Site icon Vistara News

Bijili Ramesh: ತಮಿಳು ಹಾಸ್ಯ ನಟ ಬಿಜಿಲಿ ರಮೇಶ್ ನಿಧನ

Bijili Ramesh

ಚೆನ್ನೈ: ತಮಿಳು ನಟ (Tamil Actor) ಬಿಜಿಲಿ ರಮೇಶ್ (Bijili Ramesh) ಅವರು ದೀರ್ಘಕಾಲದ ಅನಾರೋಗ್ಯದಿಂದ ಆಗಸ್ಟ್ 26ರಂದು ರಾತ್ರಿ ಚೆನ್ನೈನಲ್ಲಿ (chennai) ನಿಧನರಾದರು. ಲಿವರ್ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ 46 ವಯಸ್ಸಾಗಿತ್ತು ಎಂದು ಅವರ ಕುಟುಂಬ ಮಂಗಳವಾರ ತಿಳಿಸಿದೆ.

ಬಿಜಿಲಿ ರಮೇಶ್ ಅವರು ಮಲಗಿದ್ದಾಗ ಹಠಾತ್ತನೆ ನಿಧನರಾದರು. ಅತಿಯಾದ ಆಲ್ಕೋಹಾಲ್ ಸೇವನೆಯಿಂದಾಗಿ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೆರಡು ವಾರಗಳಲ್ಲಿ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಎರಡು ದಿನಗಳ ಹಿಂದೆಯಷ್ಟೇ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಬಿಜಿಲಿ ರಮೇಶ್ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಚೆನ್ನೈನ ಎಂಜಿಆರ್ ನಗರದ ಬಳಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.

ಜನಪ್ರಿಯ ಯೂಟ್ಯೂಬರ್‌ಗಳಾದ ವಿಜೆ ಸಿದ್ದು ಮತ್ತು ರಾಮ್ ನಿಶಾಂತ್ ಅವರನ್ನು ಒಳಗೊಂಡ ಹಾಸ್ಯ ವಿಡಿಯೋ ಅವರಿಗೆ ಜನಪ್ರಿಯತೆ ತಂದುಕೊಟ್ಟತ್ತು. ಇದು ಅಂತಿಮವಾಗಿ ಕೆಲವು ಚಿತ್ರಗಳಲ್ಲಿ ಅವರಿಗೆ ಪಾತ್ರಗಳನ್ನು ನೀಡಿತು.
ನಯನತಾರಾ ನಟಿಸಿದ ನೆಲ್ಸನ್ ದಿಲೀಪ್‌ಕುಮಾರ್ ಅವರ ಚೊಚ್ಚಲ ಚಿತ್ರ ಕೊಲಮಾವು ಕೋಕಿಲದ ಪ್ರಚಾರ ಗೀತೆ ‘ಕಬಿಸ್ಕಬಾ ಕೋಕೋ’ ಸಂಗೀತ ವಿಡಿಯೋದ ಮೂಲಕ ಬಿಜಿಲಿ ರಮೇಶ್ ಚಿತ್ರರಂಗಕ್ಕೆ ಪ್ರವೇಶಿಸಿದರು.

ಹಲವಾರು ಟಿವಿ ಶೋಗಳ ಜೊತೆಗೆ ಸಿವಪ್ಪು ಮಂಜಲ್ ಪಚೈ (2019), ಆದೈ (2019) ಮತ್ತು ಕಾತು ವಾಕುಲಾ, ಕಾದಲ್ (2022) ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದ ಅವರ ಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ ಅವರ ಕುಟುಂಬವು ಚಲನಚಿತ್ರ ಸಮುದಾಯದಿಂದ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿತು. ಬಳಿಕ ಸಹೋದ್ಯೋಗಿಗಳಿಂದ ಹಣಕಾಸಿನ ನೆರವು ಪಡೆದಿದ್ದರು.

ಇದನ್ನೂ ಓದಿ: Mohanlal: ʼಅಮ್ಮʼ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್‌ಲಾಲ್ ರಾಜೀನಾಮೆ

Bijili Ramesh

ಯೂಟ್ಯೂಬ್‌ನಲ್ಲಿ ಸಂದರ್ಶನವೊಂದರಲ್ಲಿ ಅವರು ತಮ್ಮ ಕಾಯಿಲೆಯ ಬಗ್ಗೆ ಕೆಲವು ತಿಂಗಳ ಹಿಂದೆಯಷ್ಟೇ ಬಹಿರಂಗಪಡಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಯಾಗಿದ್ದ ಬಿಜಿಲಿ ರಮೇಶ್ ಅವರಿಗೆ ರಜನಿಕಾಂತ್ ಜತೆಗೆ ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲವಿತ್ತು. ಕೊನೆಗೂ ಅವರ ಈ ಕನಸು ನನಸಾಗಲೇ ಇಲ್ಲ.

ಕಾಯಿಲೆಯ ಬಗ್ಗೆ ಪತ್ನಿ ಹೇಳಿದ್ದೇನು?

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಜಿಲಿ ರಮೇಶ್ ಅವರ ಪತ್ನಿ, ಮದ್ಯಪಾನದಿಂದಾಗಿ ಅವರ ಲಿವರ್ ಸಂಪೂರ್ಣವಾಗಿ ವಿಫಲವಾಗಿದೆ. ಕಳೆದ ತಿಂಗಳವರೆಗೆ ಚೆನ್ನಾಗಿಯೇ ಇದ್ದರು. ಮೊದಲು ಓಮಂದೂರಾರ್ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ಆಗ ಯಕೃತ್ತು ಮತ್ತು ಕಾಮಾಲೆ ಇರುವುದು ಪತ್ತೆಯಾಯಿತು. ಅನಂತರ ಅವರನ್ನು 10 ದಿನಗಳ ಕಾಲ ಚಿಕಿತ್ಸೆಗಾಗಿ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಜೀವವನ್ನು ಉಳಿಸಲು ವೈದ್ಯರಿಗೆ ಬೇಡಿಕೊಂಡೆವು. ಎಷ್ಟು ಸಾಧ್ಯವೋ ಅಷ್ಟು ನೋಡುತ್ತಿದ್ದೇವೆ. ದೇವರನ್ನು ಹೆಚ್ಚು ಪ್ರಾರ್ಥಿಸಿ. ಲಿವರ್ ಕಸಿ ಮಾಡಬೇಕು. ಇನ್ನೊಂದು ಲಿವರ್ ಸಿಕ್ಕರೂ ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಖಾಸಗಿಯಾಗಿ ಮಾಡಿದರೆ 60 ಲಕ್ಷ ರೂ. ವರೆಗೆ ಬಿಲ್ ಬರುತ್ತಿತ್ತು. ಆ ಮಟ್ಟಿಗೆ ನಮಗೆ ಯಾವುದೇ ಸೌಲಭ್ಯವಿಲ್ಲ. ಅವರಿಲ್ಲದೆ ಹೇಗೆ ಬದುಕಬೇಕು ಎಂಬುದು ಗೊತ್ತಾಗುತ್ತಿಲ್ಲ. ಮಗನನ್ನ ನಾನೇ ನೋಡಿಕೊಳ್ಳಬೇಕು ಎಂದಿದ್ದರು.

Exit mobile version