ಮುಂಬೈ: ಕಠಿಣ ಪರಿಶ್ರಮ, ಛಲ, ಜತೆಗೊಂದಿಷ್ಟು ಚಾಣಾಕ್ಷತನ ಇದ್ದರೆ ಎಂತಹವರು ಬೇಕಾದರೂ ಯಶಸ್ಸನ್ನು ಸಾಧಿಸುತ್ತಾರೆ. ಇದೇ ಕಾರಣಕ್ಕೆ, ಗುಡಿಸಲಿನಲ್ಲಿ ಹುಟ್ಟಿದವರು ಅರಮನೆಯಲ್ಲಿ ವಾಸಿಸುತ್ತಾರೆ, ಯಾವ ಹೋಟೆಲ್‌ನಲ್ಲಿ ವಾಸಿಸುತ್ತಿದ್ದರೋ ಅದೇ ಹೋಟೆಲ್‌ನ ಮಾಲೀಕರಾಗಿದ್ದಾರೆ, ಬಡತನದಲ್ಲಿ ಹುಟ್ಟಿ ಐಎಎಸ್ ಅಧಿಕಾರಿಯಾದವರು ನಮ್ಮ ಕಣ್ಣೆದುರು ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಬಾಲಿವುಡ್ ನಟ, ಕರ್ನಾಟಕ ಮೂಲದ ಸುನೀಲ್ ಶೆಟ್ಟಿ (Suniel Shetty) ಅವರು ಮುಂಬೈನಲ್ಲಿ ತಮ್ಮ ತಂದೆ ವೀರಪ್ಪ ಶೆಟ್ಟಿ (Veerappa Shetty) ಅವರು ವೇಟರ್ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಮಾಲೀಕರಾಗಿದ್ದಾರೆ. ಇದಕ್ಕೆ ಜನ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿನ ಬಡತನ, ಹೆಚ್ಚಿದ ಜವಾಬ್ದಾರಿಗಳಿಂದಾಗಿ ವೀರಪ್ಪ ಶೆಟ್ಟಿ ಅವರು ಮುಂಬೈಗೆ ತೆರಳಿದ್ದರು. ಮುಂಬೈನ ಖಂಡಾಲದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಅವರು ವೇಟರ್ ಆಗಿ ಸೇರಿಕೊಂಡು, ಬಳಿಕ ಅದರಲ್ಲಿಯೇ ಮ್ಯಾನೇಜರ್ ಆಗಿದ್ದರು. ಈಗ ರೆಸ್ಟೋರೆಂಟ್‌ನ ಸೇರಿ ಮೂರು ಕಟ್ಟಡಗಳು ಇರುವ ಜಾಗವು ಫಾರ್ಮ್‌ಹೌಸ್ ಆಗಿ ಬದಲಾಗಿದ್ದು, ಮೂರೂ ಕಟ್ಟಡಗಳಿಗೆ ಸುನೀಲ್ ಶೆಟ್ಟಿ ಅವರೇ ಮಾಲೀಕರಾಗಿದ್ದಾರೆ. ಸುಮಾರು 83 ಕೋಟಿ ರೂ. ಕೊಟ್ಟು ಫಾರ್ಮ್‌ಹೌಸ್‌ಅನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂರು ಕಟ್ಟಡಗಳ ಖರೀದಿ ಕುರಿತು ಸುನೀಲ್ ಶೆಟ್ಟಿ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. “ನನ್ನ ತಂದೆ ಬಡವರಾಗಿದ್ದರು. ಬಾಲ್ಯದಲ್ಲಿಯೇ ಅವರು ತಂದೆಯನ್ನು ಕಳೆದುಕೊಂಡಿದ್ದರು. 9 ವರ್ಷದವರಿದ್ದಾಗಲೇ ಅವರು ಮಂಗಳೂರಿನಿಂದ ಮುಂಬೈಗೆ ಬಂದರು. ಇಲ್ಲಿ ದಕ್ಷಿಣ ಭಾರತದ ರೆಸ್ಟೋರೆಂಟ್‌ನಲ್ಲಿ ಟೇಬಲ್ ಕ್ಲೀನ್ ಮಾಡುವುದು, ಊಟ-ತಿಂಡಿ ಸರಬರಾಜು ಮಾಡುವುದು ಅವರ ಕೆಲಸವಾಗಿತ್ತು. ಬಳಿಕ ಅವರು ಮ್ಯಾನೇಜರ್ ಕೂಡ ಆದರು. ಈಗ ರೆಸ್ಟೋರೆಂಟ್ ಸೇರಿ ಮೂರು ಕಟ್ಟಡಗಳನ್ನು ನಾನು ಖರೀದಿಸಿದ್ದೇನೆ” ಎಂಬುದಾಗಿ ಬಾಲಿವುಡ್ ನಟ ಹೇಳಿದ್ದಾರೆ. ಸುನೀಲ್ ಶೆಟ್ಟಿ ಅವರ ತಂದೆ 2017ರಲ್ಲಿ ನಿಧನರಾದರು.
“ನನ್ನ ತಂದೆಯು ತುಂಬ ಸಂಭಾವಿತರಾಗಿದ್ದರು. ಅವರು ಮಕ್ಕಳಿಗೂ ಏನೂ ಎನ್ನುತ್ತಿರಲಿಲ್ಲ. ಅವರು ಮ್ಯಾನೇಜರ್ ಆದಾಗಲೂ ಸಿಬ್ಬಂದಿಗೆ ಒಂದು ಮಾತೂ ಅನ್ನುತ್ತಿರಲಿಲ್ಲ. ಆದರೆ, ನಮ್ಮ ಬಗ್ಗೆ, ಅವರ ಸಿಬ್ಬಂದಿ ಬಗ್ಗೆ ಯಾರಾದರೂ ಒಂದು ಮಾತು ಆಡಿದರೂ ಅವರು ಸಹಿಸಿಕೊಳ್ಳುತ್ತಿರಲಿಲ್ಲ. ಎಲ್ಲವನ್ನೂ ಬಿಟ್ಟು ಊರಿಗೆ ಹೋಗುತ್ತೇನೆ, ಆದರೆ ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ ಎಂಬುದಾಗಿ ಅವರು ಹೇಳುತ್ತಿದ್ದರು” ಎಂದು ಸುನೀಲ್ ಶೆಟ್ಟಿ ಸ್ಮರಿಸಿದ್ದಾರೆ. ಸುನೀಲ್ ಶೆಟ್ಟಿ ಅವರು 1992ರಲ್ಲಿ ಬಾಲಿವುಡ್ ಪ್ರವೇಶಿಸಿದರು. ಧಡಕನ್, ಮೊಹ್ರಾ, ಬಾರ್ಡರ್, ಹೇರಾ ಫೇರಿ, ದಿಲ್ವಾಲೆ ಸೇರಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರು ಸುದೀಪ್ ಅಭಿನಯದ ಪೈಲ್ವಾನ್ ಎಂಬ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ.
ಇದನ್ನೂ ಓದಿ: Athiya Shetty: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ಎಲ್. ರಾಹುಲ್ ದಂಪತಿ; ಸುಳಿವು ಕೊಟ್ಟ ಸುನೀಲ್ ಶೆಟ್ಟಿ!