ಬೆಂಗಳೂರು: ಹಲವು ವಿಶೇಷತೆಗಳೊಂದಿಗೆ ಆರಂಭವಾದ ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 10 (BBK SEASON 10) ಕೊನೆಯ ಹಂತದತ್ತ ದಾಪುಗಾಲು ಇಡುತ್ತಿದೆ. ಸದ್ಯ 13ನೇ ವಾರ ನಡೆಯುತ್ತಿದೆ. ಫೈನಲ್‌ಗೆ 4 ವಾರ ಬಾಕಿ ಇರುವಾಗ ಬಿಗ್‌ಬಾಸ್ ಸ್ಪರ್ಧಿಗಳಿಗೆ ಟ್ವಿಸ್ಟ್ ಕೊಟ್ಟಿದ್ದಾರೆ. ಈ ಹಿಂದೆ ವಿಜೇತರಿಗೆ 50 ಲಕ್ಷ ರೂ. ಬಹುಮಾನ ಮೊತ್ತವಾಗಿ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಇದೀಗ ಬಿಗ್‌ಬಾಸ್ ಟ್ವಿಸ್ಟ್ ನೀಡಿದ್ದು, ಪ್ರೈಜ್ ಮನಿಯನ್ನು 25 ಲಕ್ಷ ರೂ.ಗೆ ಇಳಿಸಲಾಗಿದೆ.
ಕಳೆದ ವಾರ ಕಿಚ್ಚ ಸುದೀಪ್ ಫೈನಲ್ ಬಗ್ಗೆ ಮಾತನಾಡಿ, ವಿನ್ನರ್ಗೆ 50 ಲಕ್ಷ ರೂ. ಜತೆಗೆ ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ ಎಂದು ಘೋಷಿಸಿದ್ದರು. ಆದರೆ ಇದೀಗ ಬಿಗ್‌ಬಾಸ್ 50 ಲಕ್ಷ ರೂ. ಇದ್ದ ಪ್ರೈಜ್ ಅಮೌಂಟ್ ಅನ್ನು 25 ಲಕ್ಷ ರೂ.ಗೆ ಇಳಿಸಿದ್ದಾರೆ.
ಏನಿದು ಲೆಕ್ಕಾಚಾರ?
ಈ ವಾರ ಬಿಗ್‌ಬಾಸ್ ಮನೆಯೊಳಗೆ 25 ಸಾವಿರ ಪಾಯಿಂಟ್ನಿಂದ 20 ಲಕ್ಷ ಪಾಯಿಂಟ್ಸ್ ಮಧ್ಯೆ ಹಲವು ಬೋರ್ಡ್‌ಗಳಿದ್ದವು. ಈ ಪೈಕಿ ಪ್ರತಿ ಸ್ಪರ್ಧಿಯೂ ಒಂದು ಬೋರ್ಡ್ ಆಯ್ಕೆ ಮಾಡಿಕೊಳ್ಳಬೇಕಿತ್ತು. ಕೊನೆಗೆ ವೋಟಿಂಗ್ ಮೂಲಕ ನಡೆದ ಈ ಪ್ರಕ್ರಿಯೆಯಲ್ಲಿ ವರ್ತೂರು ಸಂತೋಷ್ ಕನಿಷ್ಠ ಸಂಖ್ಯೆ ಅಂದರೆ 25 ಸಾವಿರ ಪಾಯಿಂಟ್ನ ಬೋರ್ಡ್ ಪಡೆದರು. ಗರಿಷ್ಠ ಸಂಖ್ಯೆಯ ಬೋರ್ಡ್ (20 ಲಕ್ಷ ಪಾಯಿಂಟ್) ಬೋರ್ಡ್ ತುಕಾಲಿ ಸಂತೋಷ್ ಪಾಲಾಯಿತು. ಆಗಲೇ ಎಚ್ಚರಿಸಿದ ಬಿಗ್‌ಬಾಸ್ ʼ‘ಎಲ್ಲದಕ್ಕೂ ಬೆಲೆ ತೆರಲೇಬೇಕು’ʼ ಎಂದು ಹೇಳಿದ್ದರು.
ಇನ್ನು ಅಧಿಕ ಮೌಲ್ಯ ಹೊಂದಿದ್ದ ತುಕಾಲಿ ಸಂತೋಷ್, ವಿನಯ್, ಸಂಗೀತಾ, ಕಾರ್ತಿಕ್, ನಮ್ರತಾ ನಾಮಿನೇಟ್ ಮಾಡುವ ಅಧಿಕಾರ ಪಡೆದರು. ಅದರಂತೆ ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ಮೈಕಲ್, ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ನಾಮಿನೇಟ್ ಆದರು. ಈ ನಾಮಿನೇಟ್ ಆದ ಐವರು ಸ್ಪರ್ಧಿಗಳ ಒಟ್ಟು ಮೌಲ್ಯ 25 ಲಕ್ಷ ರೂ. ಮೊದಲೇ ಬಿಗ್‌ಬಾಸ್ ಎಚ್ಚರಿಸಿದಂತೆ, ‘ಬಿಗ್‌ಬಾಸ್ ಕನ್ನಡ 10’ ಸೀಸನ್ ವಿಜೇತರಿಗೆ ಮೀಸಲಾಗಿದ್ದ 50 ಲಕ್ಷ ರೂ. ಬಹುಮಾನ ಹಣದಲ್ಲಿ 25 ಲಕ್ಷ ರೂ. ಅನ್ನು ಮೈನಸ್ ಮಾಡಲಾಯಿತು. ಸದ್ಯ ಸ್ಪರ್ಧಿಗಳ ಪೈಕಿ 25 ಲಕ್ಷ ರೂ. ಉಳಿದಿದೆ.
ಇದನ್ನೂ ಓದಿ: BBK SEASON 10: ಸಂಗೀತಾ ಗೆಲ್ಬೇಕು, ಕಾರ್ತಿಕ್ ಗೆಲ್ತಾರೆ ಎಂದ ಸಿರಿ!
ಮರಳಿ ಪಡೆಯುವ ಅವಕಾಶ ಇದೆ
ಈ ವೇಳೆ ಮತ್ತೊಂದು ಟ್ವಿಸ್ಟ್ ನೀಡಿದ ಬಿಗ್‌ಬಾಸ್, ʼʼ25 ಲಕ್ಷ ರೂ. ಮತ್ತೆ ಗಳಿಸುವ ಅವಕಾಶ ನಿಮ್ಮ ಕೈಯಲ್ಲೇ ಇದೆ. 25 ಲಕ್ಷ ರೂ. ಮರಳಿ ಪಡೆಯುವ ಸಲುವಾಗಿಯೇ ಈ ವಾರದ ಟಾಸ್ಕ್‌ಗಳು ರೂಪುಗೊಂಡಿವೆ. ಈ ವಾರ ನಡೆಯಲಿರುವ ಒಂದೊಂದು ಟಾಸ್ಕ್‌ಗೂ ಒಂದೊಂದು ಮೌಲ್ಯ ನಿಗದಿಯಾಗಿದೆ. ಸ್ಪರ್ಧಿಗಳು ಟಾಸ್ಕ್ ಗೆದ್ದು, ಈಗಾಗಲೇ ಸೋತಿರುವ ಮೌಲ್ಯವನ್ನು ಮರಳಿ ಪಡೆಯಬಹುದು. ವಾರದ ಅಂತ್ಯದಲ್ಲಿ ಈ ಮನೆಯ ಖಾತೆಯಲ್ಲಿ ಉಳಿಯುವ ಅಷ್ಟೂ ಮೊತ್ತ ಈ ಸೀಸನ್‌ನ ವಿಜೇತರ ಪಾಲಾಗುತ್ತದೆ’’ ಎಂದು ಬಿಗ್‌ಬಾಸ್ ಅವಕಾಶವನ್ನೂ ಸ್ಪರ್ಧಿಗಳಿಗೆ ನೀಡಿದ್ದಾರೆ. ವಾರಾಂತ್ಯದಲ್ಲಿ ಕೊನೆಗೆ ಎಷ್ಟು ಮೌಲ್ಯ ಉಳಿಯಲಿದೆ ಎಂಬ ಕುತೂಹಲ ಈಗಾಗಲೇ ಗರಿಗೆದರಿದೆ.
ʼಬಿಗ್‌ಬಾಸ್ʼ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ