ಬೆಂಗಳೂರು: 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (Bengaluru International Film Festival- BIFFES 2023) ಲಾಂಛನವನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣ ಮಾಡಿದರು 2023 ಮಾರ್ಚ್ 23ರಿಂದ 30ರವರೆಗೆ ಚಿತ್ರೋತ್ಸವ ನಡೆಯಲಿದೆ. ಈ ಬಗ್ಗೆ ಆರ್ ಅಶೋಕ್ ಸುದ್ದಿಗೋಷ್ಠಿಯಲ್ಲಿ ಚಲನಚಿತ್ರೋತ್ಸವದ ಕುರಿತು ಮಾಹಿತಿ ಹಂಚಿಕೊಂಡರು.
ವಿಧಾನ ಸೌಧದ ಮುಂಭಾಗದಲ್ಲಿ ಫೆ.23 ಸಂಜೆ 6 ಗಂಟೆಗೆ ಚಲನಚಿತ್ರೋತ್ಸವದ ಉದ್ಘಾಟನೆ ನಡೆಯಲಿದೆ. ಮಾರ್ಚ್ 30ರಂದು ಪ್ರಶಸ್ತಿ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಯಶವಂತಪುರ ಒರಾಯನ್‌ಮಾಲ್ ನಲ್ಲಿ ಚಿತ್ರೋತ್ಸವ ನಡೆಯಲಿದ್ದು, 11 ಸ್ಕ್ರೀನ್‌ಗಳಲ್ಲಿ ಚಿತ್ರಗಳ ಪ್ರದರ್ಶನ ಆಗಲಿವೆ.
ಇದನ್ನೂ ಓದಿ: Rishab Shetty | ರಿಷಬ್ ಶೆಟ್ಟಿ ನಿರ್ಮಾಣದ ʻಶಿವಮ್ಮʼ ಚಿತ್ರಕ್ಕೆ ಬೂಸಾನ್ ಚಲನಚಿತ್ರೋತ್ಸವ ಪ್ರಶಸ್ತಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್ ಅಶೋಕ್ ʻʻಕನ್ನಡ ಚಿತ್ರರಂಗದ ಎಲ್ಲ ಕಲಾವಿದರು ಭಾಗಿಯಾಗಲು ಆಹ್ವಾನ ನೀಡಲಾಗುತ್ತದೆ. ಪ್ರಶಸ್ತಿಯ ಮೊತ್ತವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಲು ಸಲಹೆ ನೀಡಿದ್ದೇವೆ. ಈ ಬಾರಿ ಪ್ರವೇಶಕ್ಕೆ ಡಿಜಿಟಲ್ ಮೂಲಕ ಎಲ್ಲ ಕಾರ್ಯಗಳು ನಡೆಯುವಂತೆ ಸಿದ್ದತೆ ಮಾಡಲಾಗಿದೆʼʼಎಂದರು.
ಇದನ್ನೂ ಓದಿ: 100 Days Of Gandhadagudi: 100 ದಿನ ಪೂರೈಸಿದ ಪುನೀತ್ ಅಭಿನಯದ ಗಂಧದಗುಡಿ ಸಿನಿಮಾ, ಅಪ್ಪು ಪತ್ನಿ ಅಶ್ವಿನಿ ಸಂತಸ
300 ಚಲನಚಿತ್ರಗಳ ಪ್ರದರ್ಶನ
ʻʻಕನ್ನಡ ಚಿತ್ರರಂಗ ದೇಶದ ಗಡಿ ದಾಟಿ ಹೆಮ್ಮೆ ತರುವ ಕೆಲಸ ಆಗಿದೆ. ಹೀಗಾಗಿ ಈ ಚಿತ್ರೋತ್ಸವ ಇನ್ನೂ ಚೆನ್ನಾಗಿ ನಡಿಯಬೇಕು. 4 ಕೋಟಿ 49 ಲಕ್ಷ ರೂ. ಹಣ ಮೀಸಲಿಡಲಾಗಿದೆ. ಪ್ರಸ್ತಕ 14ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಭಾಗಗಳು ಮತ್ತು ಸ್ಪರ್ಧೆಗಳಲ್ಲಿ ಸುಮಾರು 300 ಚಲನಚಿತ್ರಗಳನ್ನು ಪ್ರದರ್ಶನಗೊಳ್ಳಲಿವೆ. ಕೇವಲ ಬಾಲಿವುಡ್, ಟಾಲಿವುಡ್ ಸ್ಟಾರ್ಸ್‌ಗಳಿಗೆ ಹೆಚ್ಚು ಆದ್ಯತೆ ಕೊಡುವ ಕೆಲಸ ನಮ್ಮದಲ್ಲ. ಚಂದನವನದ ಎಲ್ಲ ತಾರೆಗಳ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಚಿತ್ರೋತ್ಸವದಲ್ಲಿ 55 ದೇಶಗಳ ಸಿನಿಮಾಗಳ ಪ್ರದರ್ಶನ ಆಗಲಿವೆ. ಖ್ಯಾತ ನಿರ್ದೇಶಕ ಕೆ ವಿಶ್ವನಾಥ್, ಗಾಯಕಿ ವಾಣಿ ಜಯರಾಮ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳನ್ನು ಮಾಡುವ ಯೋಜನೆ ಇದೆʼʼ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ಹಿರಿಯ ಅಧಿಕಾರಿಗಳು, ಚಲನಚಿತ್ರರಂಗದ ಗಣ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.