Site icon Vistara News

BBK SEASON 10: ಮತ್ತೆ ಕಿತ್ತಾಡಿಕೊಂಡ ವಿನಯ್‌-ಸಂಗೀತಾ; ಇವರ ಜಗಳ ಮುಗಿಯೋದೇ ಇಲ್ವಾ?

big boss 5

big boss 5

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ರೋಚಕವಾಗಿ ಸಾಗಿದೆ. ಈಗಾಗಲೇ 50 ದಿನ ಪೂರೈಸಿ ಮುನ್ನಗ್ಗುತ್ತಿದೆ. ಈ ಮಧ್ಯೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಇಬ್ಬರು ಮನೆಯೊಳಗೆ ಪ್ರಶೇಶಿಸಿದ್ದಾರೆ. ಅಚ್ಚರಿ ಎಂದರೆ ಶೋ ಆರಂಭವಾದಾಗಿನಿಂದಲೂ ಕಿತ್ತಾಡುತ್ತಲೇ ಇರುವ ವಿನಯ್‌ ಗೌಡ ಮತ್ತು ಸಂಗೀತಾ ಶೃಂಗೇರಿ ನಡುವಿನ ಜಗಳ ನಿಲ್ಲುವ ಲಕ್ಷಣವೇ ಕಂಡು ಬರುತ್ತಿಲ್ಲ.

ಮತ್ತೆ ಹತ್ತಿಕೊಂಡ ಬೆಂಕಿ

ಬಿಗ್‌ ಬಾಸ್‌ನ ಹೊಸ ಪ್ರೋಮೊ ಬಿಡುಗಡೆಯಾಗಿದ್ದು, ಅದರಲ್ಲಿ ವಿನಯ್‌ ಮತ್ತು ಸಂಗೀತಾ ನಡುವೆ ವಾಗ್ವಾದ ನಡೆಯುತ್ತಿರುವುದು ಕಂಡು ಬಂದಿದೆ. ಯಾರಲ್ಲಿ ಕೆಟ್ಟತನ ಹಾಗೂ ಯಾರಲ್ಲಿ ಒಳ್ಳೆಯತನ ಇದೆ ಎಂಬುದನ್ನು ಹೇಳಲು ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಆದೇಶಿಸಿದ್ದರು. ಈ ವೇಳೆ ವಿನಯ್‌-ಸಂಗೀತಾ ನಡುವೆ ಕಿಡಿ ಹೊತ್ತಿಕೊಂಡಿದೆ. ʼʼವಿನಯ್ ಕೆಟ್ಟ ಗುಣಗಳ ಬೇರುʼʼ ಎಂದು ಸಂಗೀತಾ ಹೇಳಿದ್ದಾರೆ. ಸಂಗೀತಾ ಬಗ್ಗೆ ಇದೇ ಆರೋಪವನ್ನು ವಿನಯ್ ಕೂಡ ಮಾಡಿದ್ದಾರೆ. ಕೊನೆಗೆ ಸಂಗೀತಾಗೆ ʼʼಶಟ್​ ಅಪ್ʼʼ​ ಎಂದು ವಿನಯ್‌ ಬೈದಿದ್ದಾರೆ. ಸಂಗೀತಾ ಕೂಡ ಸುಮ್ಮನಿರದೆ, ʼʼಮೈಂಡ್ ಯುವರ್ ಲ್ಯಾಂಗ್ವೇಜ್ʼʼ ಎಂದು ಮಾರುತ್ತರ ಕೊಟ್ಟಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ.

ಕೆಲವು ವರ್ಷಗಳ ಹಿಂದೆ ಪ್ರಸಾರವಾಗಿದ್ದ ʼಹರ ಹರ ಮಹಾದೇವʼ ಧಾರಾವಾಹಿಯಲ್ಲಿ ವಿನಯ್‌ ಗೌಡ ಮತ್ತು ಸಂಗೀತ ಜತೆಯಾಗಿ ನಟಿದ್ದರು. ಆದರೆ ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿಯಾದ ಬಳಿಕ ಅವರು ಕಿತ್ತಾಡುತ್ತಲೇ ಸುದ್ದಿಯಾಗಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ವಾಗ್ವಾದ, ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ಅವರಿಬ್ಬರು ಸ್ನೇಹಿತರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ದೀಪಾವಳಿ ಸಮಯದಲ್ಲಿ ಸಂಗೀತಾ ಶೃಂಗೇರಿ ರಾಕೆಟ್ ಪಟಾಕಿಯನ್ನು ವಿನಯ್‌ಗೆ ನೀಡಿ, ‘ʼರಾಕೆಟ್‌ನಂತೆಯೇ ನೀವು ಎತ್ತರಕ್ಕೆ ಹೋಗಿ, ನಿಮ್ಮ ಸಿನಿಮಾಗಳು ಹಿಟ್ ಆಗಲಿ, ಯಶಸ್ಸು ಸಿಗಲಿ’ʼ ಎಂದೆಲ್ಲ ಹಾರೈಸಿದ್ದರು. ಇತ್ತ ವಿನಯ್‌ ಕೂಡ ಸಂಗೀತಾ ಅವರನ್ನು ಹೊಗಳಿದ್ದರು. ಸಂಗೀತಾ ಚೆಂದವಾಗಿ ಸೀರೆಯುಟ್ಟು ರೆಡಿಯಾದಾಗ ವಿನಯ್‌ ಮೆಚ್ಚುಗೆ ಸೂಚಿಸಿದ್ದರು. ವಿನಯ್‌ ಅವರ ಈ ಹೊಗಳಿಕೆ ಮಾತು ಕೇಳಿ ನಮ್ರತಾ ಕೂಡ ಬಾಯಿ ಮೇಲೆ ಬೆರಳು ಇಟ್ಟಿದ್ದರು. ಈ ಬೆಳವಣಿಗೆ ಸುದೀಪ್‌ ಅವರಿಗೂ ಅಚ್ಚರಿ ತಂದಿತ್ತು. ಆದರೆ ಈ ಆತ್ಮೀಯತೆ ಹೆಚ್ಚು ದಿನ ಉಳಿಯಲಿಲ್ಲ.

ಇದನ್ನೂ ಓದಿ: BBK SEASON 10: ವಿನಯ್‌ಗಿಂತ ಸಂಗೀತಾಗೆ ಕೊಬ್ಬು ಜಾಸ್ತಿ; ಟಾನಿಕ್ ಕುಡಿಸಿದ ಮೇಲೆ ಒದ್ದಾಟ-ಗುದ್ದಾಟ!

ಅವರ ಸ್ನೇಹ ಕೆಲವೇ ದಿನಗಳಲ್ಲಿ ಮುರಿದು ಬಿದ್ದು, ಮತ್ತೆ ವಿನಯ್‌-ಸಂಗೀತಾ ಮಧ್ಯೆ ವಾಗ್ವಾದ ಆರಂಭವಾಗಿತ್ತು. ದುರಹಂಕಾರಕ್ಕೆ ಔಷಧ, ನಾಲಗೆ ಬಿಗಿ ಹಿಡಿಯಲು ಔಷಧ, ನಂಬಿಕೆ ದ್ರೋಹ ಮಾಡದಿರಲು ಔಷಧ, ನಾಲಿಗೆಗೆ ಲಗಾಮು ಹಾಕುವ ಔಷಧ ನೀಡುವ ಟಾಸ್ಕ್‌ನಲ್ಲಿ ಇದು ತಾರಕಕ್ಕೇರಿತ್ತು. ʼʼಎಲುಬಿಲ್ಲದ ನಾಲಗೆ, ಯಾರ ಬಗ್ಗೆ ಏನಾದರೂ ಮಾತನಾಡುತ್ತಾನೆʼʼ ಎಂದು ವಿನಯ್ ಬಗ್ಗೆ ಸಂಗೀತಾ ಹೇಳಿದರೆ, ʼʼಸಂಗೀತಾ ಜತೆ ಫ್ರೆಂಡ್​ಶಿಪ್‌ ಮಾಡಿದರೆ ನನಗಾಗಿ ಎಲ್ಲವನ್ನೂ ತ್ಯಾಗ ಮಾಡಬೇಕು ಅವರು ನಿರೀಕ್ಷೆ ಮಾಡುತ್ತಾರೆʼʼ ಎಂದು ವಿನಯ್‌ ಆರೋಪಿಸಿದ್ದರು. ಹೀಗಾಗಿ ಇಬ್ಬರ ಮಧ್ಯೆ ದ್ವೇಷ ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ಮತ್ತೆ ಇಬ್ಬರು ಕಿತ್ತಾಡಿಕೊಂಡಿದ್ದು, ಇಬ್ಬರ ಜಗಳ ಮುಗಿಯುವ ಲಕ್ಷಣವೇ ಕಾಣಿಸುತ್ತಿಲ್ಲ ಎಂದು ನೋಡುಗರು ಹೇಳುತ್ತಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version