Site icon Vistara News

Fighter Movie: ʼಫೈಟರ್‌ʼ ಚಿತ್ರತಂಡಕ್ಕೆ ಸಂಕಷ್ಟ; ಕಿಸ್ಸಿಂಗ್‌ ಸೀನ್‌ಗೆ ಆಕ್ಷೇಪ ವ್ಯಕ್ತಪಡಿಸಿ ನೋಟಿಸ್‌ ಜಾರಿ

fighter

fighter

ಮುಂಬೈ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಜನವರಿ 25ರಂದು ತೆರೆಕಂಡ ʼಫೈಟರ್‌ʼ ಬಾಲಿವುಡ್‌ ಚಿತ್ರಕ್ಕೆ (Fighter Movie) ಕಾನೂನು ಸಂಕಷ್ಟ ಎದುರಾಗಿದೆ. ಚಿತ್ರದಲ್ಲಿನ ಮುಖ್ಯ ಪಾತ್ರಧಾರಿಗಳು ಇಂಡಿಯನ್‌ ಏರ್‌ ಫೋರ್ಸ್‌ ಸಮವಸ್ತ್ರ ಧರಿಸಿ ಚುಂಬನ ದೃಶ್ಯದಲ್ಲಿ ಕಾಣಿಸಿಕೊಂಡಿರುವುಕ್ಕೆ ಆಕ್ಷೇಪ ವ್ಯಕ್ತಪಡಿಸಿ ನೋಟಿಸ್‌ ನೀಡಲಾಗಿದೆ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಸ್ಕ್ವಾಡ್ರನ್ ಲೀಡರ್ ಮಿನಿ ರಾಥೋಡ್ ಮತ್ತು ಹೃತಿಕ್ ರೋಷನ್ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ ಪಾತ್ರದಲ್ಲಿ ನಟಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಇಬ್ಬರು ಪರಸ್ಪರ ಚುಂಬಿಸುವ ದೃಶ್ಯವಿದೆ. ಈ ವೇಳೆ ಅವರು ಏರ್‌ ಫೋರ್ಸ್‌ ಸಮವಸ್ತ್ರ ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಆಕ್ಷೇಪವೇನು?

ʼʼಪಾತ್ರಗಳು ವಾಯುಪಡೆಯ ಸಮವಸ್ತ್ರದಲ್ಲಿದ್ದುಕ್ಕೊಂಡೇ ಕಿಸ್ಸಿಂಗ್‌ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಬೇಸರವನ್ನುಂಟು ಮಾಡಿದೆ. ಹೀಗಾಗಿ ಚಿತ್ರ ತಂಡಕ್ಕೆ ಕಾನೂನು ನೋಟಿಸ್ ನೀಡಲಾಗಿದೆʼʼ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ʼʼಮಿಲಿಟರಿ ಸಮವಸ್ತ್ರ ಶೌರ್ಯ ಮತ್ತು ಪಾವಿತ್ರ್ಯದ ಸಂಕೇತ. ಆದರೆ ಚಿತ್ರತಂಡ ಈ ಭಾವನೆಯನ್ನು ಘಾಸಿಗೊಳಿಸಿದೆ. ಕಥೆಯಲ್ಲಿ ಭಾರತೀಯ ವಾಯುಪಡೆಯ ಸದಸ್ಯರೆಂದು ಬಿಂಬಿಸಲ್ಪಟ್ಟಿರುವ ಪಾತ್ರಧಾರಿಗಳು ಇಂತಹ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಸರಿಯಲ್ಲʼʼ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತೀಯ ವಾಯುಪಡೆಯ ಅಧಿಕಾರಿ ವಿಂಗ್ ಕಮಾಂಡರ್ ಸೌಮ್ಯ ದೀಪ್ ದಾಸ್ ಅವರು ʼಭಾರತೀಯ ವಾಯುಪಡೆ ಮತ್ತು ಅದರ ಅಧಿಕಾರಿಗಳ ಮಾನಹಾನಿ, ಅವಮಾನ ಮತ್ತು ನಕಾರಾತ್ಮಕ ಪರಿಣಾಮಕ್ಕಾಗಿ ಕಾನೂನು ನೋಟಿಸ್ʼ ಎಂಬ ಕಾರಣ ನೀಡಿ ʼಫೈಟರ್ʼ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಭಾರತೀಯ ವಾಯುಪಡೆಯ ಸಮವಸ್ತ್ರವು ಕೇವಲ ಬಟ್ಟೆಯ ತುಂಡಲ್ಲ, ಇದು ಕರ್ತವ್ಯ, ರಾಷ್ಟ್ರೀಯ ಭದ್ರತೆ ಮತ್ತು ನಿಸ್ವಾರ್ಥ ಸೇವೆಯ ಪ್ರಬಲ ಸಂಕೇತ ಎಂದು ಉಲ್ಲೇಖಿಸಿದ್ದಾರೆ.

ʼʼವೈಯಕ್ತಿಕ ಪ್ರಣಯ ಸಂಬಂಧಗಳನ್ನು ಉತ್ತೇಜಿಸುವ ದೃಶ್ಯಕ್ಕಾಗಿ ಈ ಪವಿತ್ರ ಸಮವಸ್ತ್ರವನ್ನು ಬಳಸುವ ಮೂಲಕ ಚಿತ್ರವು ಅದರ ಘನತೆಯನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸುತ್ತದೆ ಮತ್ತು ನಮ್ಮ ರಾಷ್ಟ್ರದ ಸೇವೆಯಲ್ಲಿ ತೊಡಗಿರುವ ಅಸಂಖ್ಯಾತ ಅಧಿಕಾರಿಗಳ ತ್ಯಾಗಗಳನ್ನು ಅಪಮೌಲ್ಯಗೊಳಿಸುತ್ತದೆʼʼ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

“ತಾಂತ್ರಿಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ರನ್‌ವೇಯಲ್ಲಿ ಸಮವಸ್ತ್ರ ಧರಿಸಿಕೊಂಡು ಚುಂಬಿಸುವ ದೃಶ್ಯ ಇಲ್ಲಿದೆ. ಇದನ್ನು ರೊಮ್ಯಾಂಟಿಕ್ ಆಗಿ ಎಂದು ಚಿತ್ರಿಸಲಾಗಿದ್ದರೂ, ಐಎಎಫ್ ಅಧಿಕಾರಿಗೆ ಸಂಬಂಧಿಸಿ ಇದು ಸಂಪೂರ್ಣವಾಗಿ ಅನುಚಿತ ಮತ್ತು ಅಸಮಂಜಸವೆಂದು ಪರಿಗಣಿಸಲಾಗುತ್ತದೆ. ಇದು ಶಿಸ್ತು ಮತ್ತು ಸಭ್ಯತೆಯ ಉನ್ನತ ಮಾನದಂಡಗಳಿಗೆ ವಿರುದ್ಧ ವರ್ತನೆ” ಎಂದು ತಿಳಿಸಲಾಗಿದೆ. ಚಿತ್ರತಂಡ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಜತೆಗೆ ಅನಿಲ್ ಕಪೂರ್ ಜತೆಗೆ ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜೀಜ್, ಪ್ರದುಮ್ ಶುಕ್ಲಾ ಮತ್ತು ಪ್ರದುಮ್ ಜಯಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಸದ್ಯ ವಿಶ್ವಾದ್ಯಂತ 300 ಕೋಟಿ ರೂ.ಗಿಂತ ಅಧಿಕ ಗಳಿಸಿದೆ.

ಇದನ್ನೂ ಓದಿ: Fighter Movie: ಪಿ.ವಿ.ಸಿಂಧು ಗಮನ ಸೆಳೆದ ‘ಫೈಟರ್‌’; ಚಿತ್ರದ ಬಗ್ಗೆ ಬ್ಯಾಡ್ಮಿಂಟನ್‌ ತಾರೆ ಹೇಳಿದ್ದೇನು?

Exit mobile version