ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 10(BBK SEASON 10)ರ ಸ್ಪರ್ಧಿ ಡ್ರೋನ್ ಪ್ರತಾಪ್ ಬಗ್ಗೆ ಬಿಬಿಎಂಪಿ ನೋಡಲ್ ಅಧಿಕಾರಿಯಾಗಿದ್ದ ಡಾ. ಪ್ರಯಾಗ್ ಮತ್ತೊಮ್ಮೆ ಗುಡುಗಿದ್ದಾರೆ. ಪ್ರತಾಪ್ ಸುಳ್ಳುಗಾರ ಎಂದಿದ್ದಾರೆ. ಅಲ್ಲದೆ ಪ್ರತಾಪ್ ಹಿಂದೆ ಕ್ವಾರಂಟೈನ್ ನಿಯಮವನ್ನೂ ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದಾರೆ. ವಿಸ್ತಾರ ನ್ಯೂಸ್ ಜತೆ ಈ ಬಗ್ಗೆ ಅವರು ವಿಸ್ತೃತವಾಗಿ ಮಾತನಾಡಿ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಪ್ರತಾಪ್ ಈ ಹಿಂದೆ ಮಾತನಾಡಿ, ವಿವಾದದಲ್ಲಿ ಸಿಲುಕಿದಾಗ ಏನೆಲ್ಲ ಕಷ್ಟಗಳನ್ನು ಎದುರಿಸಿದೆ. ಹಾಗೇ ʻಮೆಂಟಲಿ ಅನ್ಸ್ಟೇಬಲ್ ಎಂದು ಬರೆದುಕೊಡು’ ಎಂದು ತಲ್ ತಲೆ ಮೇಲೆ ಹೊಡೆದರು ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ಬಗ್ಗೆ ಡಾ. ಪ್ರಯಾಗ್ ಪ್ರತಿಕ್ರಿಯೆ ನೀಡಿದ್ದಾರೆ.
ʼʼಕೊರೊನಾ ಸಂದರ್ಭದಲ್ಲಿ ಕ್ವಾರಂಟೈನ್ ನಿಯಮವನ್ನೂ ಮೀರಿ ಡ್ರೋನ್ ಪ್ರತಾಪ್ ಹೋಟೆಲ್ಗೆ ನವೀನ್ ಎಂಬ ವ್ಯಕ್ತಿಯನ್ನು ಕರೆಯಿಸಿಕೊಂಡಿದ್ದರು. ಒಮ್ಮೆ ಕ್ವಾರಂಟೈನ್ ಆದರೆ ಯಾರನ್ನೂ ಭೇಟಿಯಾಗಬಾರದು ಎಂಬ ನಿಯಮ ಆಗ ಜಾರಿಯಲ್ಲಿತ್ತು. ಈ ಬಗ್ಗೆ ಹೋಟೆಲ್ ಮ್ಯಾನೇಜರ್ ಮೇಲ್ ಮೂಲಕ ನನಗೆ ಮಾಹಿತಿ ನೀಡಿದ್ದರುʼʼ ಎಂದು ಡಾ. ಪ್ರಯಾಗ್ ತಿಳಿಸಿದ್ದಾರೆ.
ʼʼಔಷಧ ಕೊಡುವ ನೆಪದಲ್ಲಿ ನವೀನ್ ಅವರನ್ನು ಕರೆಸಿಕೊಳ್ಳಲಾಗಿತ್ತು. ಚರ್ಮದ ಕಾಯಿಲೆ ಇರುವ ಕಾರಣ ವಿಶೇಷ ಔಷಧ ತರಿಸಿಕೊಂಡಿದ್ದೇನೆ ಎಂದು ಪ್ರತಾಪ್ ತಿಳಿಸಿದ್ದರು. ಇದನ್ನೇ ನಂಬಿದ ಹೋಟೆಲ್ನವರು ನವೀನ್ ಅವರನ್ನು ರೂಮ್ಗೆ ಕಳುಹಿಸಿದ್ದರು. ಮಧ್ಯಾಹ್ನ 1.06 ಒಳಗೆ ಹೋಗಿದ್ದ ನವೀನ್ ಮರಳಿದ್ದು ಸುಮಾರು 3.50ಕ್ಕೆʼʼ ಎಂದು ಅವರು ವಿವರಿಸಿದ್ದಾರೆ. ಇದರಿಂದ ಅನುಮಾನಗೊಂಡ ಮ್ಯಾನೇಜರ್ ಫೋನ್ ಮಾಡಿ ಈ ಬಗ್ಗೆ ತಿಳಿಸಿದ್ದರು. ಅದರಂತೆ ನಾನು ತೆರಳಿ ವಿಚಾರಣೆ ನಡೆಸಿದ್ದೆ. ಆಗ ಪ್ರತಾಪ್ ಸುಳ್ಳು ಮಾಹಿತಿ ನೀಡಿ, ಬಂದಿದ್ದು ತನ್ನ ಸಂಬಂಧಿ ಎಂದು ಹೇಳಿದ್ದರು. ಔಷಧ ನೀಡಲು ಬಂದವರು ಅಷ್ಟು ಹೊತ್ತು ರೂಮ್ನಲ್ಲಿ ಏನು ಮಾಡುತ್ತಿದ್ದರು? ಬಳಿಕ ವಿಚಾರಣೆ ನಡೆಸಿದಾಗ ನವೀನ್ ಲಾಯರ್ ಎನ್ನುವುದು ತಿಳಿದು ಬಂದಿತ್ತು. ನವೀನ್ಗೆ ಫೋನ್ ಮಾಡಿ ಈ ಬಗ್ಗೆ ಎಚ್ಚರಿಸಿದ್ದೆವು. ಕೇಸ್ ಸಂಬಂಧ ಚರ್ಚೆಗಾಗಿ ಪ್ರತಾಪ್ ತನ್ನನ್ನು ಕರೆಯಿಸಿಕೊಂಡಿದ್ದರು ಎಂದು ನವೀನ್ ಒಪ್ಪಿಕೊಂಡಿದ್ದಾರೆ ಎಂದು ಡಾ. ಪ್ರಯಾಗ್ ವಿವರಿಸಿದ್ದಾರೆ.
ʼʼಪ್ರತಾಪ್ ಹೇಳಿರುವಂತೆ ಅವರು ಬಡ ಕುಟುಂಬದಿಂದ ಬಂದಿಲ್ಲ. ಅವರ ಅಜ್ಜ ಅಮೆರಿಕದಲ್ಲಿದ್ದಾರೆ. ಜನರ ಗಮನ ಸೆಳೆಯಲು ಬಡವ ಎಂದು ಸುಳ್ಳು ಹೇಳುತ್ತಿದ್ದಾರೆ. 84 ದೇಶಗಳಿಗೆ ಬಡವರ ಮಕ್ಕಳು ಹೋಗಲು ಸಾಧ್ಯವಿಲ್ಲ. ಟೋಕಿಯೋದಲ್ಲಿ ಪ್ರಾತ್ಯಕ್ಷಿಕೆ ಕೊಟ್ಟಿದ್ದೇನೆ ಎಂದಿರುವುದು ಕೂಡ ಸುಳ್ಳುʼʼ ಎಂದು ತಿಳಿಸಿದ್ದಾರೆ.
ʼʼಪ್ರತಾಪ್ ಹೇಳಿರುವುದು ಸುಳ್ಳು. ಸತ್ಯ ಆಗಿದ್ದರೆ, ಮೂರು ವರ್ಷಗಳ ಕಾಲ ಸುಮ್ಮನೇ ಇರುತ್ತಿರಲಿಲ್ಲ. ಒಂದು ಪಕ್ಷ ನಾನು ಹೊಡೆದಿದ್ದೇ ಆಗಿದ್ದರೆ, ಆಗಲೇ ಅವನು ಕಂಪ್ಲೇಂಟ್ ಮಾಡಬೇಕಿತ್ತು. ನಾವು ನಮ್ಮ ಪವರ್ ಮಿಸ್ಯೂಸ್ ಮಾಡಿದ್ದೇ ಆಗಿದ್ದರೆ, ನಮಗೆ ಕೆಲಸಾನೇ ಹೋಗುತ್ತಿತ್ತು. ಈಗ ಆತ ಪ್ರೂವ್ ಮಾಡಬೇಕು. ಸಾರ್ವಜನಿಕರು ನಮ್ಮ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು. ಆತ ಬೇಕಿದ್ದರೆ ಸಾಬೀತು ಮಾಡಲಿʼʼ ಎಂದು ಈ ಹಿಂದೆ ಪ್ರಯಾಗ್ ಸವಾಲು ಹಾಕಿದ್ದರು.
ಇದನ್ನೂ ಓದಿ: BBK SEASON 10: ತಲೆಗೆ ಹೊಡ್ದಿಲ್ಲ, ಪ್ರತಾಪ್ ಆರೋಪ ಸುಳ್ಳು ಎಂದ ಡಾಕ್ಟರ್; ಮಾನನಷ್ಟ ಮೊಕದ್ದಮೆ ಎಚ್ಚರಿಕೆ