ಬಾಲಿವುಡ್‌ನ ಮತ್ತೊಂದು ತಾರಾ ಜೋಡಿ ಹಸೆಮಣೆಗೇರಿದೆ. ಕೆಲವು ಸಮಯಗಳಿಂದ ಡೇಟಿಂಗ್ ನಡೆಸುತ್ತಿದ್ದ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ನಟ, ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಬುಧವಾರ (ಫೆಬ್ರವರಿ 21) ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಸತಿ-ಪತಿಗಳಾದರು.
ಮೊದಲು ಸಿಖ್ ಸಂಪ್ರದಾಯ ಆನಂದ್ ಕರಜ್(Anand Karaj)ನಂತೆ ಈ ಜೋಡಿಯ ವಿವಾಹ ನಡೆಯಿತು. ಸಂಜೆ ಸಿಂಧಿ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Rakul Preet Singh: ಹಸೆಮಣೆಗೇರಿದ ರಾಕುಲ್ ಪ್ರೀತ್ ಸಿಂಗ್-ಜಾಕಿ ಭಗ್ನಾನಿ
ದಕ್ಷಿಣ ಗೋವಾದ ಐಟಿಸಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಆಪ್ತ ಗೆಳೆಯರಿಗಷ್ಟೇ ಆಹ್ವಾನವಿತ್ತು. ಬಾಲಿವುಡ್‌ನ ಶಿಲ್ಪಾ ಶೆಟ್ಟಿ, ಆಯುಷ್ಮಾನ್ ಖುರಾನ, ಅರ್ಜುನ್ ಕಪೂರ್, ಡೇವಿಡ್ ಧವನ್ ಮತ್ತಿತರರು ಹಾಜರಿದ್ದು ನೂತನ ವಧು-ವರರನ್ನು ಹಾರೈಸಿದರು.
ವಿಶೇಷ ಎಂದರೆ ರಕುಲ್ ಪ್ರೀತ್ ಸಿಂಗ್ ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು. 2009ರಲ್ಲಿ ತೆರೆಕಂಡ ʼಗಿಲ್ಲಿʼ ಚಿತ್ರದಲ್ಲಿ ಅವರು ಗುರುರಾಜ್ ಜಗ್ಗೇಶ್‌ಗೆ ನಾಯಕಿಯಾಗಿದ್ದರು. ತಮಿಳಿನ ʼ7ಜಿ ರೈನ್‌ಬೋ ಕಾಲೊನಿʼ ಚಿತ್ರದ ರಿಮೇಕ್ ಆಗಿದ್ದ ʼಗಿಲ್ಲಿʼಯಲ್ಲಿ ಅನಿತಾ ಪಾತ್ರದ ಮೂಲಕ ಮೋಡಿ ಮಾಡಿದ್ದರು.
ಇತ್ತ ನಿರ್ಮಾಪಕರೂ ಆಗಿರುವ ಜಾಕಿ ಭಗ್ನಾನಿ ತಮ್ಮ ನಿರ್ಮಾಣದ ಮುಂದಿನ ಚಿತ್ರ ʼಬಡೇ ಮಿಯಾನ್ ಚೋಟೆ ಮಿಯಾನ್ʼನ ನಿರೀಕ್ಷೆಯಲ್ಲಿದ್ದಾರೆ. ಆಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಸೋನಾಕ್ಷಿ ಸಿನ್ಹಾ, ಪೃಥ್ವಿರಾಜ್ ಸುಕುಮಾರನ್ ಮತ್ತಿತರರು ಅಭಿನಯಿಸುತ್ತಿದ್ದಾರೆ.