ಬೆಂಗಳೂರು: 69ನೇ ರಾಷ್ಟ್ರೀಯ ಚಲನಚಿತ್ರ (National Film Awards 2023) ಪ್ರಶಸ್ತಿ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಚಿತ್ರ ಮಂದಿರಗಳಲ್ಲಿ ರಾರಾಜಿಸಿದ 777 ಚಾರ್ಲಿ ಸಿನಿಮಾ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾವನ್ನು ಪಂಚ ಭಾಷೆಗಳಲ್ಲಿ ಜನರು ನೋಡಿ ಹಾಡಿ ಹೊಗಳಿದ್ದರು.
777 ಚಾರ್ಲಿ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವುದಕ್ಕೂ ಮೊದಲೇ ಚಿತ್ರತಂಡ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಏರ್ಪಡಿಸಿತ್ತು. ಇಲ್ಲಿಯೂ ಸಹ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದ ಪ್ರಸಾರದ ಹಕ್ಕು ಕೂಡ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು.
ಇದನ್ನೂ ಓದಿ: National Film Awards 2023: 777 ಚಾರ್ಲಿ ಕನ್ನಡದ ಅತ್ಯುತ್ತಮ ಸಿನಿಮಾ
ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ನಟಿಸಿದ್ದಾರೆ. ಕಿರಣ್ ರಾಜ್ ಈ ಚಿತ್ರದ ನಿರ್ದೇಶಕರಾಗಿದ್ದು, ರಕ್ಷಿತ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸಿದ್ದಾರೆ. ನೋಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಪ್ರತೀಕ್ ಶೆಟ್ಟಿ ಸಂಕಲನ, ಪ್ರಗತಿ ರಿಷಬ್ ಶೆಟ್ಟಿ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಚಿತ್ರದ ಹಿಂದಿ ಅವತರಣಿಕೆಗೆ ಸಂಜಯ್ ಉಪಾಧ್ಯ ಸಂಭಾಷಣೆ ನೀಡಿದ್ದು, ಹಾಡುಗಳಿಗೆ ಹಿಂದಿಯಲ್ಲಿ ಶೈನಿ ದಾಸ್, ಕಾರ್ತಿಕಾ ನೈನನ್ ದುಬೆ, ಮಾನ್ಸಾ ಪಾಂಡೆ, ಅಲೆಕ್ಸ್ ಡಿಸೋಜಾ, ಸಾಯೇಶ್ ಪೈ ಪನಂಡಿಕರ್ ಸಾಹಿತ್ಯ ನೀಡಿದ್ದಾರೆ.