ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಐದನೇ ಹಂತದ ಮತದಾನ(Fifth Phase Voting) ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಸೋಮವಾರ ಬೆಳಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳಾದ ಅಮಿತಾಭ್ ಬಚ್ಚನ್, ಕರಣ್ ಜೋಹರ್, ಆಯುಷ್ಮಾನ್ ಖುರಾನಾ ಮತ್ತು ರಣವೀರ್ ಶೋರೆ ಮುಂತಾದವರು ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಮತ ಚಲಾಯಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಭಾರತೀಯ ಪೌರತ್ವ ಪಡೆದ ನಂತರ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮುಂಬೈನಲ್ಲಿ ಮತ ಚಲಾಯಿಸಿದರು. ನಟ ಈ ಹಿಂದೆ ಕೆನಡಾದ ಪೌರತ್ವವನ್ನು ಮಾತ್ರ ಹೊಂದಿದ್ದರು.
ಇನ್ನು ಮುಂಬೈನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ ಅನೇಕ ಗಣ್ಯರು ಬೆಳಗ್ಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ವೋಟ್ ಮಾಡಿದ ಬಳಿಕ ಅಕ್ಷಯ್ ಕುಮಾರ್ ಮಾತನಾಡಿ ʻʻನನ್ನ ಭಾರತ ಅಭಿವೃದ್ಧಿ ಮತ್ತು ಬಲಿಷ್ಠವಾಗಬೇಕೆಂದು ನಾನು ಬಯಸುತ್ತೇನೆ. ಅದನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದೇನೆ. ಭಾರತವು ನನಗೆಸರಿ ಎನಿಸುವದಕ್ಕೆ ಮತ ಚಲಾಯಿಸಬೇಕುʼʼಎಂದರು.
ಇದನ್ನೂ ಓದಿ: Lok Sabha Election 2024: ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ವೋಟಿಂಗ್; ವೈರಲಾಗ್ತಿದೆ ಶಾಕಿಂಗ್ ವಿಡಿಯೋ
ಇನ್ನು ಅಮಿತಾಭ್ ಕೂಡ ಮತ ಚಲಾಯಿಸುವಂತೆ ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದಾರೆ. ʻʻಅಮಿತಾಭ್ ಅನಿಮೇಟೆಡ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಕಾಡಿನಲ್ಲಿರುವ ಪ್ರಾಣಿಗಳು ಅಭಿ ತೋ ಪಾರ್ಟಿ ಶುರು ಹುಯಿ ಹೈ ಎಂಬ ಜನಪ್ರಿಯ ಹಾಡಿಗೆ ನೃತ್ಯ ಮಾಡುವುದು ಇದೆ. ಪೋಸ್ಟ್ ಅನ್ನು ಹಂಚಿಕೊಂಡ ಅವರು, “ನಾಳೆ ಮುಂಬೈ/ಮಹಾರಾಷ್ಟ್ರಕ್ಕೆ ನಿಮ್ಮ ದಿನ. ನಿಮ್ಮ ಹಕ್ಕನ್ನು ಚಲಾಯಿಸಿ..” ಎಂದರು.
ಆಯುಷ್ಮಾನ್ ಕೂಡ ವಿಡಿಯೊ ಮಾಡಿ, “ಸ್ನೇಹಿತರೇ, ಮತದಾನ ಮಾಡುವ ಸಮಯ ಬಂದಿದೆ. ಹೌದು, ಲೋಕಸಭೆ ಚುನಾವಣೆ ಹಂತ ಹಂತವಾಗಿ ನಡೆಯುತ್ತಿದೆ, ಮತ್ತು ಈಗ ಇದು ನಿಮ್ಮ ಸರದಿ. ಪ್ರತಿ ಮತವೂ ಮುಖ್ಯವಾಗಿದೆ ಏಕೆಂದರೆ ಯಾವ ನಾಯಕರು ದೇಶವನ್ನು ಮುನ್ನಡೆಸುತ್ತಾರೆ ಎಂಬುದನ್ನು ನೀವು ನಿರ್ಧರಿಸುತ್ತೀರಿ. ನಿಮ್ಮ ಮತವು ನಿಮ್ಮ ಧ್ವನಿಯಾಗಿದೆ, ಮತ್ತು ನಿಮ್ಮ ಧ್ವನಿಯನ್ನು ಎಣಿಕೆ ಮಾಡಿ, ಏಕೆಂದರೆ ನಾವು ನಮ್ಮ ದೇಶದ ಉಜ್ವಲ ಭವಿಷ್ಯವನ್ನು ರೂಪಿಸಬಹುದುʼʼಎಂದಿದ್ದಾರೆ. ರಣವೀರ್, ಕರಣ್ ಜೋಹರ್ ಸೇರಿದಂತೆ ಅನೇಕ ನಟರು ಮನವಿ ಮಾಡಿದರು.
ದೇಶದ ಜನರ ಗಮನ ಸೆಳೆದಿರುವ ರಾಯ್‌ಬರೇಲಿ, ಅಮೇಥಿಯಲ್ಲೂ ಇಂದು ಮತದಾನ ಶುರುವಾಗಿದ್ದು, ಸಂಜೆ 6ಗಂಟೆವರೆಗೆ ನಡೆಯಲಿದೆ.ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ (ಲಖನೌ), ಸ್ಮೃತಿ ಇರಾನಿ (ಅಮೇಥಿ), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ರಾಯ್‌ಬರೇಲಿ), ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ (ಬಾರಾಮುಲ್ಲಾ) ಸೇರಿ ಹಲವು ಗಣ್ಯರ ಭವಿಷ್ಯವು ಸೋಮವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ.
ದೇಶದಲ್ಲಿ ಈಗಾಗಲೇ ನಾಲ್ಕು ಹಂತಗಳಲ್ಲಿ 379 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಈಗ ಐದನೇ ಹಂತದ ಮತದಾನಕ್ಕೆ ಚುನಾವಣೆ ಆಯೋಗವು ಸಿದ್ಧಗೊಂಡಿದೆ. ಇನ್ನು ಸೋಮವಾರವೇ ಅಯೋಧ್ಯೆಯ ಜಿಲ್ಲೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭೆ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಬಿಜೆಪಿಯ ಹಾಲಿ ಸಂಸದ ಲಲ್ಲು ಸಿಂಗ್ ಅವರೇ ಮತ್ತೆ ಕಣಕ್ಕಿಳಿದಿದ್ದಾರೆ. ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಲ್ಲಿಯು ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. 4.69 ಕೋಟಿ ಪುರುಷ, 4.26 ಕೋಟಿ ಮತ್ತು 5,409 ತೃತೀಯ ಲಿಂಗಿ ಮತದಾರರು ಸೇರಿದಂತೆ 8.95 ಕೋಟಿಗೂ ಅಧಿಕ ಮತದಾರರು ಇಂದು 695 ಅಭ್ಯರ್ಥಿಗಳ ಅದೃಷ್ಟ ನಿರ್ಧರಿಸಲಿದ್ದಾರೆ.