ಬೆಂಗಳೂರು: ಎಪ್ರಿಲ್ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ (Salman Khan) ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿರುವುದು ಗೊತ್ತೇ ಇದೆ. ಜೈಲಿನಲ್ಲಿರುವ ಅನ್ಮೋಲ್ ಬಿಷ್ಣೋಯ್ ಏಪ್ರಿಲ್‌ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ಮನೆಯ ಮೇಲೆ ಗುಂಡು ಹಾರಿಸಿದ ಶೂಟರ್‌ಗಳಿಗೆ ಒಂಬತ್ತು ನಿಮಿಷಗಳ ಕಾಲಕ ಸ್ಫೂರ್ತಿದಾಯಕ ಭಾಷಣವನ್ನು ನೀಡಿದ್ದ ಎಂದು ತಿಳಿದು ಬಂದಿದೆ. ಮುಂಬೈ ಪೊಲೀಸರ ಅಪರಾಧ ವಿಭಾಗದ ಚಾರ್ಜ್‌ಶೀಟ್ ಪ್ರಕಾರ, ಅನ್ಮೋಲ್ ಬಿಷ್ಣೋಯ್ ಇಬ್ಬರು ಶೂಟರ್‌ಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್‌ಗೆ ನಟನ ನಿವಾಸದ ಮೇಲೆ ದಾಳಿ ಮಾಡಿದಾಗ ಇದೊಂದು “ಹಿಸ್ಟರಿ” ಎಂದು ಹೇಳಿದ್ದ.
ಗುಪ್ತಾ ಮತ್ತು ಪಾಲ್ ಎಂಬ ಇಬ್ಬರು ಬೈಕ್‌ನಲ್ಲಿ ಬಂದ ವ್ಯಕ್ತಿಗಳು. ಏಪ್ರಿಲ್ 14ರ ಬೆಳಗ್ಗೆ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದ್ದರು. ಆಡಿಯೊ ನೋಟ್ ಮೂಲಕ ಅನ್ಮೋಲ್ ಬಿಷ್ಣೋಯ್ ಇಬ್ಬರೂ ಶೂಟರ್‌ಗಳಿಗೆ ತಮ್ಮ ಜೀವನದ “ಉತ್ತಮ ಕೆಲಸ” ಮಾಡಲಿದ್ದೇವೆ ಎಂದು ಹೇಳಿದರು.
ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ 1,735 ಪುಟಗಳ ಚಾರ್ಜ್‌ಶೀಟ್‌ನ ಪ್ರಕಾರ ಅನ್ಮೋಲ್ ಬಿಷ್ಣೋಯ್ ಇಬ್ಬರೂ ಶೂಟರ್‌ಗಳಿಗೆ ಹೇಳಿದ್ದು ಹೀಗೆ. “ಈ ಕೆಲಸವನ್ನು ಚೆನ್ನಾಗಿ ಮಾಡಿ. ಕೆಲಸ ಮುಗಿದ ನಂತರ, ನೀವು ಇತಿಹಾಸ ಪುಟದಲ್ಲಿ ಇರುತ್ತೀರಿʼʼ ಎಂದು ಶೂಟರ್‌ಗಳಿಗೆ ಹೇಳಿದರು. ಮಾತ್ರವಲ್ಲ ಅನ್ಮೋಲ್ ಬಿಷ್ಣೋಯ್, ಗುಪ್ತಾ ಮತ್ತು ಪಾಲ್ ಅವರಿಗೆ ಇದೊಂದು ಧಾರ್ಮಿಕ ಕೆಲಸ ಎಂದು ಪ್ರೋತ್ಸಾಹಿಸಿದ್ದಾರೆ. ಜತೆಗೆ ಈ ಕೆಲಸ ಮಾಡುವಾಗ ಸ್ವಲ್ಪವೂ ಭಯಪಡಬೇಡಿ, ಈ ಕೆಲಸ ಮಾಡುವುದರಿಂದ ಸಮಾಜದಲ್ಲಿ ಬದಲಾವಣೆ ತರಬೇಕು. ಎಂದೂ ಹೇಳಿದ್ದಾನೆ. ನಾವು ಯಾವುದೇ ಕೆಲಸ ಮಾಡಲು ಹೋದಾಗ, ನಾವು ಬಂದೂಕಿನ ಮ್ಯಾಗಜಿನ್ ಅನ್ನು ಖಾಲಿ ಮಾಡುವ ಶೈಲಿಯನ್ನು ಹೊಂದಿರಬೇಕು. ನೀವು ಸಲ್ಮಾನ್ ಖಾನ್ ಅವರ ಮನೆಯಿಂದ ಹೊರಗೆ ಬಂದಾಗ ನೀವು ಮ್ಯಾಗಜಿನ್ ಅನ್ನು ಖಾಲಿ ಮಾಡಿ. ಗುಂಡು ಹಾರಿಸುವುದು ಸಲ್ಮಾನ್ ಖಾನ್‌ಗೆ ಹೆದರಿಕೆ ತರಬೇಕು. ಸಲ್ಮಾನ್ ಖಾನ್‌ಗೆ ಹೆದರುವ ರೀತಿಯಲ್ಲಿ ಗುಂಡಿನ ದಾಳಿ ಆಗಬೇಕುʼʼಎಂದು ಅನ್ಮೋಲ್ ಸಂದೇಶ ನೀಡಿದ್ದ.
ಇದನ್ನೂ ಓದಿ: Actor Yash: ಯಶ್ ನಟನೆಯ ʻಟಾಕ್ಸಿಕ್ʼ ಸಿನಿಮಾ ವಿರುದ್ಧ ದೂರು ದಾಖಲು
ಬಿಷ್ಣೋಯ್, ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರಿಗೆ ಹೆಲ್ಮೆಟ್ ಧರಿಸದೇ ಇರಬೇಕು ಮತ್ತು ನಿರ್ಭೀತರಾಗಿ ಕಾಣಿಸಿಕೊಳ್ಳಲು ಸಿಗರೇಟ್ ಸೇದಲು ಬಾರದೂ ಎಂದು ಹೇಳಿದ್ದನಂತೆ. ಗುಂಡಿನ ದಾಳಿಗೂ ಮುನ್ನ ಅನ್ಮೋಲ್ ಬಿಷ್ಣೋಯ್ ಗುಪ್ತಾ ಮತ್ತು ಪಾಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ,
ಶೂಟರ್‌ಗಳು ಮತ್ತು ಇತರ ಮೂವರು, ಸೋನುಕುಮಾರ್ ಬಿಷ್ಣೋಯ್, ಮೊಹಮ್ಮದ್ ರಫೀಕ್ ಚೌಧರಿ ಮತ್ತು ಹರ್ಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಲಾರೆನ್ಸ್ ಬಿಷ್ಣೋಯ್, ಅನ್ಮೋಲ್ ಮತ್ತು ರಾವತರನ್ ಬಿಷ್ಣೋಯ್ ಆರೋಪಪಟ್ಟಿಯಲ್ಲಿ ಬೇಕಾಗಿರುವ ಆರೋಪಿಗಳಾಗಿದ್ದಾರೆ.
ಏನಿದು ಪ್ರಕರಣ?
ಎಪ್ರಿಲ್ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದು ದಾಳಿ ನಡೆಸಿದ್ದ ಶೂಟರ್‌ಗಳಾದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳನ್ನು ಬಳಿಕ ಅರೆಸ್ಟ್ ಮಾಡಲಾಗಿತ್ತು. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದರು.
ಈ ಮಧ್ಯೆ ಗುಂಡಿನ ದಾಳಿ ನಡೆಸಿದ್ದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಅನೂಜ್ ಥಾಪನ್ ಕೆಲವು ದಿನಗಳ ಹಿಂದೆ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ. ಅನುಜ್ ಥಾಪನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆತನ ಕುಟುಂಬ ಇದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಲಾಕಪ್‌ನಲ್ಲಿ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರೆ ಆತನ ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು.
ಕಾರಣವೇನು?
ಹಲವು ವರ್ಷಗಳ ಹಿಂದಿನ ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಅವರನ್ನು ಕೊಲ್ಲುವುದಾಗಿ 2018 ರಲ್ಲಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್ನ ಬಿಷ್ಣೋಯ್ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಎಬಿಪಿ ನ್ಯೂಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿ. ಸಲ್ಮಾನ್ ಅವರು ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆʼʼ ಎಂದು ಹೇಳಿದ್ದ.