ಮುಂಬೈ: ಬಾಲಿವುಡ್ ನಿರ್ದೇಶಕ ಸಾಜಿದ್ ಖಾನ್ (Sajid Khan) ವಿರುದ್ಧ ಕೇಳಿಬರುತ್ತಿರುವ ಮೀ ಟೂ (MeToo) ಆರೋಪಗಳು ನಿಲ್ಲುತ್ತಿಲ್ಲ. ಮಂದಾನ ಕರಿಮಿ, ಅಹಾನಾ ಕುಮ್ರಾ, ಶೆರ್ಲಿನ್ ಚೋಪ್ರಾ, ಇತ್ತೀಚೆಗೆ ಕನಿಷ್ಕಾ ಸೋನಿ ಸೇರಿ ಹಲವರು ತಮ್ಮ ಜತೆ ಸಾಜಿದ್ ಖಾನ್ ವರ್ತಿಸಿದ ರೀತಿ (MeToo)ಯನ್ನು ಬಹಿರಂಗಪಡಿಸಿದ್ದರು. ಈಗ ಸಾಜಿದ್ ವಿರುದ್ಧ ಭೋಜ್ಪುರಿ ನಟಿ ರಾಣಿ ಚಟರ್ಜಿ (Rani Chatterjee) ಅವರೂ ಇದೇ ಆರೋಪ ಮಾಡಿದ್ದಾರೆ.
“ಹಿಮ್ಮತ್ವಾಲಾ ಸಿನಿಮಾ ಶೂಟಿಂಗ್ ವೇಳೆ ನಾನು ಸಾಜಿದ್ ಅವರ ಸಂಪರ್ಕಕ್ಕೆ ಬಂದೆ. ಒಂದು ದಿನ ಕರೆ ಮಾಡಿದ ಅವರು ಒಬ್ಬಳೇ ತಮ್ಮ ಮನೆಗೆ ಬರುವಂತೆ ಸೂಚಿಸಿದರು. ಆಗ ನನಗೆ ಭಯವಾಯಿತು. ಅವರು ನನ್ನ ಸ್ತನಗಳ ಸೈಜ್ ಕೇಳಿದರು. ಬಾಯ್ಫ್ರೆಂಡ್ ಇದ್ದಾನಾ? ಎಷ್ಟು ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತೀರಿ ಎಂದೆಲ್ಲ ಕೇಳಿದರು” ಎಂಬುದಾಗಿ ರಾಣಿ ಚಟರ್ಜಿ ದೂರಿದ್ದಾರೆ.
ಸಿನಿಮಾ ಹಾಡಿಗೆ ನೃತ್ಯ ಮಾಡಲು ಸಾಜಿದ್ ಖಾನ್ ಸಂಪರ್ಕಿಸಿದಾಗ ಈ ರೀತಿ ವರ್ತಿಸಿದ್ದರು ಎಂದು ರಾಣಿ ಚಟರ್ಜಿ ತಿಳಿಸಿದ್ದಾರೆ. ೨೦೧೮ರಲ್ಲಿ ದೇಶಾದ್ಯಂತ ಮೀ ಟೂ ಪ್ರಕರಣಗಳು ಸುದ್ದಿಯಾದ ಬಳಿಕ ಸಾಜಿದ್ ಖಾನ್ ವಿರುದ್ಧ ಹಲವು ನಟಿಯರು ಆರೋಪಿಸಿದ್ದರು. ಬಾಲಿವುಡ್ ಸೇರಿ ಹಲವು ಚಿತ್ರರಂಗದಲ್ಲಿ ನಟಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ, ಅಸಭ್ಯವಾಗಿ ವರ್ತಿಸಿದ ಕುರಿತು ವಿವಿಧ ನಟಿಯರು ಮೀ ಟೂ ಆರೋಪ ಮಾಡಿದ್ದರು.
ಇದನ್ನೂ ಓದಿ | Tanushree Dutta | ಮೀಟೂ ನಂತರ ಕೊಲೆ ಯತ್ನದ ಬಗ್ಗೆ ಭಯಾನಕ ಸತ್ಯ ಬಾಯ್ಬಿಟ್ಟ ನಟಿ ತನುಶ್ರೀ ದತ್ತಾ!