ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10(BBK Season 10) 11ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಗಂಧರ್ವ ಮತ್ತು ರಕ್ಕಸರ ಪಾತ್ರ ನಿರ್ವಹಿಸಿದ್ದ ಸ್ಪರ್ಧಿಗಳು ಈ ಬಾರಿ ವಿದ್ಯಾರ್ಥಿಗಳ ಸಮವಸ್ತ್ರ ತೊಟ್ಟಿದ್ದಾರೆ. ಹೌದು, ಈ ವಾರ ಬಿಗ್‌ಬಾಸ್ ಮನೆಯೊಳಗೆ ಪ್ರಾಥಮಿಕ ಶಾಲೆ ತೆರೆದಿದ್ದಾರೆ. ಈ ಟಾಸ್ಕ್ ಮೂಲಕ ಸ್ಪರ್ಧಿಗಳನ್ನು ಬಾಲ್ಯಕ್ಕೆ ಕರೆದೊಯ್ಯಲಾಗುವುದು ಎಂದು ಬಿಗ್‌ಬಾಸ್ ಹೇಳಿದ್ದಾರೆ.
ಟೀಚರ್ ಆದ ತನಿಷಾ
ಬಿಗ್‌ಬಾಸ್ ಮನೆಯೊಳಗೆ ಬೆಂಕಿ ಎಂದೇ ಗುರುತಿಸಿಕೊಂಡಿರುವ ತನಿಷಾ ಈ ಪ್ರಾಥಮಿಕ ಶಾಲೆಯ ಟೀಚರ್. ‘ವ್ಯಕ್ತಿತ್ವ ವಿಕಸನ’ದ ಬಗ್ಗೆ ಪಾಠ ಮಾಡುವ ಜವಾಬ್ದಾರಿ ಅವರ ಹೆಗಲೇರಿದೆ. ಅದರಂತೆ ಕೈಯಲ್ಲಿ ಬೆತ್ತ ಹಿಡಿದುಕೊಂಡ ಬಂದ ತನಿಷಾಗೆ ವರ್ತೂರು ಸಂತೋಷ್ ಕಡೆಯಿಂದ ಮೆಚ್ಚುಗೆ ಲಭಿಸಿದೆ. ಲಾಸ್ಟ್ ಬೆಂಚ್ ಹುಡುಗ ವರ್ತೂರು ಸಂತೋಷ್ ‘ನೀವ್ ಚೆನ್ನಾಗ್ ಕಾಣಿಸ್ತಾ ಇದೀರಾ ಮಿಸ್’ ಎಂದು ನಿಂತಲ್ಲೇ ಕೈ ಬೀಸಿದ್ದಾರೆ. ಇದರಿಂದ ತನಿಷಾ ನಾಚಿ ನೀರಾಗಿದ್ದಾರೆ. ಅಲ್ಲದೆ ಸ್ಲೇಟ್ ಮೇಲೆ ಐ ಲವ್ ಯೂ ಎಂದು ಬರೆದ ವರ್ತೂರ್ ಸಂತೋಷ್, ಅದನ್ನು ತನಿಷಾಗೆ ನೀಡಿದ್ದಾರೆ. ಇದಕ್ಕೆ ಖಡಕ್ ಮಿಸ್ ತನಿಷಾ ಬೆಂಚ್ ಮೇಲೆ ನಿಲ್ಲುವ ಶಿಕ್ಷೆಯನ್ನೂ ನೀಡಿದ್ದಾರೆ. ಸದ್ಯ ಹೊರ ಬಂದ ಪ್ರೋಮೊದಲ್ಲಿ ಈ ಸ್ವಾರಸ್ಯಕರ ಘಟನೆ ಕಂಡು ಬಂದಿದೆ.
ಕನ್ನಡ ಮೇಷ್ಟ್ರಾದ ಮೈಕಲ್
ಇನ್ನೊಂದು ವಿಶೇಷ ಎಂದರೆ ಈ ಶಾಲೆಯಲ್ಲಿ ವಿದೇಶದಿಂದ ಬಂದ ಮೇಷ್ಟ್ರೊಬ್ಬರು ಕನ್ನಡ ಪಾಠ ಮಾಡುತ್ತಿದ್ದಾರೆ! ಅವರು ಬೇರೆ ಯಾರೂ ಅಲ್ಲ ಮೈಕಲ್. ತನ್ನ ಕನ್ನಡ ಪ್ರೇಮದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ಮೈಕಲ್ ಕೋಟು ತೊಟ್ಟು ಕನ್ನಡ ಶಿಕ್ಷಕರಾಗಿದ್ದಾರೆ. ಅಲ್ಲದೆ ಎಲ್ಲರೂ ಕನ್ನಡದಲ್ಲೇ ಮಾತನಾಡಬೇಕೆಂದು ಸೂಚಿಸಿ ಪಾಠ ಶುರು ಮಾಡಿದ್ದಾರೆ.
ಮಕ್ಕಳಾದ ರಕ್ಕಸರು!
ಕಳೆದ ವಾರ ಬಿಗ್‌ಬಾಸ್ ಮನೆಯ ವಾತಾವರಣ ಬಿಗುವಿನಿಂದ ಕೂಡಿತ್ತು. ಯಾಕೆಂದರೆ ಗಂಧರ್ವರು ಮತ್ತು ರಕ್ಕಸರು ಎನ್ನುವ ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ವೈಮನಸ್ಸು ಏರ್ಪಟ್ಟಿತ್ತು. ಅಲ್ಲದೆ ಆಟದ ವೇಳೆ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಅಸ್ವಸ್ಥರಾಗಿದ್ದರು. ರಾಸಾಯನಿಕಯುಕ್ತ ನೀರು ಕಣ್ಣೊಳಗೆ ಹೋಗಿ ಇಬ್ಬರು ಒದ್ದಾಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಬಳಿಕ ಅವರು ಮರಳಿಬಂದು ಟಾಸ್ಕ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಕಳೆದ ವಾರದ ಗಂಭೀರ ಸನ್ನಿವೇಶ ತಿಳಿಯಾಗಿದ್ದು ಎಲ್ಲರೂ ಬಾಲ್ಯಕ್ಕೆ ಮರಳಿದ್ದಾರೆ. ಪರಸ್ಪರ ಕೀಟಲೆ ಮಾಡಿಕೊಂಡು ಮಕ್ಕಳಾಗಿ ಬದಲಾಗಿದ್ದಾರೆ.
ಮನೆಯಿಂದ ಹೊರಬಿದ್ದ ಸ್ನೇಹಿತ್
10ನೇ ವಾರ ಸ್ನೇಹಿತ್ ಗೌಡ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ದೊಡ್ಮನೆಯಿಂದ ಹೊರಡುವ ವೇಳೆ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದರು. ಈ ವೇಳೆ ಅವರ ಸ್ನೇಹಿತೆ ನಮ್ರತಾ ಗೌಡ ಕೂಡ ಅತ್ತಿದ್ದರು. ನಮ್ರತಾ ಜತೆ ಹೆಚ್ಚು ಕ್ಲೋಸ್ ಆಗಿದ್ದ ಸ್ನೇಹಿತ್, ವಿನಯ್, ಮೈಕಲ್ ಜತೆಗೂ ಆತ್ಮೀಯರಾಗಿದ್ದರು.
ಇದನ್ನೂ ಓದಿ: BBK SEASON 10: ಬಿಗ್ ಬಾಸ್ ಮನೆಯೊಳಗೊಂದು ಶಾಲೆ; ಟೀಚರ್ ಸೂಪರ್