ಮುಂಬೈ: ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್ ವಿಸ್ಪರರ್ಸ್ʼ (The Elephant Whisperers) ಮುಖ್ಯ ರೂವಾರಿಗಳಾದ ಸ್ಥಳೀಯ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಸ್ಫೂರ್ತಿಯಾಗಿದ್ದಾರೆ. ಎಲಿಫೆಂಟ್ ವಿಸ್ಪರರ್ಸ್ ಮಾರ್ಚ್ 12 ರಂದು 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಪ್ರತಿಷ್ಠಿತ ಪ್ರಶಸ್ತಿಯನ್ನು ಹಿಡಿದು ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಸಂತಸ ಪಟ್ಟಿದ್ದಾರೆ. ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಇತ್ತೀಚೆಗಷ್ಟೇ ಮುಂಬೈಗೆ ತೆರಳಿದ್ದರು. ಪತ್ರಕರ್ತರ ಮುಂದೆ ಹಾಜರಾಗಿದ್ದರು. ವಿಮಾನದಲ್ಲಿ ಸಿಕ್ಕ ಗೌರವ ಮತ್ತು ಪ್ರೀತಿಗೆ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಸಂತಸ ಪಟ್ಟರು.
ಊಟಿಗೆ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ವಿಮಾನ ಏರುತ್ತಿದ್ದಂತೆ ವಿಶೇಷವಾಗಿ ಗೌರವ ನೀಡಲಾಯಿತು. ಕ್ಯಾಪ್ಟನ್ ಸೇರಿದಂತೆ ಪ್ರಯಾಣಿಕರು ಚಪ್ಪಾಳೆ ತಟ್ಟುವ ಮೂಲಕ ಆಸ್ಕರ್ ವಿನ್ನಿಂಗ್ ದಂಪತಿಯನ್ನು ಬರಮಾಡಿಕೊಂಡರು. ವಿಡಿಯೊದಲ್ಲಿ ಕ್ಯಾಪ್ಟನ್, ‘ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ದಿ ಎಲಿಫೆಂಟ್ ವಿಸ್ಪರ್ಸ್ ತಂಡ ತಮ್ಮ ಜತೆ ಇದೆ. ಅವರಿಗೆ ಒಂದು ದೊಡ್ಡ ಚಪ್ಪಾಳೆ’ ಎಂದು ಬರೆದುಕೊಂಡಿದ್ದಾರೆ. ಬೊಮ್ಮನ್ ಮತ್ತು ಬಳ್ಳಿ ದಂಪತಿ ಎದ್ದು ನಿಂತು ನಮಸ್ಕರಿಸಿದರು. ದಂಪತಿ ವಿಡಿಯೊವನ್ನು ತಮಿಳುನಾಡು ಸರ್ಕಾರದ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: CM Stalin: ದಿ ಎಲಿಫೆಂಟ್ ವಿಸ್ಪರರ್ಸ್ ದಂಪತಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್
ವೈರಲ್ ವಿಡಿಯೊ
ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಎಲಿಫೆಂಟ್ ವಿಸ್ಪರರ್ಸ್ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಆನೆ ಸಾಕಾಣಿಕೆ ಶಿಬಿರದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ತೆಂಕಣಿಕೊಟ್ಟೈ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಆನೆ ಮರಿಯನ್ನು ಕರೆತಂದು ಸಾಕಿದರು. ಬಳಿಕ 2018ರಲ್ಲಿ ಸತ್ಯಮಂಗಲಂ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಮತ್ತೊಂದು ಆನೆ ಮರಿಯನ್ನು ಮುದುಮಲೈ ಶಿಬಿರಕ್ಕೆ ಕರೆತಂದು ಸಾಕಿದರು.
ದಿ ಎಲಿಫೆಂಟ್ ವಿಸ್ಪರರ್ಸ್
ತಮಿಳುನಾಡಿನ ನೀಲಗಿರಿಯ ಸುಂದರವಾದ ಮುದುಮಲೈ ಕಾಡುಗಳಲ್ಲಿ ವಾಸಿಸುವ ಕಟ್ಟುನಾಯಕನ್ ಬುಡಕಟ್ಟಿನ ಸ್ಥಳೀಯ ದಂಪತಿ ಬೊಮ್ಮನ್ ಮತ್ತು ಬೆಳ್ಳಿಯ ಆರೈಕೆಯಲ್ಲಿ ರಘು ಎಂಬ ಅನಾಥ ಆನೆ ಮರಿಯ ಕಥೆಯನ್ನು ಹೇಳುತ್ತದೆ. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಮತ್ತು ಗುನೀತ್ ಮೊಂಗಾ ನಿರ್ಮಿಸಿದ 40 ನಿಮಿಷಗಳ ಸಾಕ್ಷ್ಯಚಿತ್ರವು ಆನೆ ಮತ್ತು ದಂಪತಿ ನಡುವೆ ಬೆಳೆಯುವ ಬಾಂಧವ್ಯವನ್ನು ಹೇಳುತ್ತದೆ. ತಮಗೆ ಸಿಕ್ಕಿದ ಈ ಪ್ರಶಸ್ತಿ ʼನನ್ನ ತಾಯ್ನೆಲ ಭಾರತಕ್ಕೆ ಅರ್ಪಿತʼ ಎಂದಿದ್ದಾರೆ ಇದರ ನಿರ್ದೇಶಕ ಕಾರ್ತಿಕಿ. ಕಾರ್ತಿಕಿ ಅವರಿಗೆ ಇದು ಮೊದಲ ನಿರ್ದೇಶನ. ಹೌಲ್‌ಔಟ್, ಹೌ ಡು ಯು ಮೆಶರ್ ಎ ಇಯರ್, ದಿ ಮಾರ್ಥಾ ಮಿಶೆಲ್ ಎಫೆಕ್ಟ್, ಸ್ಟ್ರೇಂಜರ್ ಎಟ್ ದಿ ಗೇಟ್ ಮುಂತಾದ ಚಿತ್ರಗಳು ಸ್ಪರ್ಧೆಯಲ್ಲಿದ್ದವು.