ಬೆಂಗಳೂರು: ಸಮಾಜದಲ್ಲಿ ಕೋಮು ಸೌಹಾರ್ದವನ್ನು ಪ್ರತಿಪಾದಿಸುವ ಇನ್ನೊಂದು ಕನ್ನಡ ಚಲನಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ʼಬೇರ- ಮರ್ಚೆಂಟ್ ಆಫ್ ಡೆತ್ʼ ಎಂಬ ಹೆಸರಿನ ಈ ಚಿತ್ರವನ್ನು ವಿನು ಬಳಂಜ ನಿರ್ದೇಶಿಸಿದ್ದಾರೆ.
ಕೋಮುಗಳ ನಡುವಿನ ಸಂಘರ್ಷವನ್ನು ಹೇಳುವ ʼದಿ ಕಾಶ್ಮೀರ್ ಫೈಲ್ಸ್ʼ ಮತ್ತು ʼದಿ ಕೇರಳ ಸ್ಟೋರಿʼಗಳು ದೊಡ್ಡ ವಿವಾದಗಳನ್ನು ಹುಟ್ಟುಹಾಕಿದ್ದವು. ಈ ಹಿನ್ನೆಲೆಯಲ್ಲಿ, ಸಮಾಜದಲ್ಲಿ ಕೋಮು ದ್ವೇಷವನ್ನು ಹೇಗೆ ಸೃಷ್ಟಿಸಲಾಗುತ್ತದೆ, ಹಿಂಸಾಚಾರವನ್ನು ಹೇಗೆ ಕೆರಳಿಸಲಾಗುತ್ತದೆ ಎಂಬುದು ʼಬೇರʼ ಚಿತ್ರದ ಕಥೆಯಂತೆ. ಈ ಚಿತ್ರವು ಜೂನ್ 16ರಂದು ಬಿಡುಗಡೆಯಾಗಲಿದೆ. ʼಬೇರʼ ಎಂದರೆ ತುಳು ಭಾಷೆಯಲ್ಲಿ ವ್ಯಾಪಾರ ಎಂದರ್ಥ.
“ಕೋಮು ದ್ವೇಷವನ್ನು ಹೇಗೆ ಹುಟ್ಟುಹಾಕಲಾಗುತ್ತದೆ, ಪೋಷಿಸಲಾಗುತ್ತದೆ ಮತ್ತು ಘೋರ ಹಿಂಸಾಚಾರವನ್ನು ಸೃಷ್ಟಿಸಲಾಗುತ್ತದೆ ಎಂಬುದನ್ನು ವಾಸ್ತವಕ್ಕೆ ಹತ್ತಿರವಾದ ಸ್ಕ್ರಿಪ್ಟ್ ಮೂಲಕ ತೆರೆಗೆ ತರಲು ಯತ್ನಿಸಿದ್ದೇನೆ. ಕೆಲವು ಬಲಪಂಥೀಯ ಗುಂಪುಗಳ ನಾಯಕತ್ವದಲ್ಲಿರುವವರು ಇಂತಹ ಕೃತ್ಯಗಳಿಂದ ಬದುಕುತ್ತಿದ್ದಾರೆʼʼ ಎಂದು ಚಿತ್ರದ ಬರಹಗಾರ- ನಿರ್ದೇಶಕ ವಿನು ಬಳಂಜ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿನು ಬಳಂಜ ಅವರು ಕಿರುತೆರೆಯಲ್ಲಿ ಹಲವಾರು ಹಿಟ್ ಧಾರಾವಾಹಿಗಳನ್ನು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. “ಎರಡೂ ಕಡೆಯ, ಹಿಂದೂ ಮತ್ತು ಮುಸ್ಲಿಂ- ಎರಡೂ ಧರ್ಮಗಳ ಕೆಲವು ಮೂಲಭೂತವಾದಿ ಶಕ್ತಿಗಳು ಹಣ ಗಳಿಕೆಗಾಗಿ ಹೇಗೆ ಕೋಮು ಸಮಸ್ಯೆಗಳನ್ನು ಸೃಷ್ಟಿಸುತ್ತವೆ, ಮತ್ತು ನಾಯಕತ್ವದ ಸ್ಥಾನಕ್ಕೆ ಏರಲು ಯತ್ನಿಸುತ್ತವೆ ಎಂಬುದು ನನ್ನ ಚಲನಚಿತ್ರದ ಕಥೆ. ಇವರು ಎರಡೂ ಧರ್ಮಗಳ ಮುಗ್ಧ ಜನರ ಧಾರ್ಮಿಕ ಭಾವನೆಗಳನ್ನು ಬಂಡವಾಳ ಮಾಡಿಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ” ಎಂದು ಬಳಂಜ ತಿಳಿಸಿದರು.
ದಿ ಕೇರಳ ಸ್ಟೋರಿ ಚಿತ್ರ ವಿವಾದದಲ್ಲಿರುವ ಹೊತ್ತಿನಲ್ಲಿ ಬರುತ್ತಿರುವ ಈ ಚಿತ್ರ ಅದಕ್ಕೆ ಪ್ರತ್ಯುತ್ತರ ಅಲ್ಲವಂತೆ. ʼʼಬೇರ ಆ ಚಿತ್ರಗಳಿಗೆ ಉತ್ತರವಲ್ಲ. ಮೂಲಭೂತವಾದಿ ಶಕ್ತಿಗಳು ರಾಜ್ಯದಲ್ಲಿ ಹೇಗೆ ಕೋಮು ಶಾಂತಿಯನ್ನು ಕದಡುತ್ತಿವೆ ಎಂಬುದಕ್ಕೆ ಈ ಚಿತ್ರ ಉತ್ತರ ನೀಡಲಿದೆʼʼ ಎಂದಿದ್ದಾರೆ.
ಬೇರ ಚಿತ್ರದ ಟೀಸರ್ ಮತ್ತು ಟ್ರೇಲರ್ ಅನ್ನು ಯೂಟ್ಯೂಬ್‌ನಲ್ಲಿ 10 ಲಕ್ಷ ಹಾಗೂ 5 ಲಕ್ಷ ಜನ ವೀಕ್ಷಿಸಿದ್ದಾರೆ. ʼʼಯಾರೂ ನನಗೆ ಇದುವರೆಗೆ ಬೆದರಿಕೆ ಹಾಕಿಲ್ಲ; ಯಾರೂ ದೂರು ಸಲ್ಲಿಸಿಲ್ಲ. ಪ್ರದರ್ಶನಕ್ಕೆ ಯಾರ ಆಕ್ಷೇಪವೂ ಇಲ್ಲವೆಂದು ಭಾವಿಸುತ್ತೇನೆʼʼ ಎಂದಿದ್ದಾರೆ ಬಳಂಜ. ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಚ, ದತ್ತಣ್ಣ, ಸುಮನ್ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: 72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ