ಮುಂಬೈ: ಸಣ್ಣ ವಯಸ್ಸಿನಲ್ಲೇ ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿ ದೇಶದ ಯುವಜನರ ಕಣ್ಮಣಿಯಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಜೂನ್ 14ಕ್ಕೆ ಎರಡು ವರ್ಷ.
ಎಂ.ಎಸ್. ಧೋನಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದ ಸುಶಾಂತ್ ಸಾವು ಹಲವು ಪ್ರಶ್ನೆಗಳನ್ನು ಹಾಗೇ ಬಿಟ್ಟು ಹೋಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂದು ಕಣ್ಣೀರು ಹಾಕುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಸುಶಾಂತ್ ಸಿಂಗ್ ಸಾವಿನ ಎರಡನೇ ವರ್ಷದ ದಿನ ಎಲ್ಲ ಕಡೆ ಸುಶಾಂತ್ ಗೆ ನ್ಯಾಯ ಬೇಕು ಎನ್ನುವ ಬೇಡಿಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ಜೋರಾಗಿ ಟ್ರೆಂಡ್ ಆಗಿದೆ.
ಸುಶಾಂತ್ ಸಿಂಗ್ ಅವರು ಕಾಯ್ ಪೋ ಚೆ, ಎಂಎಸ್ ಧೋನಿ, ದಿ ಅನ್ ಟೋಲ್ಡ್ ಟೇಲ್, ಕೇದಾರನಾಥ್ ಮತ್ತು ಚಿಚೋರೆಯಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಸುಶಾಂತ್ ಅವರ ವೈವಿಧ್ಯಮಯ ಸಿನಿಮಾ ಜೀವನ 2020 ರಲ್ಲಿ ಕೊನೆಗೊಂಡಿತು. 2020ರ ಜೂನ್ 14ರಂದು ಬಾಂದ್ರಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ವಯಸ್ಸು 34 ಅಷ್ಟೇ. ಈ ಸಾವು ದೇಶಾದ್ಯಂತ ಭಾರಿ ಆಘಾತವನ್ನುಂಟು ಮಾಡಿತ್ತು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಹಲವಾರು ಅನುಮಾನಗಳು ಇದ್ದವು. ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತದಿಂದ ಅವರಿಗೆ ಅನ್ಯಾಯವಾಗುತ್ತಿದೆ. ಆ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎನ್ನುವುದು ಒಂದು ಅನುಮಾನವಾದರೆ, ಯಾರೋ ಆತ್ಮೀಯರೇ ಕೊಲೆ ಮಾಡಿದ್ದಾರೆ ಎಂಬ ವಾದವೂ ಇತ್ತು. ಸಾವಿನ ಸುತ್ತ ಮಾದಕ ವ್ಯಸನ, ಡ್ರಗ್ಸ್ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ಹೀಗೆ ಹಲವು ಸಂಶಯದ ಹುತ್ತಗಳು ಬೆಳೆದಿದ್ದವು. ಸಿಬಿಐ, ಇ.ಡಿ, ಎನ್‌ಸಿಬಿ ಸೇರಿದಂತೆ ಹಲವು ತನಿಖಾ ತಂಡಗಳು ನಾನಾ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿವೆ. ಪೋಸ್ಟ್ ಮಾರ್ಟಂ ವರದಿಗಳ ಪ್ರಕಾರ ಸುಶಾಂತ್ ಆತ್ಮಹತ್ಯೆಯೇ ಹೌದಾಗಿದ್ದರೂ ಅದರ ಹಿಂದಿನ ಶಕ್ತಿಗಳು, ಸಿನಿಮಾ ರಾಜಕಾರಣ ಹೊರಬರಬೇಕು ಎನ್ನುವುದು ಅಭಿಮಾನಿಗಳ ಆಗ್ರಹವಾಗಿತ್ತು. ಆದರೆ, ಈಗ ಅದೆಲ್ಲವೂ ಮುಚ್ಚಿ ಹೋದಂತಿದೆ. ಹೀಗಾಗಿ, ಅವರ ಅನುಯಾಯಿಗಳ ಕೂಗು ಮಾತ್ರ ನಿಂತಿಲ್ಲ. ‘
ಒಬ್ಬ ಅಭಿಮಾನಿ ಹೀಗೆ ಕಮೆಂಟ್ ಮಾಡಿದ್ದಾರೆ: “ದೇಹಕ್ಕೆ ಸಾವಿದೆಯೇ ಹೊರತು ಆತ್ಮಕ್ಕಲ್ಲ, ನೀವು ನಮ್ಮ ಹೃದಯದಲ್ಲಿ ನಿರಂತರವಾಗಿ ಇರುತ್ತೀರಿ. ನಾನು ನಿಮಗಾಗಿ ಆಶಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ದೇವರು ನಿಮ್ಮ ಆತ್ಮವನ್ನು ಗೌರವಿಸಲಿ,ʼʼ ಎಂದು ಸುಶಾಂತ್ ಗೆ 2 ವರ್ಷಗಳ ಅನ್ಯಾಯ (2 years-of-injustice-to-sushant) ಎಂಬ ಹ್ಯಾಶ್ ಟ್ಯಾಗ್ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: ಸಂಜಯ್ ದತ್ TO ಸಿದ್ಧಾಂತ್ ಕಪೂರ್: ಬಾಲಿವುಡ್ ಬೆಂಬಿಡದ ಡ್ರಗ್ಸ್ ನಂಟು!