ಸೋಮಶೇಖರ್ ಬಿ, ಬೆಂಗಳೂರು
ಸ್ಕಾಟ್ಲೆಂಡ್‌ನ ಗ್ಲಾಸ್ಗೋ ನಗರದಲ್ಲಿ ದಿಟ್ಟ ಪೊಲೀಸ್ ಅಧಿಕಾರಿ ಜಿಯಾ ಸಿಂಗ್ (ಸೋನಂ ಕಪೂರ್) ಅಪಘಾತದಲ್ಲಿ ಕಣ್ಣು ಕಳೆದುಕೊಳ್ಳುತ್ತಾರೆ. ಆದರೆ, ಪೊಲೀಸ್ ಅಧಿಕಾರಿಯ ‘ಒಳಗಣ್ಣು’ ಚುರುಕಾಗಿರುತ್ತವೆ. ಇದೇ ಚುರುಕುತನವೇ ಸೈಕೋ ಕಿಲ್ಲರ್ ಒಬ್ಬನನ್ನು ಹಿಡಿಯಲು ನೆರವಾಗುತ್ತದೆ. ಅದು ಹೇಗೆ ಎಂಬುದರ ತಿರುಳನ್ನು ಹೊಂದಿರುವುದೇ ಬ್ಲೈಂಡ್ ಸಿನಿಮಾ ಆಗಿದೆ. ಪೊಲೀಸ್ ಅಧಿಕಾರಿಯ ಚುರುಕುತನವನ್ನು, ಕಣ್ಣು ಕಾಣದಿದ್ದರೂ ಅಪರಾಧಿಯನ್ನು ‘ನೋಡು’ವಲ್ಲಿ ಸೋನಂ ಕಪೂರ್ ಯಶಸ್ವಿಯಾಗಿದ್ದಾರೆ. ನಾಲ್ಕು ವರ್ಷದ ಬಳಿಕ ಬಣ್ಣ ಹಚ್ಚಿದ ಸೋನಂ ಕಪೂರ್ ಕಮ್ ಬ್ಯಾಕ್ ಮಾಡಿದ್ದಾರೆ.
ಸಿನಿಮಾ: Blind
ನಿರ್ದೇಶನ: ಶೋಮ್ ಮಖೀಜಾ
ತಾರಾಗಣ: ಸೋನಂ ಕಪೂರ್, ವಿನಯ್ ಪಾಠಕ್, ಪುರಬ್ ಕೊಹ್ಲಿ
ನಿರ್ಮಾಣ: ಸುಜಯ್ ಘೋಷ್
ಮರುದಿನ ಪರೀಕ್ಷೆ ಇದ್ದರೂ ತಡರಾತ್ರಿಯವರೆಗೆ ಕನ್ಸರ್ಟ್‌ನಲ್ಲಿ (Concert) ಬ್ಯುಸಿಯಾಗಿದ್ದ ತಮ್ಮನಿಗೇ ಬೇಡಿಕೆ ಹಾಕಿ ಕರೆದುಕೊಂಡು ಹೋಗುವ ಜಿಯಾ ಸಿಂಗ್, ಮಾರ್ಗ ಮಧ್ಯೆ ಆತನ ಜತೆ ಜಗಳವಾಡುತ್ತಾರೆ. ತಮ್ಮನನ್ನು ‘ಕಂಟ್ರೋಲ್’ ಮಾಡುವ ಭರದಲ್ಲಿ ಕಾರಿನ ಮೇಲಿನ ‘ನಿಯಂತ್ರಣ’ ತಪ್ಪುತ್ತದೆ. ಆಗ ಸಂಭವಿಸಿದ ಅಪಘಾತದಲ್ಲಿ ತಮ್ಮನ ಜತೆಗೆ ಜಿಯಾ ಸಿಂಗ್ ಎರಡೂ ಕಣ್ಣುಗಳನ್ನು ಕಳೆದುಕೊಳ್ಳುತ್ತಾಳೆ. ಮತ್ತೆ ಪೊಲೀಸ್ ಕೆಲಸಕ್ಕೆ ಹಾಜರಾಗಲು ಇಲಾಖೆಯು ಅನುಮತಿ ನೀಡದಿದ್ದಾಗ ಜಿಯಾ ಸಿಂಗ್ ಬೇಸರದ ಸಾಗರದಲ್ಲಿ ಮುಳುಗುತ್ತಾಳೆ. ‘ನನ್ನ ಬಳಿ ಇರು’ ಎಂದು ಅಮ್ಮ ಹೇಳಿದಾಗ, ನಾನೊಬ್ಬಳೇ ಇರುತ್ತೇನೆ ಎಂದು ಆಕೆ ‘ಎದ್ದು’ ಬರುತ್ತಾಳೆ. ತಂತ್ರಜ್ಞಾನದ ಸಹಾಯದಿಂದ ಆಕೆ ಮುದ್ದು ನಾಯಿ (ಎಲ್ಸಾ) ಜತೆ ಇರುತ್ತಾಳೆ.
ಇದೇ ಕತೆಯ ತಿರುಳು
ರಾತ್ರಿ ಟ್ಯಾಕ್ಸಿಗಾಗಿ ಕಾಯುತ್ತಿದ್ದಾಗ, ಟ್ಯಾಕ್ಸಿ ಎಂದು ನಂಬಿಸಿದ ಸೈಕೋ ಕಿಲ್ಲರ್ ಕಾರು ಹತ್ತುತ್ತಾಳೆ. ಮಾರ್ಗ ಮಧ್ಯೆ ಸೈಕೋ ಕಿಲ್ಲರ್‌ನ ಅನುಮಾನಾಸ್ಪದ ವರ್ತನೆಗೆ ಪ್ರತಿರೋಧ ಒಡ್ಡುತ್ತಾಳೆ. ಅದೃಷ್ಟವಶಾತ್, ಯುವತಿಯರನ್ನು ಅಪಹರಿಸಿ, ಅವರಿಗೆ ಚಿತ್ರ ಹಿಂಸೆ ನೀಡಿ ಕೊಲ್ಲುವ ಸೈಕೋ ಕಿಲ್ಲರ್ (ಪುರಬ್ ಕೊಹ್ಲಿ) ಬಲೆಯಿಂದ ತಪ್ಪಿಸಿಕೊಳ್ಳುತ್ತಾಳೆ. ಕೊನೆಗೆ ಆತನನ್ನೇ ಬಲೆಗೆ ಬೀಳಿಸುತ್ತಾಳೆ ಎಂಬುದೇ ಕತೆಯ ತಿರುಳು.
ಸೈಕೋ ಕಿಲ್ಲರ್ ಕುರಿತು ಪೊಲೀಸರಿಗೆ ಮಾಹಿತಿ ನೀಡಿದಾಗ, ಪೊಲೀಸರು ಜಿಯಾ ಸಿಂಗ್ ಕಣ್ಣು ಕಾಣದವಳು ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಡಿಟೆಕ್ಟೆವ್ ಇನ್ಸ್‌ಪೆಕ್ಟರ್ ಪೃಥ್ವಿ ಖನ್ನಾ (ವಿನಯ್ ಪಾಠಕ್) ಅವರು ಜಿಯಾ ಸಿಂಗ್ ಚಾಣಾಕ್ಷತನ, ಅಪರಾಧಿ ಕುರಿತು ಆಕೆ ನೀಡಿದ ಮಾಹಿತಿಯಿಂದ ಇಂಪ್ರೆಸ್ ಆಗಿ ಸೈಕೋ ಕಿಲ್ಲರ್‌ನನ್ನು ಹಿಡಿಯಲು ಮುಂದಾಗುತ್ತಾರೆ. ಆದರೆ, ಸ್ಪೆಷಲ್ ಆಪ್ಸ್ (Special Ops) ವೆಬ್ ಸಿರೀಸ್‌ನಿಂದ ಹೆಚ್ಚು ಖ್ಯಾತಿ ಗಳಿಸಿದ್ದ ವಿನಯ್ ಪಾಠಕ್ ಇಲ್ಲಿ ಚೂರು ಮಂಕಾದಂತೆ ಕಾಣುತ್ತಾರೆ. ಅವರ ‘ಡಿಟೆಕ್ಟಿವ್’ ಪಾತ್ರವು ಅಷ್ಟು ‘ಎಫೆಕ್ಟಿವ್’ ಎನಿಸುವುದಿಲ್ಲ.
ಅಲ್ಲಲ್ಲಿ ಲಾಜಿಕ್ ಮಿಸ್
ಸೈಕೋ ಕಿಲ್ಲರ್‌ನನ್ನು ಹಿಡಿಯಲು Eye Witness ಆಗಿ ಬರುವ ನಟ ಶುಭಂ ಸರಫ್, ತಮ್ಮ ಚಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಇಬ್ಬರೂ ಸೇರಿ ಸೈಕೋ ಕಿಲ್ಲರ್‌ನನ್ನು ಹಿಡಿಯುತ್ತಾರೆ. ಸವಾರಿ ಮಾಡಲು ಬಂದ ಸೈಕೋ ಕಿಲ್ಲರ್‌ನನ್ನು ಜಿಯಾ ಸಿಂಗ್ ನಿರ್ನಾಮ ಮಾಡುತ್ತಾರೆ. ಕಣ್ಣು ಕಾಣದಿದ್ದರೂ ಹಠ ಹಾಗೂ ಚುರುಕುತನದಿಂದ ಜಿಯಾ ಸಿಂಗ್ ಸೈಕೋ ಕಿಲ್ಲರ್‌ನನ್ನು ಸದೆಬಡಿಯುತ್ತಾರೆ. ಆದರೆ, ಅಲ್ಲಲ್ಲಿ ಮಿಸ್ ಆಗುವ ಲಾಜಿಕ್‌ಗಳು, ಕಾಣಿಸಿಕೊಳ್ಳದ ಟ್ವಿಸ್ಟ್‌ಗಳು, ಕ್ಲೈಮ್ಯಾಕ್ಸ್ ವೇಳೆ ಅಡ್ಡ ಬರದ ತಿರುವುಗಳು ಸಿನಿಮಾ ಮೇಲೆ ಪರಿಣಾಮ ಬೀರುತ್ತವೆ. ಕ್ಲೈಮ್ಯಾಕ್ಸ್ ಸಪ್ಪೆ ಎನಿಸುತ್ತದೆ.
ಇದನ್ನೂ ಓದಿ: Cinema News : ಸಿನಿಮಾಗಳ ಎರಡನೇ ಭಾಗಗಳು ಗಳಿಸಿದ್ದು ಎಷ್ಟು? ಯಾವುದು ಹಿಟ್? ಯಾವುದು ಫ್ಲಾಪ್?
ಅಮಿತಾಭ್ ಬಚ್ಚನ್ ನಟನೆಯ ಬದ್ಲಾ (Badla), Te3n ಅಂತಹ ಸೂಪರ್ ಹಿಟ್ ಕ್ರೈಮ್, ಥ್ರಿಲ್ಲರ್ ಸಿನಿಮಾಗಳಿಗೆ ಸೆಕೆಂಡ್ ಯೂನಿಟ್ ಡೈರೆಕ್ಟರ್ ಆಗಿ ಸೈ ಎನಿಸಿಕೊಂಡಿದ್ದ ಶೋಮ್ ಮಖೀಜಾ ಈ ಸಿನಿಮಾದ ನಿರ್ದೇಶನ ಹೊತ್ತುಕೊಂಡು, ಆರಂಭದಲ್ಲಿ ಸರಿಯಾಗಿ ನಿಭಾಯಿಸಿದರೂ ಕೊನೆಗೆ ತಡವರಿಸಿದ್ದಾರೆ ಎನಿಸುತ್ತದೆ. ನಾಲ್ಕು ವರ್ಷಗಳ ನಂತರ ಬಣ್ಣ ಹಚ್ಚಿದ ಸೋನಂ ಕಪೂರ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೊರಿಯಾದ Blind ಸಿನಿಮಾದ ರಿಮೇಕ್ ಆದ ಇದು ಸೋನಂ ಕಪೂರ್ ನಟನೆ, ಕತೆಯ ತಿರುಳಿನಿಂದಾಗಿ ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂರಿಸದಿದ್ದರೂ, ಎದ್ದು ಹೋಗದಂತೆ ತಡೆಯುತ್ತದೆ.