ಮುಂಬಯಿ: ದೇಶದ ಮಲ್ಟಿಪ್ಲೆಕ್ಸ್‌ಗಳ ಪಾಲಿಗೆ ಮಾರ್ಚ್ ತಿಂಗಳು ಸೂಪರ್ ಹಿಟ್! ಕಳೆದ ಎರಡು ವರ್ಷಗಳಿಂದ ಕೊರೊನಾ ಸೇರಿದಂತೆ ನಾನಾ ಕಾರಣಗಳಿಂದಾಗಿ ಸಂಕಷ್ಟದಲ್ಲಿದ್ದ ಮಲ್ಟಿಪ್ಲೆಕ್ಸ್‌ಗಳು ಮಾರ್ಚ್‌ನಲ್ಲಿ ಭರ್ಜರಿ ಕಲೆಕ್ಷನ್ ಪಡೆದು ಖುಷಿಯಾಗಿವೆ. ಭಾರತದ ಮಲ್ಟಿಪ್ಲೆಕ್ಸ್ ಮಾಲೀಕರ ಒಕ್ಕೂಟದ್ದೇ ವರದಿಯನ್ನು ಆಧರಿಸಿ ಹೇಳುವುದಾದರೆ 2022ರ ಮಾರ್ಚ್‌ನಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ ಆಗಿರುವ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ 1500 ಕೋಟಿ ರೂ.! ಹಿಂದೆ ಕೊರೊನಾ ಕಾಲಿಡದೇ ಇದ್ದ ಕಾಲದಲ್ಲೂ ಇಷ್ಟೊಂದು ದುಡ್ಡು ಹರಿದುಬಂದಿರಲಿಲ್ಲ. ಇದುವರೆಗಿನ ಗರಿಷ್ಠ ಸಂಗ್ರಹ ಒಂದು ತಿಂಗಳಲ್ಲಿ 1,200 ಕೋಟಿ ಮಾತ್ರ! ಹಾಗಾಗಿ, ಈ ಮಾರ್ಚ್ ತಿಂಗಳು ಮಲ್ಟಿಪ್ಲೆಕ್ಸ್‌ಗಳ ಪಾಲಿಗೆ ಭಾರಿ ಕಮಾಲ್ ಮಾಡಿದೆ.
ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಮಲ್ಟಿಪ್ಲೆಕ್ಸ್‌ಗಳು ₹3,000 ಕೋಟಿ ನಷ್ಟ ಅನುಭವಿಸಿದ್ದವು. ಹೆಚ್ಚಿನ ಅವಧಿಯಲ್ಲಿ ಚಿತ್ರ ಪ್ರದರ್ಶನವೇ ನಡೆದಿರಲಿಲ್ಲ. ಕೆಲವು ಕಾಲ 50ರಷ್ಟು ಮಾತ್ರ ವೀಕ್ಷಕರಿಗೆ ಅವಕಾಶ ನೀಡಿದ್ದರಿಂದಲೂ ನಷ್ಟದ ಪ್ರಮಾಣವೇ ಹೆಚ್ಚಿತ್ತು. ಈಗ ಬಹುತೇಕ ಎಲ್ಲ ನಿರ್ಬಂಧಗಳನ್ನು ಕಿತ್ತು ಹಾಕಲಾಗಿದೆ. ಒಳ್ಳೊಳ್ಳೆಯ ಸಿನಿಮಾಗಳೂ ಬರುತ್ತಿವೆ. ಹೀಗಾಗಿ ಮಲ್ಟಿಪ್ಲೆಕ್ಸ್‌ಗಳು ಮತ್ತೆ ಲಕಲಕ ಎನ್ನುತ್ತಿವೆ. . 2023ರ ಆರ್ಥಿಕ ವರ್ಷ ಮಲ್ಟಿಪ್ಲೆಕ್ಸ್‌ಗಳಿಗೆ ಲಾಭದಾಯಕವಾಗಲಿದೆ. ಈ ವರ್ಷ ಸುಮಾರು ₹14,500-₹15,500 ಕೋಟಿ ಆದಾಯ ಗಳಿಸುವ ಸಾಧ್ಯತೆಯಿದೆ ಎಂದು ಮಲ್ಟಿಪ್ಲೆಕ್ಸ್ ಒಕ್ಕೂಟದ ಅಧ್ಯಕ್ಷ ಕಮಲ್ ಗಿಯಾನ್‌ಚಂದಾನಿ ಹೇಳಿದ್ದಾರೆ.
ಈ ಹಿಂದೆ 2022ರ ಆರ್ಥಿಕ ವರ್ಷದಲ್ಲಿ ಕೋವಿಡ್ ಪ್ರಕರಣ ಕಡಿಮೆಯಾದಾಗ ಮಲ್ಟಿಪ್ಲೆಕ್ಸ್‌ಗಳಿಗೆ ಸ್ವಲ್ಪ ಸಮಾಧಾನವಾಗಿತ್ತು. ಆ ಸಂದರ್ಭದಲ್ಲಿ ಬಿಡುಗಡೆಯಾದ ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಚಿತ್ರದ ಯಶಸ್ಸಿನಿಂದ ಮಲ್ಟಿಪ್ಲೆಕ್ಸ್‌ಗಳಿಗೆ ಹೊಸ ಭರವಸೆ ಮೂಡಿತ್ತು. ಆದರೆ, ಕೊರೊನಾ ಮೂರನೇ ಅಲೆಯಿಂದ ಮಲ್ಟಿಪ್ಲೆಕ್ಸ್‌ಗಳಿಗೆ ಹೊಡೆತ ಬಿತ್ತು. ಈಗ ಥೀಯೇಟರ್‌ಗಳು ಸಂಪೂರ್ಣ ತೆರದು, ಜನರು ಚಿತ್ರಮಂದಿರಗಳಿಗೆ ಆಗಮಿಸುತ್ತಿರುವ ಕಾರಣದಿಂದ ಮಲ್ಟಿಪ್ಲೆಕ್ಸ್ ಮಾಲೀಕರು ನೆಮ್ಮದಿಯಿಂದ ಇದ್ದಾರೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅವರು ಈ ಪ್ರಮಾಣದ ಕಲೆಕ್ಷನ್ ಮಾಡಲು ಮುಖ್ಯವಾಗಿ ಮೂರು ಕಾರಣಗಳು ಎಂದು ತಿಳಿಸಿದ್ದಾರೆ.
- ಎಲ್ಲಾ ಚಿತ್ರಮಂದಿರಗಳು ಪೂರ್ಣಪ್ರಮಾಣದಲ್ಲಿ ತೆರೆದಿದೆ.
- 2019ರ ಬಳಿಕ ಇದೇ ಮೊದಲ ಬಾರಿಗೆ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. 22 ತಿಂಗಳ ಬಳಿಕ 20%ರಷ್ಟು ಹೆಚಿಸಲಾಗಿದೆ.
- ಟಿಕೆಟ್ ದರ ಹೆಚ್ಚಾದರೂ ಥಿಯೇಟರ್‌ಗೆ ಆಗಮಿಸುವವರ ಸಂಖ್ಯೆ 6-7%ರಷ್ಟು ಅಧಿಕವಾಗಿದೆ.
ಈ ಕಾರನದ ಜತೆಗೆ ಬಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳು ಬಿಡುಗಡೆಯಾಗಿದ್ದು ಮಲ್ಟಿಪ್ಲೆಕ್‌ಗೆ ಹೆಚ್ಚಿನ ಬಲ ಬಂದಂತಾಯಿತು. ಮಾರ್ಚ್‌ನಲ್ಲಿ ಬಿಡುಗಡೆಯಾದ ಕಾಶ್ಮೀರ್ ಫೈಲ್ಸ್, ಗಂಗೂಬಾಯಿ ಕಠಿಯಾವಾಡಿ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸಿನಿಮಾಗಳು. ಅಲ್ಲದೆ, ಆರ್‌ಆರ್‌ಆರ್ ಸಿನಿಮಾ ₹1,133 ಕೋಟಿ ಹಣ ಬಾಚಿತ್ತು. ಈ ಟ್ರೆಂಡ್ ಏಪ್ರಿಲ್ ತಿಂಗಳಿಗೂ ಮುಂದುವರಿದು ಕೆಜಿಎಫ್ 2 ಚಿತ್ರ ಸುಮಾರು ₹1,185ಕೋಟಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: KGF Collection | ಅರ್ಧ ಸಾವಿರ ಕೋಟಿ ದಾಟಿದ ಗಳಿಕೆ: ರಾಕಿಭಾಯ್ ದಾಖಲೆ !