Site icon Vistara News

ಬಾಳಾ ಠಾಕ್ರೆಯಿಂದ ಕಂಗನಾವರೆಗೆ ಬಾಲಿವುಡ್ – ಶಿವಸೇನೆ ನಂಟು, ಸಂಘರ್ಷವೂ ಉಂಟು!

shiv sena

ಮಹಾರಾಷ್ಟ್ರ – ಮುಂಬಯಿ ಎಂದರೆ ಎರಡು ಅಧಿಕಾರ ಕೇಂದ್ರಗಳ ರೂಪಕ- ಒಂದು ರಾಜಕೀಯ, ಇನ್ನೊಂದು ಬಾಲಿವುಡ್.‌ ಈ ಎರಡೂ ಅಧಿಕಾರ ಕೇಂದ್ರಗಳು ಕೆಲವೊಮ್ಮೆ ಒಂದನ್ನೊಂದು ಓಲೈಸುವುದೂ ಉಂಟು, ಮುಖಾಮುಖಿ ಆಗುವುದೂ ಉಂಟು. ಅತ್ಯಂತ ಪ್ರಬಲ ಪ್ರಾದೇಶಿಕ ಪಕ್ಷವಾಗಿರುವ ಶಿವಸೇನೆಯ ಪಿತಾಮಹ ಬಾಳಾ ಠಾಕ್ರೆ ಮತ್ತು ಹಿಂದಿ ಚಿತ್ರರಂಗದ ಪ್ರಮುಖ ತಾರೆಯರು ನಾನಾ ಕಾರಣಗಳಿಗಾಗಿ ವೇದಿಕೆ ಹಂಚಿಕೊಂಡು ಸೌಹಾರ್ದತೆ ಮೆರೆದಿದ್ದು ಈಗ ಇತಿಹಾಸ.

ಈ ಸಿಹಿ-ಕಹಿಯ ಏರಿಳಿತ ಪ್ರಾರಂಭ ಆಗುವುದು ೧೯೭೧ರಲ್ಲಿ, ದೇವಾನಂದ ಅವರ ʼತೇರೆ ಮೇರೆ ಸಪ್ನೆʼ ಚಿತ್ರಕ್ಕಾಗಿ ದಾದರ್‌ನ ಕೊಹಿನೂರ್‌ ಚಿತ್ರಮಂದಿರದಲ್ಲಿದ್ದ ಮರಾಠಿ ಚಿತ್ರವೊಂದನ್ನು ಎತ್ತಂಗಡಿ ಮಾಡಿಸಿದಾಗ. ಶಿವಸೇನೆಯ ಚಲನಚಿತ್ರ ವಿಭಾಗದ ಮೇಲೆ ಪುಂಡಾಟದ ಆರೋಪ ಹಿಂದಿನಿಂದಲೂ ಇದ್ದಿದ್ದೇ. ಆದರೆ ಮರಾಠಿ ಚಿತ್ರಗಳಿಗೆ ಮಹಾರಾಷ್ಟ್ರದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯುವಂತೆ ಮಾಡುವುದಷ್ಟೇ ತಮ್ಮ ಉದ್ದೇಶ ಎಂಬುದು ಶಿವಸೇನೆಯ ಅಂಬೋಣ.

ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ನಿಶಾನ್‌-ಎ- ಪಾಕಿಸ್ತಾನ್‌ ಅನ್ನು ದಿಲೀಪ್‌ ಕುಮಾರ್‌ ಅವರು ಸ್ವೀಕರಿಸಿದಾಗಲೂ ಬಾಳಾ ಠಾಕ್ರೆ ಅವರು ತಮ್ಮ ಅಸಮಾಧಾನವನ್ನು ವಾಚ್ಯವಾಗಿಸಿದ್ದರು. ಹಾಗೆಂದು ರುಚಿಕಟ್ಟಾದ ಆಹಾರದ ವಿಚಾರ ಬಂದರೆ ಇಬ್ಬರೂ ದೋಸ್ತರೇ ಆಗಿದ್ದರು. ದೇವಾನಂದ್‌, ಮನೋಜ್‌ ಕುಮಾರ್‌, ಅಮಿತಾಭ್‌ ಬಚ್ಚನ್‌ ಮುಂತಾದ ತಾರೆಯರೆಲ್ಲಾ ಹಿರಿಯ ಠಾಕ್ರೆ ಅವರೊಂದಿಗೆ ಸೌಹಾರ್ದ ಸಂಬಂಧವನ್ನೇ ಹೊಂದಿದ್ದರು. ೧೯೯೩ರ ಮುಂಬಯಿ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂದರ್ಭದಲ್ಲಿ ಸಂಜಯ್‌ ದತ್‌ ಅವರಿಗೆ ಠಾಕ್ರೆ ಬೆಂಬಲ ನೀಡಿದ್ದು ಸುದ್ದಿಯಾಗಿತ್ತು. ದತ್‌ ಸಹ ಠಾಕ್ರೆಯನ್ನು ʻಹುಲಿʼ ಎಂದು ಹೊಗಳಿದ್ದರು.

ಕೂಲಿ ಸಿನೆಮಾ ಚಿತ್ರೀಕರಣ ಸಂದರ್ಭದಲ್ಲಿ ಅಪಘಾತದಿಂದ ಪ್ರಾಣಾಪಾಯಕ್ಕೆ ತುತ್ತಾಗಿದ್ದ ಅಮಿತಾಭ್‌ ಬಚ್ಚನ್‌, ಈ ಸಂದರ್ಭದಲ್ಲಿ ಠಾಕ್ರೆ ತಮಗೆ ನೀಡಿದ್ದ ನೆರವನ್ನು ಮುಕ್ತವಾಗಿಯೇ ಸ್ಮರಿಸಿಕೊಂಡಿದ್ದರು. ʻʻಕೂಲಿʼ ಚಿತ್ರ ಅಪಘಾತದ ನಂತರ ಅರೆತಿಳಿವಿನ ಸ್ಥಿತಿಯಲ್ಲಿ ಬೆಂಗಳೂರಿನಿಂದ ಮುಂಬಯಿಗೆ ನನ್ನನ್ನು ವಿಮಾನದ ಮೂಲಕ ಕರೆತಂದಾಗ, ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ನನ್ನನ್ನು ತ್ವರಿತವಾಗಿ ತಲುಪಿಸಿದ್ದು ಠಾಕ್ರೆ ಅವರ ಆಂಬ್ಯುಲೆನ್ಸ್‌. ನನ್ನ ಭೇಟಿಗೆ ಆಸ್ಪತ್ರೆಗೆ ಬರುವಾಗ ಅವರ ಕೈಯಲ್ಲೊಂದು ಸ್ವರಚಿತ ವ್ಯಂಗ್ಯಚಿತ್ರವಿತ್ತು- ಯಮರಾಜನಿಗೆ ಸೋಲು- ಎನ್ನುವಂಥದ್ದು! ನನಗೂ ಅವರಂತೆ ಚಿತ್ರ ಬರೆಯಲು ಬಂದಿದ್ದರೆ ಅವರಿಗಾಗಿ ನಾನೂ ಇಂಥದ್ದೇ ಚಿತ್ರ ಬರೆಯುತ್ತಿದ್ದೆʼʼ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: ಆ ಪರಶಿವನೂ ಶಿವಸೇನೆಯನ್ನು ಉಳಿಸಲಾರ; ಉದ್ಧವ್‌ ರಾಜೀನಾಮೆ ಬೆನ್ನಲ್ಲೇ ಕಂಗನಾ ಖಡಕ್‌ ಮಾತು

ಕೆಲವು ಚಿತ್ರಗಳನ್ನು ಬಿಡುಗಡೆಗೆ ಮೊದಲು ಶಿವಸೇನೆಗೆ ತೋರಿಸಿ, ಒಪ್ಪಿಗೆ ಪಡೆದ ಉದಾಹರಣೆಗಳೂ ಇಲ್ಲದಿಲ್ಲ. ಮುಂದಾಗುವ ತಕರಾರುಗಳನ್ನು ತಪ್ಪಿಸಲು ಇದನ್ನು ಮಾಡಲಾಗುತ್ತಿತ್ತು ಎಂದು ಕೆಲವರಿಗೆ ಅನಿಸಿದರೆ, ಇದರಿಂದ ಎರಡೂ ಪಕ್ಷಗಳ ಸಂಬಂಧ ಸ್ವಲ್ಪ ಸುಧಾರಣೆಗೊಂಡಿದ್ದು ಹೌದು ಎಂದೂ ಕೆಲವರಿಗೆ ಭಾಸವಾಗಿದೆ. ಮಣಿರತ್ನಂ ಅವರ “ಬಾಂಬೆʼ ಚಿತ್ರವನ್ನು ಬಿಡುಗಡೆಯ ಮುನ್ನವೇ ಬಾಳಾ ಠಾಕ್ರೆ ಅವರಿಗೆ ತೋರಿಸಿ, ಅವರು ಸೂಚಿಸಿದ ಕೆಲವು ಬದಲಾವಣೆಗಳನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿತ್ತು ಎಂಬುದು ಗುಟ್ಟೇನಲ್ಲ. ಉತ್ತಮ ವ್ಯಂಗ್ಯಚಿತ್ರಕಾರರಾಗಿದ್ದ ಠಾಕ್ರೆ ಇಂಗ್ಲಿಷ್‌, ಹಿಂದಿ ಮತ್ತು ಮರಾಠಿ ಸಾಹಿತ್ಯದ ಆಸಕ್ತರೂ ಆಗಿದ್ದರು.

ಆನಂತರ ವರ್ಷಗಳಲ್ಲಿ, ಬಾಲಿವುಡ್‌ ಮೇಲೆ ಶಿವಸೇನೆ ತನ್ನ ಹಿತ ಸಾಧನೆಗಾಗಿ ಒತ್ತಡ ಹೇರುತ್ತಿದೆ ಎನ್ನುವಂಥ ಆರೋಪಗಳು ಪದೇಪದೆ ಕೇಳಿಬರತೊಡಗಿದವು. ʻಮೈ ನೇಮ್‌ ಈಸ್‌ ಖಾನ್‌ʼ ಮತ್ತು ʻಏಕ್‌ ಥಾ ಟೈಗರ್‌ʼ ಚಿತ್ರಗಳಿಗೆ ಶಿವಸೇನೆಯೊಂದಿಗೆ ತಿಕ್ಕಾಟವಾಗಿದ್ದೂ ಹೌದಾಗಿತ್ತು. ಮಹಾರಾಷ್ಟ್ರ ಸರಕಾರ ಮತ್ತು ನಟಿ ಕಂಗನಾ ರನೌತ್‌ ಗಲಾಟೆಯಂತೂ ಹಲವು ದಿನಗಳ ಕಾಲ ಸುದ್ದಿ ಮಾಡಿತ್ತು. ಆದರೂ ಸಲ್ಮಾನ್‌ ಖಾನ್‌ನಿಂದ, ಅಕ್ಷಯ್‌ ಕುಮಾರ್‌ ಮತ್ತು ಇತ್ತೀಚಿನ ಟೈಗರ್‌ ಶ್ರಾಫ್‌ವರೆಗೆ ಹೆಚ್ಚಿನ ನಟರೊಂದಿಗೆ ಉತ್ತಮ ಸಂಬಂಧ ಹೊಂದಿರುವುದೂ ನಿಜವೆ. ಸುಶಾಂತ್‌ ಸಿಂಗ್‌ ರಜಪೂತ್‌ ನಿಧನದ ಸಂದರ್ಭದಿಂದ ಹಿಡಿದು, ಆರ್ಯನ್‌ ಖಾನ್‌ ಬಂಧನದವರೆಗೆ ಎಲ್ಲಾ ಸಂದರ್ಭಗಳಲ್ಲೂ ಶಿವಸೇನೆ ಬೆಂಬಲಿಸಿದ್ದು ಚಿತ್ರರಂಗವನ್ನೇ.

ಇದನ್ನೂ ಓದಿ: ವಿಸ್ತಾರ Explainer: ಶಿವ ಸೇನೆ ಚಿಹ್ನೆ ʼಬಿಲ್ಲು ಬಾಣʼ ಯಾರ ಬತ್ತಳಿಕೆಗೆ ಹೋಗಲಿದೆ?

Exit mobile version