Site icon Vistara News

Jaya Prada: ನಟಿ , ರಾಜಕಾರಣಿ ಜಯಪ್ರದಾ ಬಂಧನಕ್ಕೆ ಕೋರ್ಟ್‌ ಮತ್ತೊಮ್ಮೆ ಆದೇಶ

Jaya Prada absconding in two cases

ಬೆಂಗಳೂರು: ಹಿರಿಯ ನಟಿ ಮತ್ತು ರಾಜಕಾರಣಿ ಜಯಪ್ರದಾ (Actress, former MP Jaya Prada) ಅವರನ್ನು ಬಂಧಿಸುವಂತೆ ರಾಂಪುರದ ಸಂಸದ/ಶಾಸಕ ನ್ಯಾಯಾಲಯವು (Rampur MP/MLA court) ಪೊಲೀಸ್ ವರಿಷ್ಠಾಧಿಕಾರಿಗೆ ಈ ಮುಂಚೆ ಆದೇಶ ನೀಡಿತ್ತು. ವಿಶೇಷ ತಂಡ ರಚಿಸಿ ಮಾಜಿ ಸಂಸದರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಲಾಗಿತ್ತು. ಮಂಗಳವಾರ (ಫೆ.27) ನ್ಯಾಯಾಲಯಕ್ಕೆ ಹಾಜರಾಗಲು ಡೇಟ್‌ ಕೂಡ ನೀಡಿತ್ತು. ನಟಿ ಗೈರಾಗಿದ್ದರಿಂದ ಜಯಪ್ರದಾ ವಿರುದ್ಧ ಸೆಕ್ಷನ್‌ 82ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್‌ ಹೇಳಿದೆ. ಪ್ರಕರಣದ ವಿಚಾರಣೆ ಮಾ.6ರಂದು ಮತ್ತೊಮ್ಮೆ ನಡೆಯಲಿದೆ.

ಹಲವಾರು ಬಾರಿ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಹೊರಡಿಸಿದ ನಂತರವೂ ಅವರು ಮಂಗಳವಾರ (ಫೆ.27) ಹಾಜರಾಗದಿದ್ದಕ್ಕಾಗಿ ರಾಂಪುರದ ಎಂಪಿ/ಎಂಎಲ್‌ಎ ನ್ಯಾಯಾಲಯವು ಸಿಆರ್‌ಪಿಸಿ ಆದೇಶ 82 ಅನ್ನು ಹೊರಡಿಸಿದೆ. ಈ ಕುರಿತು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಅಮರನಾಥ್ ತಿವಾರಿ ಅವರು, ಜಯಾ ವಿರುದ್ಧ 2019 ರ ಚುನಾವಣಾ ನೀತಿ ಸಂಹಿತೆ ಪ್ರಕರಣ ರಾಂಪುರದ ನ್ಯಾಯಾಲಯದಲ್ಲಿ ಕೇಮ್ರಿ ಪೊಲೀಸ್ ಠಾಣೆ ಮತ್ತು ಸ್ವರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Jaya Prada: 7 ಸಾರಿ ವಾರಂಟ್‌ ನಿರ್ಲಕ್ಷಿಸಿದ ನಟಿ ಜಯಪ್ರದಾ ಮೇಲೆ ಕೋರ್ಟ್‌ ಕಿಡಿಕಿಡಿ, ಜಾಮೀನುರಹಿತ ಬಂಧನ ಆದೇಶ

ಎರಡು ಪ್ರಕರಣಗಳಲ್ಲಿ ಜಯಪ್ರದಾ ನೀತಿ ಸಂಹಿತೆ ಉಲ್ಲಂಘನೆ

2019ರ ಎರಡು ಪ್ರಕರಣಗಳಲ್ಲಿ ಜಯಪ್ರದಾ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರು 2019ರ ಲೋಕಸಭೆ ಚುನಾವಣೆಯಲ್ಲಿ ರಾಂಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ನಟಿ ತಲೆಮರೆಸಿಕೊಂಡಿದ್ದರು. ಈವರೆಗೆ ಏಳು ಬಾರಿ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಲಾಗಿತ್ತು. ಈಗ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಿಂದ ಜಗಪ್ರದಾಗೆ ಸಂಕಷ್ಟ ಹೆಚ್ಚಿದೆ. ಪ್ರಕರಣದ ವಿಚಾರಣೆ ಮಾ.6ರಂದು ಮತ್ತೊಮ್ಮೆ ನಡೆಯಲಿದೆ. ಮಾರ್ಚ್ 6 ರಂದು ಅವರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ತಂಡವನ್ನು ರಚಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ.

ಇದೇನು ಮೊದಲಲ್ಲ

ಜಯಪ್ರದಾ ವಿವಾದಕ್ಕೆ ಸಿಲುಕುತ್ತಿರುವುದು ಇದೇನು ಮೊದಲಲ್ಲ. ಕಳೆದ ವರ್ಷ ಚೆನ್ನೈನ ನ್ಯಾಯಾಲಯವು ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ತಪ್ಪಿತಸ್ಥರೆಂದು ಘೋಷಿಸಿತು. ಆಕೆಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿತ್ತು. ಜಯಪ್ರದಾ ಅವರ ಥಿಯೇಟರ್‌ನ ಕಾರ್ಮಿಕರಿಗೆ ಇಎಸ್‌ಐ ಹಣವನ್ನು ಪಾವತಿಸಿರಲಿಲ್ಲ. ವರದಿಗಳ ಪ್ರಕಾರ ಜಯಪ್ರದಾ ಅಪರಾಧವನ್ನು ಒಪ್ಪಿಕೊಂಡಿದ್ದು, ಬಾಕಿ ಪಾವತಿಸುವುದಾಗಿ ಒಪ್ಪಿದ್ದರು. ಪ್ರಕರಣವನ್ನು ವಜಾಗೊಳಿಸುವಂತೆ ಕೋರಿದ್ದರು. ಆದರೆ ನ್ಯಾಯಾಲಯ ಆಕೆಯ ಮನವಿಯನ್ನು ತಿರಸ್ಕರಿಸಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿತ್ತು.

ಜಯಪ್ರದಾ ಎಂದು ಕರೆಯಲ್ಪಡುವ ಲಲಿತಾ ರಾಣಿ ರಾವ್ ಅವರು 70, 80 ಮತ್ತು 90ರ ದಶಕದ ಆರಂಭದಲ್ಲಿ ಹಿಂದಿ, ಕನ್ನಡ ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕವಿರತ್ನ ಕಾಳಿದಾಸ, ಹಬ್ಬ, ಶಬ್ದವೇದಿ, ಹುಲಿಯ ಹಾಲಿನ ಮೇವು ಮುಂತಾದ ಕನ್ನಡ ಚಲನಚಿತ್ರಗಳಲ್ಲಿ, ಅಡವಿ ರಾಮುಡು, ಸಿರಿ ಸಿರಿ ಮುವ್ವ, ಸೀತಾ ರಾಮ ವನವಾಸಂ, ರಾಮ ಕೃಷ್ಣುಲು, ಮಜ್ಬೂರ್, ಫರಿಷ್ತೆ, ತ್ಯಾಗಿ, ಲವ್ ಕುಶ್, ಮುಂತಾದ ತೆಲುಗು, ತಮಿಳು, ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಂಡಿಯನ್ ಐಡಲ್, ಸಸುರಲ್ ಸಿಮರ್ ಕಾ, ಡ್ರಾಮಾ ಜೂನಿಯರ್ಸ್ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version