ಬೆಂಗಳೂರು: ಬಾಲಿವುಡ್‌ನಲ್ಲಿ ಸದ್ಯಕ್ಕೆ ಸುದ್ದಿಯಲ್ಲಿರುವುದು ಮುಕೇಶ್ ಅಂಬಾನಿ ಪುತ್ರನ ಮದುವೆ. ಇದರಲ್ಲಿ ಬಹುತೇಕ ಎಲ್ಲಾ ಬಾಲಿವುಡ್ ನಟ-ನಟಿಯರೂ ಭಾಗವಹಿಸಿ, ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಮೂರು ʻಖಾನ್ʼಗಳು ಒಟ್ಟಾಗಿ ವೇದಿಕೆಯಲ್ಲಿ ಕಂಡದ್ದು, ಪ್ರೆಗ್ನೆಂಟ್ ದೀಪಿಕಾ ಡ್ಯಾನ್ಸ್ ಮಾಡಿದ್ದು ಹೀಗೆ ಅನೇಕ ವಿಚಾರಗಳೂ ಟ್ರೋಲ್‌ಗೆ ಗುರಿಯಾಗಿವೆ. ಆದರೀಗ ನಟಿ ಕಂಗನಾ ಯಾರ ಹೆಸರನ್ನೂ ಉಲ್ಲೇಖಿಸಿದೇ ಮೂರು ಖಾನ್‌ಗಳು ಒಟ್ಟಿಗೆ ಕಾಣಿಸಿಕೊಂಡಿದ್ದರ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಈ ಹಿಂದೆ ಶಾರುಖ್ ಅವರು ʻʻನಮ್ಮ ಮೂವರು ಖಾನ್ರನ್ನು ಒಟ್ಟಿಗೆ ಒಂದೇ ಕಡೆ ಸೇರಿಸುವಷ್ಟು ಸಂಪತ್ತು ಯಾರ ಬಳಿಯೂ ಇಲ್ಲ. ಚಡ್ಡಿ, ಬನಿಯನ್ ಮಾರಿದ್ರೂ ಇದು ಸಾಧ್ಯವಿಲ್ಲʼʼ ಎಂದು ಹೇಳಿಕೆ ನೀಡಿದ್ದರು. ಆದರೀಗ ಮುಕೇಶ್ ಅಂಬಾನಿ ಮಾಡಿ ತೋರಿಸಿದ್ದಾರೆ ಎಂಬ ಟ್ರೋಲ್‌ಗಳು ಹರಿದಾಡಿದವು. ಇದೀಗ ಈ ಬಗ್ಗೆ ಕಂಗನಾ ಪರೋಕ್ಷವಾಗಿ ಮಾತನಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿ, ಹಿರಿಯ ಗಾಯಕಿ, ದಿವಂಗತ ಲತಾ ಮಂಗೇಶ್ಕರ್ ಅವರ ಹಳೆಯ ಸಂದರ್ಶನವನ್ನು ಹಂಚಿಕೊಂಡಿದ್ದಾರೆ. ʻʻಖಾಸಗಿ ಸಮಾರಂಭವೊಂದರಲ್ಲಿ ಲತಾ ಅವರಿಗೆ ಹಾಡಲು ಕೇಳಿಕೊಳ್ಳಲಾಗಿತ್ತು. ಆ ಹಾಡಿಗೆ ದೊಡ್ಡಮೊತ್ತದಲ್ಲೇ ಹಣ ನೀಡುವುದಾಗಿಯೂ ಆಯೋಜಕರು ಹೇಳಿದ್ದರು. ಆದರೆ, ಹಾಡಲು ಲತಾ ನಿರಾಕರಿಸಿದರಂತೆ. ದುಡ್ಡಿಗಾಗಿ ನಾನು ಹಾಡಲಾರೆ ಎಂದು ಹೇಳಿದ್ದರಂತೆʼʼ. ಇದನ್ನೇ ಹೇಳಿರುವ ಕಂಗನಾ, ತಮ್ಮನ್ನು ಲತಾ ಅವರಿಗೆ ಹೋಲಿಸಿಕೊಂಡಿದ್ದರು.
ಇದನ್ನೂ ಓದಿ: Kangana Ranaut: 12th ಫೇಲ್ ಸಿನಿಮಾ ನಿರ್ದೇಶಕನ ಪತ್ನಿ ಬಗ್ಗೆ ಗರಂ ಆದ ಕಂಗನಾ ರಣಾವತ್!
ʻʻಹಲವರಿಗೆ ಹೇಗಾದರೂ ಮಾಡಿ, ಯಾವುದೇ ಮೂಲೆಗಳಿಂದ ಸಂಪತ್ತನ್ನು ಗಳಿಸುವ ಹಂಬಲ. ಆದರೆ ನಾನು ಹಾಗಲ್ಲ, ಇಂಥ ಆಮಿಷಗಳಿಗೆ ನಾನು ಒಳಗಾಗುವವಳಲ್ಲ. ನಾನು ಮದುವೆಯಲ್ಲಿ ಎಂದಿಗೂ ನೃತ್ಯ ಮಾಡಲಿಲ್ಲ. ಅನೇಕ ಸೂಪರ್ ಹಿಟ್ ಐಟಂ ಸಾಂಗ್ಗಳಿಗೆ ನರ್ತಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ನಾನು ಅದಕ್ಕೆ ಒಪ್ಪಿದವಳಲ್ಲ. ಈ ರೀತಿಯ ಮಾರ್ಗ ಅನುಸರಿಸಿ ಹಣ ಮಾಡುವ ಜಾಯಮಾನ ನನ್ನದಲ್ಲʼʼ ಎಂದಿದ್ದರು. ಹೀಗೆ ಪರೋಕ್ಷವಾಗಿ ಶಾರುಖ್ ಹಾಗೂ ಇತರ ಬಾಲಿವುಡ್ ಸೆಲೆಬ್ರಟಿಗಳಿಗೆ ಟಾಂಗ್ ಕೊಟ್ಟಿದ್ದಾರೆ ಕಂಗನಾ.
ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಶಾರುಖ್ ಖಾನ್, ಆಮೀರ್ ಖಾನ್ ಮತ್ತು ಸಲ್ಮಾನ್ ಖಾನ್ RRR ಸ್ಟಾರ್ ರಾಮ್ ಚರಣ್ ಅವರೊಂದಿಗೆ “ನಾಟು ನಾಟು” ಹಾಡಿಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದರು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ “ಕೇಸರಿಯಾ” ಹಾಡಿಗೆ ಸ್ಟೆಪ್ಸ್ ಹಾಕಿದ್ದರು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ʻಗಲ್ಲನ್ ಗೂಡಿಯಾನ್ʼಗೆ ನೃತ್ಯ ಮಾಡಿದ್ದರು.