಸಿನಲ್ಲಿರಬೇಕು, ಬಾಯಲ್ಲಿ ಅಲ್ಲ ಎಂದು ಹೇಳುವ ಮೂಲಕ ಶಿವಣ್ಣ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ನೆಚ್ಚಿನ ನಟರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಈ ಹಿಂದೆ ಟಗರು ಸಿನಿಮಾದಲ್ಲಿ ಡಾಲಿ ಹಾಗೂ ಹ್ಯಾಟ್ರಿಕ್ ಹೀರೋ ಜೋಡಿ ಅಭಿಮಾನಿಗಳ ಕಣ್ಣಿಗೆ ರಸದೌತಣ ನೀಡಿತ್ತು. ಈಗ ಬೈರಾಗಿಯಲ್ಲಿ ಮತ್ತೊಮ್ಮೆ ಈ ಜೋಡಿ ಮುಖಾಮುಖಿಯಾಗಲಿದ್ದಾರೆ. ಅಲ್ಲದೆ, ಈ ಸಿನಿಮಾದ ಮತ್ತೊಂದು ಆಕರ್ಷಣೆ ಎಂದರೆ ಪೃಥ್ವಿ ಅಂಬಾರ್. ಈಗಾಗಲೇ ದಿಯಾ ಸಿನಿಮಾ ಮೂಲಕ ಯುವತಿಯರ ಮನಗೆದ್ದ ಪೃಥ್ವಿ ಕೂಡ ಬೈರಾಗಿಯಲ್ಲಿ ಬಣ್ಣ ಹಚ್ಚಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ ಈ ಅದ್ಧೂರಿ ಚಿತ್ರವನ್ನು ಕೃಷ್ಣ ಸಾರ್ಥಕ್ ಅವರು ನಿರ್ಮಿಸಿದ್ದಾರೆ. ಶಿವಣ್ಣ ಹಾಗೂ ಡಾಲಿ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.